ಸ್ವೀಟಿ-ಗುಂಡು ಕಥೆ

ಇಬ್ರು ಪುಟಾಣಿ ಮಕ್ಳು ಆಟ ಆಡ್ತಾ ಇರ್ತಾರೆ. ಹುಡ್ಗ-ಹುಡ್ಗಿ. ಮಕ್ಳ ಹೆಸರೇನು ಅಂತ...
ಸ್ವೀಟಿ-ಗುಂಡು ಕಥೆ
Updated on: 

ಇಬ್ರು ಪುಟಾಣಿ ಮಕ್ಳು ಆಟ ಆಡ್ತಾ ಇರ್ತಾರೆ. ಹುಡ್ಗ-ಹುಡ್ಗಿ. ಮಕ್ಳ ಹೆಸರೇನು ಅಂತ ಕೇಳ್ತೀರಾ? ಸರಿ. ಹುಡ್ಗಿ ಹೆಸರು ಸ್ವೀಟಿ. ಹುಡ್ಗನ ಹೆಸರು ಗುಂಡು ಅನ್ಕೊಳ್ಳಿ. ಇಬ್ರೂ ಆಟ ಆಡ್ತಾ ಇರ್ತಾರೆ. ಅವ್ಳು ಸ್ವೀಟಿ ಅಲ್ವಾ..  ಅವಳ ಹತ್ರ ಒಂದಿಷ್ಟು ಚಾಕ್ಲೆಟ್ಸ್ಸ್ ಇರುತ್ತೆ. ಇವ್ನು ಗುಂಡು ಅಲ್ವಾ.. ಇವನ ಹತ್ರ ಒಂದಷ್ಟು ಥರಥರದ ಗೋಲಿ ಇರುತೆ.್ತ ಗುಂಡುಗೆ ಸ್ವೀಟಿ ಹತ್ರ ಇರೋ ಚಾಕ್ಲೆಟ್ ಮೇಲೆ ಕಣ್ಣು. ಸ್ವೀಟಿಗೆ ಗುಂಡು ಹತ್ರ ಇರೋ ಗೋಲಿ ಮೇಲೆ ಕಣ್ಣು. ಆದ್ರೆ ಸ್ವೀಟಿ ಗುಂಡು ಹತ್ರ ಗೋಲಿ ಬೇಕು ಅಂತ ಕೇಳಲ್ಲ. ಅವಳಿಗೆ ಸಂಕೋಚ, ಗುಂಡುಗೆ ಅವೆಲ್ಲಾ ಇಲ್ಲ. ಅವ್ನು ಬೇಕು ಅನ್ಸಿದ್ದನ್ನ ತಕ್ಷಣ ಕೇಳಿಬಿಡೋವ್ನು.

ಯಾವಾಗಲೂ ಸ್ವೀಟಿ ಹತ್ರ ಏನಾದರೂ ಕೇಳಿ ತಗೊಳ್ತಾನೇ ಇರ್ತಾನೆ ಈ ಗುಂಡು. ಇವತ್ತು ಎಂದಿನ ಹಾಗೆ ಕೇಳೋ ಬದ್ಲು ಎಕ್ಸ್‌ಚೇಂಜ್ ಆಫರ್ ಕೊಡ್ತಾನೆ. 'ಸ್ವೀಟಿ ಸ್ವೀಟಿ ... ನಿನ್ ಹತ್ರ ಇರೋ ಚಾಕ್ಲೆಟ್ ನಂಗೆ ಕೊಡ್ತೀಯಾ... ನನ್ ಹತ್ರ ಇರೋ ಗೋಲಿ ನಿನ್ಗೆ ಕೊಡ್ತೀನಿ?'
ಸ್ವೀಟೀಗೆ ತುಂಬಾ ಖುಷಿ ಆಗುತ್ತೆ. 'ಓಕೆ' ಅಂತ ತನ್ನ ಬಳಿ ಇದ್ದ ಅಷ್ಟೂ ಚಾಕ್ಲೆಟ್ ಅವನಿಗೆ ಕೊಟ್ಟುಬಿಡ್ತಾಳೆ.

