ಯೂಟ್ಯೂಬ್ ಬಳಕೆ ಮತ್ತು ಸುರಕ್ಷತೆಗೆ ಟಿಪ್ಸ್

ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅವರೇ ಇಮೇಲ್ ಐಡಿಗಳನ್ನು ಕ್ರಿಯೇಟ್ ಮಾಡಿಕೊಳ್ಳುತ್ತಾರೆ, ತಮಗೇನು ಬೇಕೋ ಅದನ್ನು ಕದ್ದು ಮುಚ್ಚಿ ನೋಡುತ್ತಾರೆ ನಿಜ. ಆದರೆ....
ಯೂಟ್ಯೂಬ್
ಯೂಟ್ಯೂಬ್
ಆನ್‌ಲೈನ್ ಸುರಕ್ಷತೆಯ ಬಗ್ಗೆ ಹೇಳುವಾಗ ಯುಟ್ಯೂಬ್ ಬಳಕೆಯ ಬಗ್ಗೆ ಹೇಳದೇ ಇದ್ದರೆ ಆ ವಿಷಯ ಅಪೂರ್ಣ ಎಂದೆನಿಸುತ್ತದೆ. ಯಾಕೆಂದರೆ ಆನ್ ಲೈನ್‌ನಲ್ಲಿ ಯಾವುದೇ ವಿಷಯವನ್ನು ಸರ್ಚ್ ಮಾಡುವಾಗ ಥಟ್ಟನೆ ಗಮನ ಸೆಳೆಯುವಂತವುಗಳು ಯೂಟ್ಯೂಬ್ ವೀಡಿಯೋಗಳೇ ಆಗಿವೆ. ಅದರಲ್ಲೂ ಮಕ್ಕಳು ಯುಟ್ಯೂಬ್ ವೀಡಿಯೋಗಳನ್ನು ನೋಡುತ್ತಿದ್ದರೆ ಹೆಚ್ಚಿನ ಗಮನ ಹರಿಸಲೇ ಬೇಕು. ಒಂದು ವೀಡಿಯೋ ವೀಕ್ಷಿಸಿದ ಕೂಡಲೇ ಯೂಟ್ಯೂಬ್ ಅಂಥದ್ದೇ ವೀಡಿಯೋಗಳನ್ನು ನೋಡುವಂತೆ ರೆಕಮೆಂಡ್ ಮಾಡುತ್ತಿರುತ್ತದೆ. ಅಷ್ಟೇ ಅಲ್ಲ, ವೀಡಿಯೋದಲ್ಲಿ ಕಾಣುವ ಪ್ರಚೋದನಾಕಾರಿ ಬ್ಯಾನರ್‌ಗಳು ಕೂಡಾ ಕುತೂಹಲ ಹುಟ್ಟಿಸಿ ವೀಡಿಯೋ ವೀಕ್ಷಿಸಲು ಪ್ರೇರೇಪಿಸುತ್ತವೆ. ಹೀಗಿರುವಾಗ ಯುಟ್ಯೂಬ್ ಬಳಕೆ ಮತ್ತು ಅಲ್ಲಿ ಯಾವ ರೀತಿಯ ಸುರಕ್ಷತಾ ಮಾರ್ಗಗಳನ್ನು ಅನುಸರಿಸಬೇಕೆಂಬುದನ್ನು ತಿಳಿಯೋಣ
1. ಫ್ಯಾಮಿಲಿ ಅಕೌಂಟ್ ಸೆಟ್ ಮಾಡಿ
