ಮ್ಯಾನ್‌ಹೋಲ್

ಮ್ಯಾನ್‌ಹೋಲ್
Updated on: 

ಅವಳಿಗೆ ಮದುವೆಯಾದಾಗಿನಿಂದಲೂ ತನಗೆ ಅರ್ಹ ಸಂಗಾತಿ ಇವನಲ್ಲ ಎಂದೆನಿಸುತ್ತಲೇ ಇತ್ತು. ತನ್ನ ಕ್ರಿಯಾಶೀಲತೆ, ಓದಿನ ಆಸಕ್ತಿ ಇವೆಲ್ಲದರಿಂದ ಬಹುದೂರವಿರುವ ಆತನ ಜತೆ ಇಡೀ ಬದುಕನ್ನು ವ್ಯಯಿಸುವ ಹಣೆಬರಹ ತನ್ನದಾಯ್ತಲ್ಲ ಎಂಬ ತೀವ್ರ ನಿರಾಸೆ. ಈಕೆಯ ಕವಿತೆ ಅವನ ಪಾಲಿಗೆ ಅರ್ಥವಾಗದ ಗೀಚಾಟ. ಸಿನಿಮಾಗಳಲ್ಲಿನ ನಾಯಕ-ನಾಯಕಿಯರನ್ನು ನೋಡಿ ಎಂಥೆಲ್ಲ ಕನಸು ಹೆಣೆದು ಕುಳಿತಿದ್ದವಳಿಗೆ ದಾಂಪತ್ಯ ತೀರ ನೀರಸವೆನ್ನಿಸತೊಡಗಿತು. ದೇಹಗಳ ನಡುವಿನ ವ್ಯವಹಾರಕ್ಕೆ ಒಂದು ನೆಪವೆಂಬಂತೆ ಮದುವೆಯಾಗಬೇಕಾಯಿತಲ್ಲ ಎಂದು ಸೂಕ್ಷ್ಮ ಮನಸ್ಸಿನ ಆಕೆ ತುಂಬ ಚಿಂತೆಗೆ ಬಿದ್ದಳು. ತಾನು ಎಲ್ಲಿಗೋ ಬಂದು ಸಿಕ್ಕಿಹಾಕಿಕೊಂಡುಬಿಟ್ಟೆ ಎಂಬ ಭಾವ ಅವಳ ಮಾತುಗಳಲ್ಲಿ ಬೇಡವೆಂದರೂ ಇಣುಕುತ್ತಿತ್ತು, ಅವಳಿಗರಿವಿಲ್ಲದೆ.

ಆಕೆಯ ಗಂಡನೇನೂ ತುಂಬ ಸುಭಗನಲ್ಲ. ತೋಟ-ಮನೆ ಇಷ್ಟೆಲ್ಲ ಅನುಕೂಲವಿರುವ ತನ್ನನ್ನು ವರಿಸಿದ್ದೇ ತಪ್ಪಾಯಿತು ಎಂಬಂತೆ ಆಡುತ್ತಿರುತ್ತಾಳಲ್ಲ ಇವಳು ಎಂಬುದು ಅವನ ರೇಜಿಗೆ. ಆಮಟ್ಟಿಗಿನ ಪುರುಷಾಹಂಕಾರ ಅವನಲ್ಲೂ ಇತ್ತಾದ್ದರಿಂದ ತಾನೇ ಅವಳನ್ನು ಅನುಸರಿಸಿ ನಡೆಯಲಾಗುವುದೇ ಎಂಬ ಬಗ್ಗೆ ಅವನೂ ಯೋಚಿಸಲಿಲ್ಲ. ಈ ಹೇವರಿಕೆಗಳ ನಡುವೆಯೇ ಮಗುವೂ ಆಯಿತು. ಅಷ್ಟಾಗಿಯೂ ದೈಹಿಕ ಕೊಡುಕೊಳ್ಳುವಿಕೆಗಳಲ್ಲಿ ಇಬ್ಬರ ಅಹಮಿಕೆಗೂ ಸಂಘರ್ಷವಾಗುತ್ತಲೇ ಇರುತ್ತಿತ್ತಾದ್ದರಿಂದ ಆ ವಿಷಯದಲ್ಲಿಯೂ ಅಂಥ ತೃಪ್ತಿಯೇನೂ ಸಿಗಲಿಲ್ಲ.

