

ಬೆಳಕು ಮನೆಗೆ ಅತ್ಯಗತ್ಯ. ಮನೆಯ ಮೂಲೆಯಲ್ಲಿರುವ ಕತ್ತಲು ಜೊತೆಗೆ ಮನದಲ್ಲಿರುವ ಕತ್ತಲನ್ನು ತೊಳೆದು ಹಾಕುತ್ತದೆ ಬೆಳಕು. ಆದರೆ, ಯಾವ ರೀತಿಯ ಬೆಳಕಿದ್ದರೆ ಚೆನ್ನ? ಎಲ್ಲಿ ಯಾವ ಬಣ್ಣದ ಬೆಳಕಿರಬೇಕು? ಯಾವ ಭಾಗದಲ್ಲಿ ಯಾವ ಬಗೆಯ ಬೆಳಕಿದ್ದರೆ ಮನೆ ಆಕರ್ಷಕ?
*ಸ್ವಂತ ಕೋಣೆಯಲ್ಲಿ ಅಥವಾ ಬೆಡ್‌ರೂಮ್‌ನಲ್ಲಿ ಹಸಿರು ಬಣ್ಣದ ಬೆಡ್ ಲ್ಯಾಂಪ್ ಇದ್ದರೆ, ಹೆಚ್ಚು ಆಕರ್ಷಕ. ಆದರೆ, ಗೋಡೆಯ ಬಣ್ಣ ಮಾತ್ರ ಬಿಳಿಯಾಗಿರಬೇಕು. ಸೂರ್ಯೋದಯವಾಗುವ ಭಾಗದ ಗೋಡೆ ತಿಳಿಗೆಂಪಿನಿಂದ ಕೂಡಿರಬೇಕು. ಹೀಗಿದ್ದಲ್ಲಿ ರೂಮ್‌ನಲ್ಲಿ ಹೊಸತನ ಉಂಟು ಮಾಡುತ್ತದೆ.
* ಮನೆಯ ಹಾಲ್‌ನಲ್ಲಿ ಗೋಡೆಯ ಬಣ್ಣ ಸಂಪೂರ್ಣ ಬಿಳಿಯಾಗಿದ್ದರೆ, ಅಲ್ಲಿ ತಿಳಿ ಕೆಂಪಿನ ಮುಚ್ಚಳದ ಚೌಕಾಕಾರದ ಲ್ಯಾಂಪ್ ಇದ್ದರೆ ಚೆನ್ನ. ಅದರ ಮಂದ ಬೆಳಕು ಗೋಡೆ ಬೀಳುವುದರಿಂದ ಹೆಚ್ಚು ಆಕರ್ಷಣೆಯಾಗಿ ಕಾಣುತ್ತದೆ. ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ.
* ಸಣ್ಣಸಣ್ಣ ಕಟ್ಟಿಗೆ ಚೂರುಗಳನ್ನು ಬಳಸಿಕೊಂಡು ಅದನ್ನು ಲ್ಯಾಂಪ್‌ಗೆ ಆಧಾರವಾಗಿ ಬಳಸಬಹುದು. ಅಲ್ಲದೆ, ಇಲ್ಲಿ ಅಳವಡಿಸುವ ಬಲ್ಬ್ ಬಿಳಿ ಬಣ್ಣದ್ದಾಗಿರಲಿ.
* ನಿಮ್ಮ ಮನೆ ಸಂಪೂರ್ಣವಾಗಿ ಜನಪದ ಶೈಲಿಯಲ್ಲಿದ್ದರೆ, ಮಣ್ಣಿನಿಂದ ಮಾಡಿದ ವಿದ್ಯುತ್ ಚಾಲಿತ ಲ್ಯಾಂಪ್ ಅನ್ನೇ ಬಳಸಬಹುದು. ಇದು ರೂಮ್‌ನಲ್ಲಿ ಹೆಚ್ಚು ಅತ್ಯಾಕರ್ಷಕವಾಗಿ ಕಾಣುತ್ತದೆ.
* ಮನೆಯ ಹೊರಗೆ ಅಂದರೆ, ಕೌಂಪೌಂಡ್ ಮೇಲೆ ಲಾಟೀನು ರೀತಿಯ ಲ್ಯಾಂಪ್‌ಗಳೂ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಇವುಗಳು ಕೂಡ ಮನೆಯ ಹೊರಸೌಂದರ್ಯಕ್ಕೆ ಹೆಚ್ಚು ಮೆರುಗು ನೀಡುತ್ತವೆ.
* ಮನೆಯಲ್ಲಿ ನಿಮ್ಮ ಸ್ವಂತ ಕಚೇರಿಯಿದ್ದರೆ ಕಟ್ಟಿಗೆಯಲ್ಲಿಯೇ ಕಲಾಕೃತಿ ಮಾಡಿದ ಲ್ಯಾಂಪ್ ಬಳಸಿ. ಬಲ್ಬ್‌ಗೆ ಚಾಕೋಲೇಟ್ ಬಣ್ಣದ ಮುಚ್ಚಳ ಇದ್ದರೆ, ಅಲ್ಲಿ ಬೀಳುವ ಮಂದ ಬೆಳಕು ಅತ್ಯಾರ್ಷಕವಾಗಿರುತ್ತದೆ.
* ಬಿದಿರಿನಿಂದ ಮಾಡಿದ ಲ್ಯಾಂಪ್ ಕೂಡ ಈಗ ಆಕರ್ಷಣೆಗಳಲ್ಲಿ ಒಂದು. ತೆಳುವಾದ ಬಿದರಿನಿಂದ ಮಾಡಿದ ಈ ಲ್ಯಾಂಪ್ ಅನ್ನು ಹಾಲ್‌ನ ಮೇಲಕ್ಕೆ ನೇತು ಹಾಕಿದರೆ ಉತ್ತಮ. ಅದರಡಿ ಹೊರಸೂಸುವ ಬೆಳಕು ಮನೆಗೆ ಮೆರುಗು ನೀಡುತ್ತದೆ.
* ಸ್ವಾಭಾವಿಕ ಕಟ್ಟಿಗೆಯಿಂದ ತಯಾರಿಸಿರುವ ವೂವೆನ್ ಕಟ್ಟಿಗೆಯ ಸುರುಳಿಯಾಕಾರದ ಉದ್ದನೆಯ ಲ್ಯಾಂಪ್ ಕೂಡ ಮಂದ ಬೆಳಕು ಬೀರಬಲ್ಲದು. ಇದು ಆಂತರಿಕ ವಿನ್ಯಾಸ ಮಾತ್ರವಲ್ಲ, ಬಾಹ್ಯವಿನ್ಯಾಸಕ್ಕೂ ಉಪಯೋಗಿಸಬಹುದು.
-ಬ್ರಹ್ಮಾನಂದ