ಪ್ರೇಮ ಕಥೆ ಮುಂದುವರಿಯುತ್ತದೆ, ಬ್ರೇಕಪ್‌ನ ನಂತರ

ಹಳೇ ಪ್ರೇಮಿಯ ಹೆಸರಿರುವ ವ್ಯಕ್ತಿ ಅಥವಾ ಆತನ ಹೆಸರಿರುವ ಅಂಗಡಿಯ ಬೋರ್ಡ್ ಕಂಡರೂ ಮನಸ್ಸು ರಿವೈಂಡ್ ಬಟನ್ ಅದುಮಿ ಬಿಡುತ್ತದೆ. ಆ ಹಳೆಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಇಷ್ಟು ವರ್ಷ ನೀನೇ ನನ್ನ ಜೀವ... ನೀನಿಲ್ಲದೆ ನಾನಿಲ್ಲ ಎಂದು ಹೇಳುತ್ತಿದ್ದ ಹುಡುಗಿ ಅದೊಂದು ದಿನ ಮದುವೆ ನಿಶ್ಚಯವಾಯ್ತು...ನನ್ನ ಮರೆತು ಬಿಡು. ನನಗಿಂತ ಒಳ್ಳೆಯ ಹುಡುಗಿ ನಿನಗೆ ಸಿಗ್ತಾಳೆ ಎಂದು ಹೇಳಿ ಹೊರಟೇ ಹೋಗಿ ಬಿಟ್ಟಳು. ಹುಡುಗ ಹಳೇ ಪ್ರೇಯಸಿಯ ನೆನಪಲ್ಲೇ ಕೊರಗಿ ಬಾರ್ ದಾರಿ ಹಿಡಿಯುತ್ತಾನೆ. ಇತ್ತ ಹುಡುಗನೊಬ್ಬ ಕೈಕೊಟ್ಟ ಎಂದು ಹುಡುಗಿ ಅಳುತ್ತಾ ಕೂತು, ಆತನ ಬಗ್ಗೆ ತನ್ನ ಗೆಳತಿಯರ ಮುಂದೆ ಹೇಳಿ ತನ್ನೊಳಗಿನ ಸಿಟ್ಟು, ದುಃಖವನ್ನು ಹೊರಗೆ ಹಾಕುತ್ತಾಳೆ.

ಇತ್ತೀಚೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬ್ರೇಕ್ ಅಪ್ ಆಗಿರುವುದು ಸುದ್ದಿಯಾಯ್ತು. ಅವರೆಲ್ಲಾ ಸೆಲೆಬ್ರಿಟಿಗಳು..ಅದೊಂದು ಮುಗಿದ ಅಧ್ಯಾಯ ಎಂದು ತಮ್ಮ ತಮ್ಮ ದಾರಿ ಹಿಡಿದರು. ಆದರೆ ಸಾಮಾನ್ಯ ವ್ಯಕ್ತಿಗೆ ಈ ಬ್ರೇಕ್‌ಅಪ್ ಅನ್ನುವುದು ಒಂದಷ್ಟು ಕಾಲದವರೆಗೆ ದೊಡ್ಡ ಆಘಾತವೇ ಆಗಿರುತ್ತದೆ.

