ಯೋಗರಾಜ್ ಭಟ್ಟರ ಸಿನಿಮಾ 'ಪ್ರೀತಿ'

ತುಂಬಾ ಪ್ರೀತಿಸುವ ವಯಸ್ಸಿನಲ್ಲಿ ಹುಡುಗರಿಗೆ ಓದು ಅಂತೀವಿ. ಆಗ ಅದೂ ಆಗಲ್ಲ. ತುಂಬಾ ಬೇಡದಿರುವ ಟೈಮ್ಗೆ ಎರಡನೇ ಹುಡುಗಿ ಬರ್ತಾಳೆ. ತುಂಬಾ ಬೇಕಾದಾಗ...
ಯೋಗರಾಜ್ ಭಟ್ , ನಿರ್ದೇಶಕರು
ಯೋಗರಾಜ್ ಭಟ್ , ನಿರ್ದೇಶಕರು
Updated on
ಯೋಗರಾಜ್ ಭಟ್ ಜತೆ ಸಂದರ್ಶನ
1. ಸಿನಿಮಾಗಳಲ್ಲಿ  ಪ್ರೇಮ ಕತೆ ಹೇಳುವುದರ ಸವಾಲು ಏನು?
ಪ್ರೇಮಕತೆ ಹೇಳುವ ಸವಾಲು ಅಂದ್ರೆ ಅದರಲ್ಲಿ ಪ್ರೇಮ ಅಥವಾ ಪ್ರೇಮಿಗಳಿಬ್ಬರೂ ಯಾಕೆ ಬೇರೆ ಆಗ್ತಾರೆ ಎಂಬುದಕ್ಕೆ ಹೊಸ ಕಾರಣ  ಸಿಗುವುದಿಲ್ಲ. ಅವರಿಬ್ಬರ ಪ್ರೇಮ, ದೂರವಾಗುವುದು, ಅವರ ವಿರಹಕ್ಕೆ ಅವರ  ನಡುವಿನ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಗೆ ಸರಿಯಾದ ಕಾರಣಗಳು ಸಿಗಲ್ಲ. ಇರುವುದೇ ನಾಲ್ಕೈದು ಕಾರಣಗಳು ಎಲ್ಲವನ್ನೂ ಬಳಸಿಯಾಗಿದೆ.  ಅವರ ನಡುವೆ  ಮೂರನೇ ವ್ಯಕ್ತಿ ಅಥವಾ ಮೂರನೇ ಹುಡುಗಿ ಬರುವುದು, ಇದೇ ತುಂಬಾ  ಚರ್ವಿತ ಚರ್ವಣ ಆಗಿ ಬಿಟ್ಟಿದೆ. ಇದನ್ನೆಲ್ಲಾ ದಾಟುವುದು ಹೇಗೆ ಅಂತ ತುಂಬಾ ತಲೆನೋವು ಬರುತ್ತದೆ.
2.ಅದಕ್ಕಾಗಿ ನೀವು ನಡೆಸುವ ಪೂರ್ವ ಸಿದ್ಧತೆಗಳೇನು?
ನಾನು ಪಾತ್ರಗಳನ್ನು ಜೋರು ಮಾಡಿಕೊಂಡು ಬಿಡುತ್ತೇನೆ.  ಇದೆಲ್ಲೋ ಬಂದಿದೆ,  ಇದು ಎಲ್ಲೋ ಕೇಳಿದಂಗಿದೆ  ಎಂದು ಅನಿಸಿದರೆ  ಅದನ್ನೆಲ್ಲಾ ಕಿತ್ತಾಕ್ತಾ ಬರ್ತೀನಿ. ಹಾಗೆ ಕಿತ್ತಾಕ್ತಾ ಕಿತ್ತಾಕ್ತಾ ಏನೋ ಒಂದು ಅವತಾರ ಆಗುತ್ತದೆ . ಆ ಅವತಾರವನ್ನು ಚೆನ್ನಾಗಿ ಯೋಚನೆ ಮಾಡಿ, ಇನ್ನೊಂದಷ್ಟು ಸೇರಿಸಿ ಹಾಡು ಎಲ್ಲ ತುಂಬ ಹೊಸದಾಗಿ ಸೇರಿಸಿ ಪ್ರೆಸೆಂಟ್ ಮಾಡ್ತೀನಿ
3.ಸಿನಿಮಾದಲ್ಲಿ ಲವ್ ಇರಲೇ ಬೇಕು. ಅಲ್ಲಿ ಜಾತಿ ಮತ  ಯಾವುದೇ ಅಡ್ಡ ಬಾರದೆ ಪ್ರೇಮಿಗಳು ಒಂದಾಗಬೇಕು. ಒಟ್ಟಿನಲ್ಲಿ ಹ್ಯಾಪಿ ಎಂಡಿಂಗ್ ನೋಡಲು ಜನ ಇಷ್ಟ ಪಡುತ್ತಾರೆ .  ಅಂಥಾ ಸಿನಿಮಾಗಳು ಗೆಲ್ಲುತ್ತವೆ, ವರ್ಷಗಳಿಂದಲೂ ಇಂಥಾ ಸಿನಿಮಾಗಳೇ ಹಿಟ್ ಆಗಿದ್ದು. ಆದರೆ ನಿಜ ಜೀವನದಲ್ಲಿ ಇದು ಸಾಧ್ಯವಾಗುವುದಿಲ್ಲ. ಹಾಗಾದರೆ ಲವ್ ಅನ್ನೋದು ಮಾರಾಟದ ವಸ್ತು ಆಗಿದೆಯೇ?
