

ಪ್ರೀತಿಸಿ ಮದುವೆಯಾದ ಅಶಾಗೆ ತವರಿನಿಂದ ಅತ್ತೆ ಮನೆಗೆ ತೆರಳುವ ಸಮಯ. ಅಶಾಳ ಪೋಷಕರಿಬ್ಬರೂ ವೃದ್ಧರು. ಮದುವೆಗೂ ಮುನ್ನ ಅಶಾ ಪ್ರೀತಿಸಿದ ಹರೀಶನನ್ನು ತನ್ನ ವೃದ್ಧ ತಂದೆ-ತಾಯಿಗೆ ಬೆಂಬಲವಾಗಿ ನಿಲ್ಲುತ್ತಾನೆಂಬ ಭರವಸೆ ಮೇರೆಗೆ ಪೋಷಕರನನ್ನು ಒಪ್ಪಿಸಿ ವಿವಾಹವಾಗಿದ್ದಳು. ಆದರೆ ಅಶಾ ಅಂದುಕೊಂಡಂತೆ ಆಗಲಿಲ್ಲ. ಆಶಾ ತವರು ಮನೆಗೆ ಹೋಗುವುದಕ್ಕೆ ಪತಿ ಹರೀಶ್ ವಿರೋಧಿಸುತ್ತಿದ್ದ. ಗಂಡು ಮಕ್ಕಳಿಲ್ಲದ ಅಶಾಳ ತಂದೆ- ತಾಯಿಯನ್ನು ನೋಡಿಕೊಳ್ಳಲು ಯಾರೂ ಇಲ್ಲದಂಥ ಸ್ಥಿತಿ ಎದುರಾಯಿತು. ಇತ್ತ ಗಂಡನ ಮನೆಗೆ ಹೆಚ್ಚು ಒತ್ತು ಕೊಡಬೇಕು ಎಂಬ ಆದೇಶ ಆಕೆಯ ಪತಿಯದು. ಅಶಾ ಎರಡು ಮನೆಯವರನ್ನೂ ಸಂಬಾಳಿಸಿಕೊಂಡು ಹೋಗುವ ಭರವಸೆ ನೀಡಿದರೂ ಪತಿ ಮಾತ್ರ 'ಕೇವಲ ನನ್ನ ಮನೆಯವರನ್ನು ಮಾತ್ರ ನೋಡಿಕೊಳ್ಳಬೇಕು' ಎಂದು ಮಾನಸಿಕ ಒತ್ತಡ ಹೇರುತ್ತಿದ್ದ. ಇದರಿಂದ ಇವರ ದಾಂಪತ್ಯದಲ್ಲಿ ಬಿರುಕು ಏರ್ಪಟ್ಟಿತ್ತು.
ಸುನೀತಾ ಮತ್ತು ಮನು ಪ್ರೀತಿಸಿ ವಿವಾಹವಾದವರು. ಸುನೀತಾ ಪೋಷಕರಿಗೆ ಏಕೈಕ ಪುತ್ರಿ. ಆಕೆಯ ಪೋಷಕರಿಗೆ ಬೇರೆ ಯಾರೂ ಆಧಾರವಿಲ್ಲ. ಆದರೆ, ಸುನೀತಾಳ ಪತಿ ಮನು ಮಾತ್ರ ಆಕೆಯನ್ನು ತವರಿಗೆ ಕಳುಹಿಸಲು ತುಂಬಾ ತಕರಾರು ಮಾಡುತ್ತಿದ್ದ. ವಿರೋಧದ ನಡುವೆಯೂ ಆಕೆ ತನ್ನ ಪೋಷಕರನ್ನು ನೋಡಿಕೊಳ್ಳುತ್ತಿದ್ದಳು.
ಸುನೀತಾ ಗರ್ಭಿಣಿ ಎಂದು ತಿಳಿಯುತ್ತಿದಂತೆ ತಾಯಿಗೆ ಎಲ್ಲಿಲ್ಲದ ಸಂತೋಷ. ವೃದ್ಧ ದಂಪತಿಗೆ ಏಕಾಂಗಿತನದ ಜೀವನಕ್ಕೆ ಮುಕ್ತಿ ಸಿಗಲಿದೆ ಎಂಬ ಖುಷಿ. ಆದರೆ ಅವರ ಖುಷಿಗೆ ಮನು ತಣ್ಣೀರೆರಚಿದ. ಕೂಸು ಹುಟ್ಟಿದ ಮೇಲೆ ಪೋಷಕರೊಂದಿಗೆ ಬೆಳೆಯಬೇಕೆಂಬ ಹಠ. ಇದರ ನಡುವೆ ಪತ್ನಿಗೆ ಮಾನಸಿಕ ಕಿರುಕುಳ ನೀಡತೊಡಗಿದ ಮನು. ತವರಿಗೆ ಕೊಡುವ ಒತ್ತು ಗಂಡನ ಮನೆಗೆ ಯಾಕೆಯಿಲ್ಲ ಎಂಬ ಚುಚ್ಚುಮಾತು. ನಿತ್ಯ ಸುನೀತಾಳ ತವರು ಮನೆ ವಿಚಾರ ತೆಗೆದು ಜಗಳ. ನಿಲ್ಲದ ಈ ಜಗಳಕ್ಕೆ ಕೊನೆಯಿಲ್ಲ.
ಇಂತಹ ಅದೆಷ್ಟೋ ಹೆಣ್ಣುಮಕ್ಕಳು ಕಿರಿಕಿರಿ ಅನುಭವಿಸತ್ತಿದ್ದಾರೆ. ಯಾರಲ್ಲೂ ಹೇಳಿಕೊಳ್ಳಲು ಸಾಧ್ಯವಾಗದೆ ಮಾನಸಿಕವಾಗಿ ನರಕಯಾತನೆ ಪಡುತ್ತಾರೆ. ಹೆಣ್ಣು ಮಕ್ಕಳು ಮದುವೆಯಾಯಿತು ಎಂದರೆ ಅತ್ತೆ ಮನೆಯಿಂದ ತಾಯಿ ಮನೆಗೆ ತೆರಳಲು ಗಂಡ, ಅತ್ತೆ, ಮಾವ ಅಪ್ಪಣೆ ಪಡೆಯಬೇಕು. ಹೆಣ್ಣುಮಕ್ಕಳನ್ನು ಸಾಕಿ, ಸಲುಹಿ ದೊಡ್ಡವರನ್ನು ಮಾಡಿ ಒಂದು ಹಂತಕ್ಕೆ ತಂದು ನಿಲ್ಲಿಸುವ ಪೋಷಕರ ಮನೆಗೆ ಹೋಗಲು ಅನುಮತಿ, ಅಪ್ಪಣೆ ಬೇಕಾ? ಈ ಗೋಳನ್ನು ಆಕೆ ಯಾರಲ್ಲಿ ಹೇಳಿಕೊಳ್ಳಬೇಕು?
-ಜ್ಯೋತಿ ಸಿ.