ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ಸ್ ಡೇ ಬಂದಾಗ ರೊಮ್ಯಾಂಟಿಕ್ ಫೀಲಿಂಗ್ ಕೊಡುವ ದೃಶ್ಯಗಳೇ ನಮ್ಮನ್ನು ಪುಳಕಗೊಳಿಸುತ್ತವೆ. ಪ್ರೇಮಿಗಳ ದಿನ ಯಾರಿಗೆ ಇಷ್ಟ ಇಲ್ಲ ಹೇಳಿ? ಈಗಿನ ಕಾಲದ ಯುವ ಜನಾಂಗಕ್ಕೆ ಬೇರೆ ಯಾವ ಹಬ್ಬ ಆಚರಿಸದಿದ್ದರೂ ಪರ್ವಾಗಿಲ್ಲ, ವ್ಯಾಲೆಂಟೈನ್ಸ್ ದಿನ ಎಂದರೆ ಅದನ್ನು ಒಂದಲ್ಲ ಒಂದು ರೀತಿಯಲ್ಲಿ ಆಚರಿಸಲೇ ಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಈ ದಿನವೆಂದರೆ ಎಲ್ಲಿಲ್ಲದ ಹಿಗ್ಗು. ಹದಿಹರೆಯದ ವಯಸ್ಸಲ್ಲಿನ ವಯೋ ಸಹಜ ಆಕರ್ಷಣೆಗಳು, ಪ್ರೀತಿ ಅರಳುವ, ಅರಳಿಸುವ ಮನಸ್ಸುಗಳು ಈ ದಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕಾಗಿ ಕಾತರದಿಂದ ಕಾಯುತ್ತಿರುತ್ತವೆ.