ಹೌದು.  ಭಾರತದಲ್ಲಿ ಈ ಪ್ರೇಮ ಮತ್ತು ಕಾಮ ಸಂಬಂಧಿ ಸಮಾಚಾರಗಳು  95 ಪ್ರತಿಶತ ನಿನಿಮಾದ ಅಕ್ಷಯ ಪಾತ್ರೆ. ಕಾರಣ ಇಲ್ಲಿ ಪ್ರೇಮ ಆಗಲ್ಲ . ಪ್ರೇಮ ಆದರೂ ಅದು ಅವರಿಗೆ ಸಿಗಲ್ಲ. ತುಂಬಾ ಪ್ರೀತಿಸುವ ವಯಸ್ಸಿನಲ್ಲಿ ಹುಡುಗರಿಗೆ ಓದು ಅಂತೀವಿ. ಆಗ ಅದೂ ಆಗಲ್ಲ. ತುಂಬಾ ಬೇಡದಿರುವ ಟೈಮ್ಗೆ  ಎರಡನೇ ಹುಡುಗಿ ಬರ್ತಾಳೆ. ತುಂಬಾ ಬೇಕಾದಾಗ ಮೂರನೆಯವಳ ಜತೆ ಮದುವೆಯಾಗುತ್ತಾರೆ. ಈ ಎರಡೂ ಹಳೇ ಕತೆಗಳನ್ನು ಏನು ಮಾಡುವುದು ಎಂದು ಗೊತ್ತಾಗಲ್ಲ ಅವಕ್ಕೆ. ಅತ್ಲಾಗೆ ಆ ಕಡೆಯಲ್ಲೂ ಹುಡುಗಿಗೇ ಅದೇ ರೀತಿ ಆಗಿರುತ್ತೆ. ಎಲ್ಲ ಈ ಸಮಾಜದಲ್ಲಿ ಶುರುವಾಗಿ 15  ವರ್ಷ ಆಯ್ತು. ನಗರೀಕರಣದ ಸೈಡ್ ಇಫೆಕ್ಟ್ . ಸೋ, ಒಂದು ಹುಡುಗ ಮತ್ತು ಒಂದು ಹುಡುಗಿನ ಕಳಕ್ಕೊಳ್ಳುವುದು  ಫಿಲಾಸಫಿಕಲ್ ಅಷ್ಟೇ. ಇವತ್ತು ನಿನ್ನೆ ಅಂತಲ್ಲ, ಸಾರ್ವ ಕಾಲಿಕವಾಗಿ   ಇಲ್ಲಿ ಪ್ರೇಮ ಮತ್ತು ಅದಕ್ಕೆ  ಸಂಬಂಧಿಸಿದ   ವಿಚಾರಗಳು ತುಂಬಾ ಸೇಲೆಬಲ್ ಆಗುವುದ್ಕೆ ಕಾರಣ ಏನೂ ಅಂದ್ರೆ ನಿಜ ಜೀವನದಲ್ಲಿ ಆಗುತ್ತಿರುವ ಸಂಗತಿಗಳು. ಇದು ಸಿನಿಮಾದೊಂದಿಗೆ  ಕನೆಕ್ಟ್ ಆಗುತ್ತದೆ . ಇದೇ ಸಿನಿಮಾದ ಬೆನ್ನೆಲುಬು ಕೂಡ.
4.ನಿಮ್ಮ ಸಿನಿಮಾದಲ್ಲಿ ಪ್ರೇಮವೇ ಮುಖ್ಯ ವಸ್ತು. ಏನು ಹೇಳಬೇಕಿದ್ದರೂ ಅವರ ಮೂಲಕವೇ ಹೇಳುತ್ತೀರಿ. ಅದ್ಯಾಕೆ ಹಾಗೆ?
