ನಮ್ಮ ಕಾಲದಲ್ಲಿ ಪ್ರೀತಿ ಅದೆಷ್ಟು ಚೆನ್ನಾಗಿತ್ತು. ಈಗಿನ ಜನರಿಗೆ ಪ್ರೀತಿ ಎಂದರೆ ಬರೀ ಖಯಾಲಿ ಎಂದು ಗೊಣಗುವವರನ್ನು ನೀವು ನೋಡಿರಬಹುದು. ನಿಜ, ಪ್ರೀತಿಯನ್ನು ಅಭಿವ್ಯಕ್ತಿ ಪಡಿಸುವ ರೀತಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಈಗ ಕದ್ದು ಮುಚ್ಚಿ ಪ್ರೀತಿಸುವ ಪ್ರೇಮಿಗಳು ವಿರಳ. ಪ್ರೇಮಪತ್ರದ ಬದಲು ವಾಟ್ಸಾಪ್‌ನಲ್ಲಿ ಒಂದು ಸಂದೇಶ ಕಳಿಸಿದರೆ ಮುಗೀತು! ಮದುವೆ ಆಗುವ ಮುನ್ನ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡಿದ್ದ ಪ್ರೇಮಿಗಳು ಮದುವೆಯಾದ ನಂತರ ಇನ್ನೇನು ಆಚರಣೆ ಎಂದು ಸುಮ್ಮನಾಗಿ ಬಿಡುತ್ತಾರೆ. ಮದುವೆಯಾದ ನಂತರ ಪ್ರೀತಿ ಮಾಡುವುದಾ? ಅದಕ್ಕೆಲ್ಲಿದೆ ಸಮಯ ಎಂದು ಮರುಪ್ರಶ್ನೆ ಹಾಕುವವರು ಇಲ್ಲಿ ಕೇಳಿ...ಎಲ್ಲವೂ ನಮ್ಮ ಆದ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಯಾವುದು ಬೇಕು ಬೇಡ ಎಂದು ನಿರ್ಧರಿಸುವವರು ನಾವೇ. ಹೀಗಿರುವಾಗ ಒಂದಷ್ಟು ಹೊತ್ತು ಆ ಹಳೇ ಪ್ರಣಯವನ್ನು ಮತ್ತೊಮ್ಮೆ ಆಸ್ವಾದಿಸುವ ಸನ್ನಿವೇಶವನ್ನು ನಾವೇ ಯಾಕೆ ಸೃಷ್ಟಿ ಮಾಡಬಾರದು?