ಮಕ್ಕಳು ಮನೆಯಲ್ಲಿ ಯುಟ್ಯೂಬ್ ಬಳಸುತ್ತಿದ್ದರೆ ಹೆಚ್ಚಿನ ಗಮನವಹಿಸಿ. ಯುಟ್ಯೂಬ್ ಬಳಕೆ ಮಾಡುವಾಗ ಶೇರ್ ಮಾಡಲ್ಪಟ್ಟ ಗೂಗಲ್ ಅಕೌಂಟ್ ಇದ್ದರೆ ಒಳ್ಳೆಯದು. ಅಂದರೆ ನಿಮ್ಮ ಮಕ್ಕಳ ಗೂಗಲ್ ಅಕೌಂಟ್ ನಿಮ್ಮ ಗೂಗಲ್ ಅಕೌಂಟ್‌ನೊಂದಿಗೆ ಶೇರ್ ಆಗಿರಲಿ. ಹೀಗೆ ಮಾಡುವ ಮೂಲಕ ಮಕ್ಕಳು ಯೂಟ್ಯೂಬ್‌ನಲ್ಲಿ ಏನನ್ನು ನೋಡುತ್ತಾರೆ, ಏನನ್ನು ಶೇರ್ ಮಾಡುತ್ತಾರೆ ಎಂಬುದೂ ನಿಮಗೆ ತಿಳಿಯುತ್ತದೆ. ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅವರೇ ಇಮೇಲ್ ಐಡಿಗಳನ್ನು ಕ್ರಿಯೇಟ್ ಮಾಡಿಕೊಳ್ಳುತ್ತಾರೆ, ತಮಗೇನು ಬೇಕೋ ಅದನ್ನು ಕದ್ದು ಮುಚ್ಚಿ ನೋಡುತ್ತಾರೆ ನಿಜ. ಆದರೆ ಮನೆಯಲ್ಲಿ ಅವರು ಯಾವುದನ್ನು ನೋಡಬೇಕು, ಯಾವುದನ್ನು ನೋಡಬಾರದು ಎಂಬುದಕ್ಕೆ ಆನ್‌ಲೈನ್‌ನಲ್ಲೇ ಕೆಲವು ವೆಬ್‌ಸೈಟ್ ಅಥವಾ ಕಂಟೆಂಟ್‌ಗಳನ್ನು ಬ್ಲಾಕ್ ಮಾಡುವ ಮೂಲಕ ನಿರ್ಬಂಧ ಹೇರಬಹುದು.
ಯೂಟ್ಯೂಬ್‌ನ ಹೋಮ್‌ಪೇಜ್‌ನ ಕೆಳಗಡೆ ವ್ಯೂ ಹಿಸ್ಟರಿ ಎಂಬ ಆಪ್ಶನ್ ಇದ್ದು, ಈ ಮೂಲಕ ಮಕ್ಕಳು ಏನೆಲ್ಲಾ ನೋಡಿದ್ದಾರೆ ಎಂಬುದನ್ನೂ ತಿಳಿದುಕೊಳ್ಳಬಹುದು.
2. ರೆಸ್ಟ್ರಿಕ್ಟೆಡ್ ಮೋಡ್ ಅಥವಾ ಸೇಫ್ಟಿ ಮೋಡ್ ಆನ್ ಮಾಡಿ 
ಯೂಟ್ಯೂಬ್‌ನಲ್ಲಿ ಎಲ್ಲ ವಿಷಯಗಳು ನೋಡಲು ಸಿಗುತ್ತವೆ ಎಂಬುದು ನಿಜ.  ಆದರೆ ಅದರಲ್ಲಿ ಸೇಫ್ಟಿ ಮೋಡ್ ಎಂಬ ಸೆಟ್ಟಿಂಗ್ ಇದೆ. ಹೋಮ್ ಪೇಜ್‌ನ ಕೆಳಗಡೆ ಸ್ಕ್ರಾಲ್ ಮಾಡುತ್ತಾ ಹೋದರೆ ಅಲ್ಲಿ ಈ ಸೆಟ್ಟಿಂಗ್ ಕಾಣಬಹುದು. ಯೂಟ್ಯೂಬ್ ಚಾನೆಲ್‌ಗೆ ಸೈನ್ ಇನ್ ಆದ ನಂತರ, ಹೋಮ್ ಪೇಜ್ ಕೆಳಗಡೆ ಸ್ಕ್ರಾಲ್ ಮಾಡುತ್ತಾ ಹೋಗಿ ಅಲ್ಲಿ ಲ್ಯಾಂಗ್ವೇಜ್, ಕಂಟ್ರಿ ಬಟನ್ ನಂತರ ರೆಸ್ಟ್ರಿಕ್ಟೆಡ್ ಮೋಡ್ ಎಂಬ ಬಟನ್ ಕಾಣಬಹುದು. ಅದರ ಕೆಳಗೆ ರೆಸ್ಟ್ರಿಕ್ಟೆಡ್ ಮೋಡ್ ಅಂದರೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದ ಟಿಪ್ಪಣಿ ಇರುತ್ತದೆ. ಈ ಟಿಪ್ಪಣಿಯ ಕೆಳಗೆ ಆನ್ ಮತ್ತು ಆಫ್ ಆಪ್ಶನ್ ಇರುತ್ತದೆ. ಅಲ್ಲಿ ಆನ್ ಎಂದು ಕ್ಲಿಕ್ ಮಾಡಿದರೆ ರೆಸ್ಟ್ರಿಕ್ಟೆಡ್ ಮೋಡ್ ಆನ್ ಆಗಿರುತ್ತದೆ.
ರೆಸ್ಟ್ರಿಕ್ಟೆಡ್ ಮೋಡ್ ಯಾಕೆ?
ಮಕ್ಕಳು ಅಶ್ಲೀಲ ಅಥವಾ ಕ್ರೌರ್ಯದ ಸಂಗತಿಗಳನ್ನು ನೋಡದಂತೆ ತಡೆಯಬಹುದು. ಒಂದು ವೇಳೆ ಅಂಥಾ ವಿಷಯಗಳನ್ನು ನೋಡಬೇಕು ಎಂದಿದ್ದರೂ, ಯೂಟ್ಯೂಬ್ ಆ ಸಂಗತಿಗಳನ್ನು  ಡಿಸ್‌ಪ್ಲೇ ಮಾಡುವುದೇ ಇಲ್ಲ. ಕ್ಲಿಕ್ ಮಾಡಿದರೂ ಸ್ಸಾರಿ ಎಂಬ ಮೆಸೇಜ್  ತೋರಿಸುತ್ತದೆ.
3. ಪ್ಲೇ ಲಿಸ್ಟ್ ಕ್ರಿಯೇಟ್ ಮಾಡಿ 
ನಿಮ್ಮ ಮಕ್ಕಳು ಏನು ನೋಡಬೇಕು, ಅವರಿಗೆ ಏನು ಸೂಕ್ತ ಎಂಬುದನ್ನು ಆರಿಸಿ ಪ್ಲೇ ಲಿಸ್ಟ್ ಮಾಡಿ. ಫ್ಯಾಮಿಲಿ ಫ್ರೆಂಡ್ಲಿ ಚಾನೆಲ್‌ಗಳನ್ನು ಸಬ್‌ಸ್ಕ್ರೈಬ್ ಮಾಡಿ. ನಿಮ್ಮ ಪಟ್ಟಿಯಲ್ಲಿ ವಿಡಿಯೋಗಳನ್ನು ಸೇರಿಸುವ ಮುನ್ನ ಸರಿಯಾಗಿ ಚೆಕ್ ಮಾಡಿ.
4. ವೆಬ್ ಫಿಲ್ಟರಿಂಗ್ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ
ಒಂದು ವೇಳೆ ನಿಮ್ಮ ಮಕ್ಕಳು ಸಿಕ್ಕಾಪಟ್ಟೆ ವೀಡಿಯೋಗಳನ್ನು ನೋಡುತ್ತಾರೆ, ನಿಮ್ಮ ಮಾತು ಕೇಳುವುದಿಲ್ಲ ಎಂದಾದರೆ ವೆಬ್ ಫಿಲ್ಟರಿಂಗ್ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ. ಈ ಮೂಲಕ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಿಸಬಹುದು.