ಅದೊಂದು ಸಮಯದಲ್ಲಿ ಅವನ/ಅವಳ ನೆನಪಲ್ಲಿ ಕಣ್ಣೀರು ಸುರಿಸಿ ಸುರಿಸಿ ಸಾಕಾಗಿರುತ್ತದೆ. ಆಮೇಲೆ ಸಹಜ ಸ್ಥಿತಿಗೆ ಬಂದರೂ ಮನಸ್ಸಿನಿಂದ ಆ ಹಳೇ ಪ್ರೇಮಿಯ ಹೆಸರು ಅಳಿಸಲು ಸಾಧ್ಯವಾಗುವುದೇ ಇಲ್ಲ. ಹಳೇ ಪ್ರೇಮಿಯ ಹೆಸರಿರುವ ವ್ಯಕ್ತಿ ಅಥವಾ ಆತನ ಹೆಸರಿರುವ ಅಂಗಡಿಯ ಬೋರ್ಡ್ ಕಂಡರೂ ಮನಸ್ಸು ರಿವೈಂಡ್ ಬಟನ್ ಅದುಮಿ ಬಿಡುತ್ತದೆ. ಆ ಹಳೆಯ ನೆನಪುಗಳು ಮತ್ತೆ ಮನಸ್ಸನ್ನು ಕಾಡುತ್ತವೆ. ನಮ್ಮ ಎಕ್ಸ್ ಈಗ ಹೇಗಿರಬಹುದು? ಎಂಬ ಕುತೂಹಲ. ಆತ ನಮ್ಮ ಪರಿಸರದಲ್ಲೇ ಇದ್ದರೆ ಆತನನ್ನು ನೋಡಿಯೂ ನೋಡದಂತೆ ಮಾಡುವ ನಾವು ಇನ್ಯಾರೋ ಮೂಲಕ ಆತನು ಅಪ್‌ಡೇಟ್‌ಗಳನ್ನು ತಿಳಿದುಕೊಂಡಿರುತ್ತೇವೆ. ಆತನೂ ಅಷ್ಟೇ, ತನ್ನ  ಹಳೇ ಹುಡುಗಿಯ ಎಲ್ಲ ಚಲನ ವಲನಗಳನ್ನು ಗಮನಿಸುತ್ತಾ ಇರುತ್ತಾನೆ.

ಇದು ಅಕ್ಕಪಕ್ಕದಲ್ಲಿದ್ದವರ ಕತೆ. ಈಗ ಯಾರದ್ದೇ ಆಗಲಿ, ದೈನಂದಿನ ಆಗುಹೋಗುಗಳ ಬಗ್ಗೆ ಅರಿಯಲು ಸಾಮಾಜಿಕ ತಾಣಗಳಿವೆಯಲ್ಲಾ. ಮನೆ ಮಾಲೀಕ ಬಾಡಿಗೆಗಿದ್ದವರ ಮನೆಗೆ ಬಂದು ಆಗಾಗ ಎಲ್ಲವೂ ಸರಿಯಿದೆ ತಾನೇ? ಏನಾದರೂ ಡ್ಯಾಮೇಜ್ ಆಗಿದೆಯಾ? ಎಂದು ನೋಡಿಕೊಂಡು ಹೋಗುವ ಹಾಗೆ ಬ್ರೇಕಪ್ ಆದರೂ ವ್ಯಕ್ತಿಗಳು ಸಾಮಾಜಿಕ ತಾಣಗಳಲ್ಲಿ ತಮ್ಮ ಎಕ್ಸ್ ನ ಮಾಹಿತಿಯನ್ನು ಆಗಾಗ ಹುಡುಕುತ್ತಿರುತ್ತಾರಂತೆ. ಅವನಿಗೆ ಹೊಸ ಹುಡುಗಿ ಸಿಕ್ಕಿದ್ಳಾ? ಅವಳಿಗೆ ಮದುವೆ ಆಯ್ತಾ? ಎಲ್ಲ ಅಪ್‌ಡೇಟ್‌ಗಳ ಬಗ್ಗೆ ಹುಡುಗ/ ಹುಡುಗಿಯರು ಕುತೂಹಲಿಗಳಾಗಿರುತ್ತಾರೆ. ಹಾಗಂತ ಎಷ್ಟು ದಿನ ಕೊರಗಿಕೊಂಡು ಕುಳಿತುಕೊಳ್ಳುವುದು? ಲೈಫ್ ಮುಂದೆ ಸಾಗಲೇ ಬೇಕು...