ಹೀಗಿರಲೊಂದು ದಿನ, ತನ್ನ ಗಂಡನಿಗೆ ಮತ್ಯಾವುದೋ ಹೆಂಗಸಿನ ಜತೆ ಸಲ್ಲಾಪವಿದೆಯೆಂಬ ಸುದ್ದಿ ಆಕೆಗೆ ನಂಬಲರ್ಹ ಮೂಲಗಳಿಂದ ಲಭಿಸಿಬಿಟ್ಟಿತು. ಆಕೆ ಸ್ಫೋಟಿಸಿಬಿಟ್ಟಳು. ತಾನಿನ್ನು ಯಾವ ಕಾರಣಕ್ಕೂ ರಾಜಿ ಆಗಲಾರೆ ಅಂತ ನಿರ್ಧರಿಸಿದಳು. ಅವರ ಮನೆಗೆ ಬರುತ್ತಿದ್ದವರಲ್ಲಿ ಯುವಕನೊಬ್ಬನಿದ್ದ. ಆತ ಸಾಹಿತ್ಯ-ಕ್ರಾಂತಿ ಅಂತೆಲ್ಲ ಕನವರಿಸುವವ. ಮಾತಿಗೆ ಕುಳಿತರೆ ಅಲ್ಲೊಂದು ಆಕರ್ಷಣೆ ಇರುತ್ತಿತ್ತು. ಈಕೆ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದ ಬರಹಗಳಿಗೆಲ್ಲ ಆತನೇ ಓದುಗ. 'ಎಂಥ ಅದ್ಭುತ ಪ್ರತಿಭೆ ನಿನ್ನದು. ನಿನ್ನ ಅರ್ಹತೆಯೇ ಬೇರೆ. ನಿನಗೆ ಸೂಕ್ತ ವೇದಿಕೆ ಸಿಕ್ಕಬೇಕಾದರೆ ಈ ವಿವಾಹದಂಥ ಬಂಧನವೆಲ್ಲ ನಿನ್ನಂಥವರಿಗಲ್ಲ' ಎಂಬುದು ಅವನ ಯಾವತ್ತಿನ ಪ್ರತಿಪಾದನೆ. ಈ ಬಾರಿ ಆಕೆಗೆ ಸೂಕ್ತ ಕಾರಣವೇ ಸಿಕ್ಕಿತು. ಅವನದೇ ಸಹಾಯ ಪಡೆದು ಅಲ್ಲಿಂದ ಹೊರಬಂದೂ ಬಿಟ್ಟಳು.

ನಗರಕ್ಕೆ ಬಿದ್ದವಳಿಗೆ ಪ್ರಾರಂಭದಲ್ಲಿ ಸಿಕ್ಕ ವೇದಿಕೆಗಳು ಅನನ್ಯವಾದ ಥ್ರಿಲ್ ಕಟ್ಟಿಕೊಟ್ಟಿದ್ದೂ ಖರೆ. ತನ್ನ ಬದುಕು ಹೊರಳಿಕೊಂಡ ಬಗೆಗೆ ಸಾರ್ವಜನಿಕವಾಗಿ ಹೆಮ್ಮೆಯಿಂದ ಬೀಗುತ್ತಾಳೆ. ಏಕಾಂತದಲ್ಲಿ ಯಾರಿಗೂ ಹೇಳಲಾಗದ ಯಾತನೆಯೊಂದಿದೆ. ಇದ್ದ ವ್ಯವಸ್ಥೆಯಲ್ಲೇ ಪ್ರಯತ್ನಿಸಿದ್ದರೆ ಬದುಕನ್ನು ಕಟ್ಟಿಕೊಳ್ಳುವ ಸಾಧ್ಯತೆ ಅಲ್ಲೂ ಇತ್ತಾ? ರಾಜಿ ಎಂದರೆ ಶರಣಾಗತಿಯಲ್ಲ. ಇಬ್ಬರ ನಡುವಿನ ಹೊಂದಾಣಿಕೆ. ಅದಕ್ಕಿಷ್ಟು ಸಮಯ ಹಿಡಿಯುತ್ತದೆ. ಸಹನೆ ಇದ್ದರೆ ತಾನು ಪ್ರಯತ್ನಿಸಬಹುದಿತ್ತಾ? ತನ್ನನ್ನು ಬೇರೆಯದೇ ಹಾದಿಗೆ ತಂದವನಿಗೂ ತನ್ನ  ಜತೆಗೆ ಬೆಳೆದಿರುವ ಸಂಬಂಧ ತನ್ನಂಥದೇ ಹಲವು ಹುಡುಗಿಯರ ಜತೆಗೂ ಇದೆ. ಆ ಬಗ್ಗೆ ಅವನಿಗೇನೂ ವಿಷಾದವಿಲ್ಲ. ಅವನ ಜಗತ್ತಿನಲ್ಲಿ ಆತ ಆರಾಮಾಗಿಯೇ ಇದ್ದಾನೆ. ತಾನು ಮಾತ್ರ ಎಷ್ಟೇ ಸಮಾಧಾನಿಸಿಕೊಂಡರೂ ಆಂತರ್ಯದಲ್ಲೊಂದು ಅಸಮಾಧಾನ ಉಳಿದೇಹೋಗಿದೆ.