5. ವಿಡೀಯೋ ಅಪ್‌ಲೋಡ್ ಮಾಡುವ ಮುನ್ನ ಗಮನಿಸಿ
ಅದೇನೇ ವೀಡಿಯೋವನ್ನು ಅಪ್‌ಲೋಡ್ ಮಾಡುವ ಮುನ್ನ ಅತೀವ ಗಮನ ವಹಿಸಿ. ವಿಡಿಯೋ ಅಪ್‌ಲೋಡಿಂಗ್‌ನಲ್ಲಿ ಡಿಫಾಲ್ಟ್ ಸೆಟ್ಟಿಂಗ್ ಪಬ್ಲಿಕ್ ಎಂದೇ ಇರುತ್ತದೆ . ಮೊದಲು ವೀಡಿಯೋ ಅಪ್‌ಲೋಡ್ ಮಾಡುವಾಗ ಅನ್‌ಲಿಸ್ಟೆಡ್ ಅಥವಾ ಪ್ರೈವೇಟ್ ಎಂಬ ಆಪ್ಶನ್ ಆಯ್ಕೆ ಮಾಡಿ. ಎಲ್ಲವೂ ಸರಿ ಇದೆ ಎಂದಾದರೆ ಮಾತ್ರ ಪಬ್ಲಿಕ್ ಮಾಡಿ. ನೀವು ವೀಡಿಯೋವನ್ನು ಪ್ರೈವೆಟ್‌ಆಗಿಟ್ಟುಕೊಂಡೇ ನಿಮ್ಮ  ಸ್ನೇಹಿತರಿಗೆ ಇಮೇವ್ ಕಳಿಸಿ ವಿಡಿಯೋ ನೋಡುವಂತೆ ಕೇಳಿಕೊಳ್ಳಬಹುದು.
6. ಕಾಮೆಂಟ್‌ಗಳನ್ನು ಆಫ್ ಮಾಡಿ
ಅಪ್‌ಲೋಡ್ ಸ್ಕ್ರೀನ್‌ಲ್ಲಿ ಅಡ್ವಾನ್ಸ್‌ಡ್ ಸೆಟ್ಟಿಂಗ್ ನ್ನು ಆಯ್ಕೆ ಮಾಡಿ. ಇದರಲ್ಲಿ ಕಾಮೆಂಟ್ ಗಳನ್ನು ಮಾಡದೇ ಇರುವಂತೆ  ಆಪ್ಶನ್ ಇದೆ.  ಕಾಮೆಂಟ್ ಮಾಡದಂತಿರುವ ಆಪ್ಶನ್ ಕ್ಲಿಕ್ ಮಾಡಿ.
7. ಅಗತ್ಯಕ್ಕೆ ತಕ್ಕಷ್ಟು ಬಳಕೆ
ಜ್ಞಾನ ವೃದ್ಧಿಸುವುದಕ್ಕೆ ಯೂಟ್ಯೂಬ್ ತುಂಬಾ ಸಹಕಾರಿಯಾಗಿದೆ. ಹಾಗೆಯೇ ಮನರಂಜನೆಗೂ. ಪಠ್ಯ ವಿಷಯಗಳಿಗೆ ಸಂಬಂಧಿಸಿದ ಹಲವಾರು ವೀಡಿಯೋಗಳು ಯುಟ್ಯೂಬ್ ನಲ್ಲಿರುತ್ತವೆ. ಅವುಗಳನ್ನು ನೋಡುವ ಹೊತ್ತಲ್ಲೇ ಅಶ್ಲೀಲ ವೀಡಿಯೋಗಳತ್ತ ಮಕ್ಕಳು ಆಕರ್ಷಿತರಾಗದಂತೆ ನೋಡಿಕೊಳ್ಳಿ.
-ರಶ್ಮಿ ಕಾಸರಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com