ಬ್ರೇಕಪ್ ನಂತರ

ಬ್ರೇಕಪ್ ಆದ ಕೂಡಲೇ ಎಂಥವರೂ ಕುಗ್ಗಿಹೋಗುತ್ತಾರೆ. ಆ ಹೊತ್ತಲ್ಲಿ ಅವರಿಗೆ ಸಾಂತ್ವನ ಮತ್ತು ಸಾನಿಧ್ಯ ಅತೀ ಅಗತ್ಯ. ದುಃಖ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡವರ ಕಥೆಗಳೇನೂ ಕಮ್ಮಿ ಇಲ್ಲ. ಆದರೆ ಬ್ರೇಕಪ್ ಆಯ್ತು ಎಂದರೆ ಜೀವನವೇ ಮುಗಿದು ಹೋಯಿತು ಎಂದು ಅಂದುಕೊಳ್ಳುವುದು ಬೇಡ. ಪ್ರತಿಯೊಂದು ದಾರಿಯಲ್ಲಿಯೂ ಏರು ತಗ್ಗುಗಳು  ಅಡೆ ತಡೆಗಳು ಇದ್ದೇ ಇರುತ್ತವೆ. ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ ಹೀಗಿರುವಾಗ ಕಳೆದು ಹೋದ ಕಾಲವನ್ನು ನೆನೆಯುತ್ತಾ ಕೂತರೆ ನಮ್ಮ ಇಂದಿನ ದಿನಗಳು ನಷ್ವಾಗುತ್ತದೆ. ಕಾಲ ಮರಳಿ ಬರುವುದಿಲ್ಲ ಎಂದು ಗೊತ್ತಿರುವಾಗ ಹಳೆಯ ನೆನಪುಗಳನ್ನೆಲ್ಲಾ ಪಕ್ಕಕ್ಕಿಟ್ಟು ಮುನ್ನಡೆಯುವುದು ಲೇಸು.

ಇನ್ನು ಕೆಲವರು ಬ್ರೇಕಪ್ ಆದ ಕೂಡಲೇ ಆ ನೋವಿನಿಂದ ಹೊರಬರಲು ಇನ್ಯಾರೊಂದಿಗೂ ಸುಲಭವಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಕೆಲವೊಂದು ಸಲ ಅಲ್ಲಿ ಸರಿಯಾದ ಸಂಗಾತಿಯೂ ಸಿಗಬಹುದು, ಸಿಗದಿರಲೂ ಬಹುದು. ಜೀವನ ಪ್ರೀತಿ ಎಂಬುದು ಸದಾ ಹರಿಯುತ್ತಲೇ ಇರುತ್ತದೆ. ಇನ್ನೊಬ್ಬರಿಂದ ಪ್ರೀತಿಯನ್ನು ಬಯಸುವ ಮುನ್ನ ನಿಮ್ಮನ್ನು ನೀವೇ ಪ್ರೀತಿಸುತ್ತಾ ಹೋಗಿ. ನಿಮಗಿಷ್ಟವಾದ ಕೆಲಸಗಳನ್ನು ಮಾಡುತ್ತಾ ಖುಷಿಯ ಕ್ಷಣಗಳನ್ನು ಅನುಭವಿಸಿ. ಆಫ್ಟರ್ ಆಲ್, ನಮ್ಮ ಖುಷಿ ಮತ್ತು ನೋವುಗಳನ್ನು ಯಾರೊಂದಿಗೆ ಹಂಚಿಕೊಂಡರೂ ಅದರ ಸುಖ ಮತ್ತು ದುಃಖವನ್ನು ಅನುಭವಿಸುವವರು ನಾವೇ ಆಗಿರುತ್ತೇವೆ. ಬ್ರೇಕಪ್ ಆದರೇನಂತೆ, ಅದೊಂದು ಜೀವನ ಪಾಠ ಎಂದರಿತು ಮುಂದೆ ಸಾಗಬೇಕು. ಜೀವನದಲ್ಲಿ ಸಾಧಿಸುವುದಕ್ಕೆ ಎಷ್ಟೋ ಕೆಲಸಗಳು ಬಾಕಿ ಇರುವಾಗ ನಮ್ಮನ್ನು ಬಿಟ್ಟುಹೋದವರ ಬಗ್ಗೆ ನೆನೆದು ನಮ್ಮ ಜೀವನದ ಕ್ಷಣಗಳನ್ನು ವ್ಯರ್ಥ ಮಾಡುವುದೇಕೆ?

Move On..ಬ್ರೇಕ್ ಅಪ್‌ನ ನಂತರವೂ ಜೀವನ ಮುಂದುವರಿಯುತ್ತದೆ...

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com