ಮೇಲಿನದೊಂದು ಮೈಲ್ಡ್ ಸ್ಟೋರಿ. ಅದರಲ್ಲಿ ಸರಿ-ತಪ್ಪು ಅಂತ ಕಡೆದಿಡಲಾಗದ ಗೊಂದಲ ಮಾತ್ರವೇ ಕಾಣಬಹುದು. ಆದರೆ ಇವುಗಳ ಅತ್ಯುಗ್ರ ಅವತರಣಿಕೆಗಳು ಸ್ತ್ರೀ ಸ್ವಾತಂತ್ರ್ಯದ ಹೆಸರಲ್ಲಿ ಹಲವು ಘಟಿಸಿವೆ, ಘಟಿಸುತ್ತಲೇ ಇವೆ. ಅಂಥ ಅತ್ಯುಗ್ರ ಕಥೆಗಳಲ್ಲಿನ ದುರಂತವೆಂದರೆ, ನೀನು ಸಂಪ್ರದಾಯದ ಶೃಂಖಲೆಗಳನ್ನು ತುಂಡರಿಸಿ ಬಾ ಎಂದು ಅನೇಕ ಸ್ತ್ರೀಯರನ್ನು ಸಿದ್ಧಾಂತಗಳ ಮೆರುಗಲ್ಲಿ ಪ್ರೇರೇಪಿಸಿದ ವ್ಯವಸ್ಥೆ, ಹಾಗೆ ಬಂದ ಅವಳನ್ನು ತನ್ನ ತೃಷೆಗೆ ಬಳಸಿ ನಕ್ಕಿದೆ! ಸ್ತ್ರೀಯನ್ನು ಹೊಸ್ತಿಲಲ್ಲಿ ಬಂಧಿಸಿಡುವುದು ಒಂದು ಅತಿಯಾದರೆ, ನೀನು ಬಯಲಿಗೆ ಬರಬೇಕು ಅಂತ ಅವಳನ್ನು ಪ್ರಲೋಭಿಸಿ ಆಕೆಯನ್ನು ಉಪಭೋಗದ ವಸ್ತುವಾಗಿಸುವುದು ಇನ್ನೊಂದು ಅತಿ. ಇವೆರಡು ಅತಿಗಳಿಗೂ ತಾವು ಒಳಗಾಗದಂತೆ ಎಚ್ಚರವಹಿಸುವವರು ಬುದ್ಧಿವಂತರು. ನಿಜಕ್ಕೂ ಸ್ತ್ರೀ ಏಳ್ಗೆಯ ಉದ್ದೇಶ ಕೆಲವರದ್ದು ಮಾತ್ರ. ಇನ್ನುಳಿದವರ ಅಜೆಂಡಾ ಸ್ತ್ರೀ ಕಾಳಜಿಯೇನೂ ಅಲ್ಲ. ಬದಲಿಗೆ ಸ್ವಾತಂತ್ರ್ಯದ ಹೆಸರಲ್ಲಿ ಆಕೆಯನ್ನು ಕಮಾಡಿಟಿ ಆಗಿಸಿ ತಮ್ಮ ಲಾಭ ನೋಡಿಕೊಳ್ಳುವುದು. ಶೀಲ, ಕನ್ಯತ್ವ ಇದರ ಕೇಂದ್ರಿತವಾಗಿಯೇ ಯೋಚಿಸುವ ಕಾಲ ಇದಲ್ಲ ಎಂಬ ಕಾಳಜಿ ಸರಿ. ಆದರೆ, 'ಏನದು ಶೀಲ? ಹುಡುಗನಿಗಿಲ್ಲದ್ದು ನಿನಗೇಕೆ? ಕಮಾನ್‌' ಎಂಬ ಕ್ರಾಂತಿಕಾರಿ ಧಾಟಿಯಲ್ಲಿ ಮಾತನಾಡುವವರದ್ದು ಯಾವ ಸಿದ್ಧಾಂತ ಪ್ರೀತಿಯೂ ಅಲ್ಲ. ಈ ಮಾತನ್ನು ಪುರಸ್ಕರಿಸಿ ಆಕೆ ಮೈಮರೆತರೆ ತಾವು ತಮ್ಮ ಪಾಲಿನ ಮಜಾ ತೆಗೆದುಕೊಳ್ಳಬಹುದು ಎಂಬ ಸರಳ ಕುತಂತ್ರ.