ಹೆಚ್ಚು  ರಿಲೇಟ್ ಆಗುವುದು ಅದೇ. ಸಿನಿಮಾ ಬಂದಾಗ 50, 60 ದಾಟಿದವರು ಥಿಯೇಟರ್ ಮುಂದೆ ಕ್ಯೂ ನಿಲ್ಲಲ್ಲ ಅಲ್ವಾ.  ಅವರಿಗೆ ಟಿವಿ, ಚಾನೆಲ್ ಇದೆ.  ಬಿಪಿ ಶುಗರ್ ಇದ್ರೆ ಕೇರ್ ಮಾಡುವುದು ಹೇಗೆ ಎಂಬುದನ್ನು ಟೀವಿಯವರೇ ಹೇಳ್ತಾರೆ,  ಪತ್ರಿಕೆಗಳು ಬರೆಯುತ್ತವೆ. ಅವರಿಗೆ ಪ್ಯಾರಲಲ್  ಮನರಂಜನೆ ಎಲ್ಲೋ ಒಂದು ಕಡೆ ಸಿಕ್ಕಿಯೇ ಸಿಗುತ್ತದೆ.  ಚಿತ್ರ ಮಂದಿರಕ್ಕೆ ಬಂದು ಕ್ಯೂ ನಿಲ್ಲುವವರು ಯುವಕರೇ ಆಗಿರುವುದರಿಂದ ಎಲ್ಲ ಸಿನೆಮಾ ಮೇಕರ್ಸ್ ಗಳು ಯಾವುದೇ ಆಕ್ಷನ್ ಕತೆ ಇದ್ರೂ ಅದರಲ್ಲೊಂದು ಲವ್ ಸ್ಟೋರಿ ಹೇಳಿ ಬಿಡ್ತಾರೆ.  ಅಂದ್ರೆ ಅದು ಕಮರ್ಷಿಯಲ್ ಪ್ಯಾರಾಮೀಟರ್ ಗೆ ಒಳಪಡುತ್ತದೆ. ಇಲ್ಲಿ ಹುಡುಗ ಮತ್ತು ಹುಡುಗಿಯ ಕನೆಕ್ಷನ್  ಮುಖ್ಯವಾಗುತ್ತದೆ. ಆದ್ದರಿಂದ   ಶೇ. 90 ಕತೆಗಳು ಪ್ರೇಮಕತೆಗಳಾಗಿರುತ್ತವೆ. ಇನ್ನು ಶೇ. 10 ರಲ್ಲಿ ಬೇರೆ ಬೇರೆ ರೀತಿಯ ಪ್ರಯೋಗಾತ್ಮಕ ಕತೆಗಳು ನಡೆಯುತ್ತವೆ. ಶಾಸ್ತ್ರೀಯವಾಗಿ ಬೇರೆ ಬೇರೆ ಮಜಲುಗಳನ್ನು ಎಕ್ಸ್ ಪ್ಲೋರ್ ಮಾಡುವ  ಸಿನಿಮಾಗಳೂ ಇರುತ್ತವೆ.   ಆದರೆ ಅವು ಮುಖ್ಯವಾಹಿನಿಗಳಲ್ಲಿ ಇಲ್ಲ ಎಂದು ಅನಿಸಿ ಬಿಡುತ್ತದೆ.   ಹಾಗೆ ಯಾವುದೂ ಮುಖ್ಯ ವಾಹಿನಿಗೆ ಬಂದದ್ದೂ ಇಲ್ಲ.   ಇನ್ನು ಪ್ರೇಮಕತೆಯನ್ನೇ ಆರಿಸಿಕೊಳ್ಳುವುದಕ್ಕೆ ಮುಖ್ಯಕಾರಣ, ಜನರನ್ನು, ಯುವ ಜನಾಂಗವನ್ನು  ಕನೆಕ್ಟ್ ಮಾಡುವ ಉದ್ದೇಶ. ಓಪನಿಂಗ್ ವೀಕ್ ಗೆ ಒಂದಷ್ಟು ಜನ ಬಂದ್ಮಿಡ್ತಾರೆ  ಥಿಯೇಟರ್ ಗೆ ಅನ್ನುವುದು ..ಇದು ಭಾಗಶಃ ಸತ್ಯ, ಭಾಗಶಃ ಭ್ರಮೆ.
-ರಶ್ಮಿ ಕಾಸರಗೋಡು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com