ಗುಂಡು ಏನ್ ಮಾಡ್ತಾನೆ ಗೊತ್ತಾ? ತನ್ನ ಬಳಿ ಇರೋ ದೊಡ್ಡ ಗೋಲಿ, ಕಲರ್‌ಕಲರ್ ಗೋಲಿ, ಇದನ್ನೆಲ್ಲಾ ಎತ್ತಿಟ್ಕೊಂಡು, ಮಿಕ್ಕ ಸಾಮಾನ್ಯ, ಸಾದಾ ಗೋಲಿ ಮಾತ್ರ ಅವಳಿಗೆ ಕೊಡ್ತಾನೆ.
ಸರಿ. ಆಟ ಮುಗಿಯುತ್ತೆ. ಸ್ವೀಟಿ ಗೋಲಿ ತಗೊಂಡು ಮನೆಗೆ ಹೋಗ್ತಾಳೆ. ಗುಂಡು ಚಾಕ್ಲೆಟ್ ತಗೊಂಡು ಮನೆಗೆ ಹೋಗ್ತಾನೆ. ಊಟ ಮಾಡಿ ತಾಚಿ ಮಾಡ್ತಾರೆ. ಸ್ವೀಟೀಗೆ ಚೆಂದ ನಿದ್ದೆ ಬರುತ್ತೆ.

ಆದ್ರೆ ಗುಂಡುಗೆ ನಿದ್ದೇನೇ ಬರಲ್ಲ. ಒಂದೇ ಸಮನೆ ಹೊರಳಾಡ್ತಾನೆ. ಎದ್ದು ಕೂರ್ತಾನೆ. ಮತ್ತೆ ಮಲ್ಕೊಳೋಕೆ ಟ್ರೈ ಮಾಡ್ತಾನೆ. ಗಟ್ಟಿ ಕಣ್ಮುಚ್ಕೊಳ್ತ್ತಾನೆ. ಏನು ಮಾಡಿದರೂ ನಿದ್ದೆ ಬರೋದೇ ಇಲ್ಲ. ತಲೆ ತುಂಬಾ ಒಂದೇ ಯೋಚನೆ.. 'ನಾನು ಒಳ್ಳೆ ಗೋಲಿನೆಲ್ಲ ಮುಚ್ಚಿಟ್ಕೊಂಡು ಮಾಮೂಲಿ ಗೋಲಿ ಕೊಟ್ಟ ಥರ ಸ್ವೀಟೀನೂ ಒಳ್ಳೆ ಚಾಕ್ಲೆಟ್ ಎಲ್ಲ ಬಚ್ಚಿಟ್ಕೊಂಡು ಇದಿಷ್ಟೇ ಚಾಕ್ಲೆಟ್ ಕೊಟ್ಟಿರಬಹುದಾ?'
ಈ  ಅನುಮಾನದಲ್ಲಿ ಇಡೀ ರಾತ್ರಿ ಜಾಗರಣೆ ಮಾಡಿಬಿಟ್ಟ ಗುಂಡು.
ಇಷ್ಟೇ ಕಥೆ!!

ಸ್ವೀಟಿ-ಗುಂಡು ಕಥೆ ದೊಡ್ಡವರಿಗೂ ಎಂಥಾ ಪಾಠ ಅಲ್ವಾ?
ಸ್ನೇಹ, ಪ್ರೀತಿ, ಸಂಬಂಧಗಳಲ್ಲಿ ನಂಬಿಕೆಯ ಪಾತ್ರ ಎಷ್ಟು ದೊಡ್ಡದು ನೋಡಿ. ಸಂಬಂಧದಲ್ಲಿ ನಾವು ನಿಯತ್ತು ಇಟ್ಟುಕೊಳ್ಳದೆ ಹೋದರೆ, ನೂರಕ್ಕೆ ನೂರು ವಿಶ್ವಾಸಾರ್ಹವಾಗಿ ಇರದಿದ್ದರೆ ನಮಗೆ ಇತರರ ಮೇಲೆ ಅನುಮಾನಗಳು ಹುಟ್ಟೋದು ಸಹಜ. 'ತಾನು ಕಳ್ಳ ಪರರನ್ನು ನಂಬ' ಅಂತಾರಲ್ಲ ಆ ಸ್ಥಿತಿ. ನಾವು ಸರಿಯಿದ್ದಾಗ ಎಲ್ಲರೂ ಸರಿ ಎಂಬ ವಿಶ್ವಾಸ ನಮ್ಮಲ್ಲಿರುತ್ತದೆ. ನಾನೂ ಚೆನ್ನಾಗಿದ್ದೇನೆ, ನೀನೂ ಚೆನ್ನಾಗಿದ್ದೀಯ, ಎಲ್ಲವೂ ಚೆನ್ನಾಗಿದೆ ಎಂಬ ಧೋರಣೆಯ ಜೀವನದ ಸೊಗಸೇ ಬೇರೆ. ಜೀವನ ಕನ್ನಡಿ ಇದ್ದ ಹಾಗೆ!
ಕನ್ನಡಿ ಸ್ವಚ್ಛವಾಗಿಟ್ಟುಕೊಳ್ಳೋಣವೇ?
-ನವೀನ್ ಸಾಗರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com