ಸ್ತ್ರೀ ಸಮಾನತೆ, ಪುರುಷ ಪ್ರಧಾನ ಸಮಾಜ ಬದಲಾಗಬೇಕಿರುವ ಅಗತ್ಯ ಎಂದೆಲ್ಲ ಭಾರಿ ನೈತಿಕ ಮೇಲ್ಮಟ್ಟದಲ್ಲಿ ನಿಂತು ಮಾತನಾಡುತ್ತಿದ್ದ ಪತ್ರಿಕೆ ತೆಹೆಲ್ಕಾ. ಈ ಉದಾರವಾದಿ ಅಭಿಯಾನಕ್ಕೆ ಅದರ ಸಂಪಾದಕನಾಗಿದ್ದ ತರುಣ್ ತೇಜ್ಪಾಲ್‌ದೇ ನೇತೃತ್ವ. ಈಗ ತಿಳಿದಿರುವಂತೆ ಆತನ ನಿಜರೂಪ ಏನೆಂದರೆ- 'ಅದರಲ್ಲೆಲ್ಲಾ ಏನಿದೆ? ಜತೆ ಬಂದು ಮಲಗು. ಉದ್ಯೋಗ ಉಳಿಸಿಕೊಳ್ಳುವ ಉತ್ತಮ ದಾರಿ ಅದು' ಎಂಬ ರೂಪವಷ್ಟೆ. ಈತನ ಬಳಿ ಉದ್ಯೋಗ ಅರಸಿಕೊಂಡುಹೋದ ಯುವಕ-ಯುವತಿಯರಲ್ಲಿ ಹೆಚ್ಚಿನವರು ಇವರ ತಥಾಕಥಿತ ಉದಾರವಾದಿ ನಿಲವಿಗೆ ಆಕರ್ಷಿತವಾಗಿದ್ದವರು ಎಂಬುದರಲ್ಲಿ ಸಂಶಯವಿಲ್ಲ. ಆ ಹುಡುಗಿ ಧೈರ್ಯ ಮಾಡಿ ಪ್ರತಿಭಟಿಸಿದ್ದರಿಂದ ಈತ ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಬೇಕಾಯಿತು. ಇದಕ್ಕೂ ಮೊದಲು ನಡೆದಿರಬಹುದಾದ ವರದಿಯಾಗದ ಪ್ರಕರಣಗಳೆಷ್ಟಿದ್ದಿರಬಹುದು?
ಇದೇ ತೆಹೆಲ್ಕಾ ಮಾಡಿದ್ದ ರಕ್ಷಣಾ ವಲಯದ ಕುಟುಕು ಕಾರ್ಯಾಚರಣೆ ಭಾರಿ ಪ್ರಸಿದ್ಧಿ ಪಡೆದಿತ್ತು. ಆದರೆ ಈ ನಿಟ್ಟಿನಲ್ಲಿ ಆ ಪತ್ರಿಕೆ ಅನುಸರಿಸಿದ ದಾರಿಯನ್ನು ಯಾರೂ ಗಮನಿಸಲೇ ಇಲ್ಲ. ರಕ್ಷಣಾ ವಿಭಾಗದ ಉನ್ನತ ಅಧಿಕಾರಿಗಳಿಂದ ಹುಳುಕು ಬಾಯ್ಬಿಡಿಸಲು ಅದು ವೇಶ್ಯೆಯರನ್ನು ಬಳಸಿಕೊಂಡಿತ್ತು. ಅಂದರೆ ಇಲ್ಲಿನ ಧೋರಣೆ ಗಮನಿಸಿ: ನಮ್ಮ ಪ್ರಸಿದ್ಧಿಗೆ ಸ್ತ್ರೀ ದೇಹವನ್ನು ಕಮಾಡಿಟಿಯಂತೆ ಉಪಯೋಗಿಸಿಕೊಳ್ಳುವುದು ಅನೈತಿಕ ಎಂದೇನೂ ಅನಿಸದು!

ಯಾರೋ ಹೊಸ ರಸ್ತೆ ತೋರಿಸಿದಾಗ ಸುಯ್ಯೆಂದು ಪ್ರಯಾಣಿಸುವ ತವಕ ಸಹಜ. ಹೊಸ ಚಿಂತನೆ ತಪ್ಪಲ್ಲ. ಆದರೆ ಹಳೆಯದನ್ನು ವಿರೋಧಿಸಿ ದೂರಾಗುವ ಉನ್ಮತ್ತ ಸ್ಥಿತಿಯಲ್ಲಿ ಉದ್ವೇಗದಿಂದ ಸಾಗಿದರೆ, ಬಾಯ್ತೆರದು ನಿಂತಿರುವ ಮ್ಯಾನ್‌ಹೋಲ್‌ಗಳು ಕಾಣದೇ ಇರಬಹುದು. ಎಚ್ಚರ!
-ಅಶ್ವಹೃದಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com