

ಸೊಂಟನೋವು ಎಲ್ಲರೊಳಗೂ ಅವಿತಿರುವ ಭೂತ. ಇದಕ್ಕೆ ನಿರ್ದಿಷ್ಟ ಕಾರಣಗಳೇನೂ ಇಲ್ಲ. ಸಾಮಾನ್ಯವಾಗಿ ಬೆನ್ನು ಹುರಿ ಸಮಸ್ಯೆ, ಮೂತ್ರ ಕೋಶದ ತೊಂದರೆ, ಸ್ತ್ರೀಯರಲ್ಲಿ ಮುಟ್ಟಿನ ತೊಂದರೆ, ಪಿತ್ತಕೋಶದ ಸಮಸ್ಯೆಗಳು, ಸೋಂಕು, ಯಾಂತ್ರಿಕ ಜೀನವಶೈಲಿಯಿಂದ ಕಾಣಿಸಿಕೊಳ್ಳಬಹುದು.
ಆರಂಭದಲ್ಲಿ ಸ್ವಯಂ ವೈದ್ಯರಾಗುವ ರೋಗಿಗಳು ನಂತರ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಾರೆ. ಆಪರೇಷನ್ಗೆ ಹೆದರುವವರು, ಅಲೋಪಥಿಯ ನೋವು ನಿವಾರಕ ನುಂಗಿ ಸುಸ್ತಾದವರು, ಆಪರೇಷನ್ ಮಾಡಿಸಿಕೊಂಡೂ ಸುಖ ಕಾಣದವರು ಕೊನೆಗೆ ಬರುವುದು ಆಯುರ್ವೇದ ಚಿಕಿತ್ಸೆಗೆ.
ಕಟಿಶೂಲವೆಂದು ಕರೆಯುವ ಸೊಂಟ ನೋವಿಗೆ ಅತ್ಯಂತ ಪರಿಣಾಮಕಾರಿ ಮತ್ತು ಫಲಪ್ರದವಾದ ಚಿಕಿತ್ಸಾ ಪರಿಹಾರ ಕಟಿಬಸ್ತಿ. ಸೊಂಟದ ಸುತ್ತ ಔಷಧಿ ಸಿದ್ಧ ಎಣ್ಣೆಯನ್ನು ಒಂದು ನಿರ್ದಿಷ್ಟ ಸಮಯದವರೆಗೆ ಹಿಡಿದಿಡುವ ಸ್ಥಾನಿಕ ಚಿಕಿತ್ಸೆಯೇ ಕಟಿಬಸ್ತಿ. ಈ ಚಿಕಿತ್ಸೆ ಮಾಡಲು ಧಾನ್ವಂತರ ತೈಲ, ಕ್ಷೀರಬಲ ತೈಲ, ಮಾಷತೈಲ, ಮಹಾನಾರಾಯಣ ತೈಲ, ಸಹಚರಾದಿ ತೈಲ, ಮುರಿವೆನ್ನ ತೈಲಗಳನ್ನು ಬಳಸುವ ವೈದ್ಯರು ಒಂದೇ ಎಣ್ಣೆಯಿಂದ ಅಥವಾ ಒಂದಕ್ಕಿಂತ ಹೆಚ್ಚು ಎಣ್ಣೆಗಳನ್ನು ಮಿಶ್ರ ಮಾಡಿ ಕಟಿಬಸ್ತಿ ಮಾಡುವರು.
ಈ ಚಿಕಿತ್ಸೆ ಹೇಗೆ?
ಉತ್ತಮ ವೈದ್ಯ ಮತ್ತು ಸಿಬ್ಬಂದಿಯುಳ್ಳ ಪೂರ್ಣ ಪ್ರಮಾಣದ ಪಂಚಕರ್ಮ ಕೊಠಡಿ, ಉದ್ದಿನಹಿಟ್ಟು 250ಗ್ರಾಂ, ಔಷಧಿ ಸಿದ್ಧ ಎಣ್ಣೆ 250 ಎಂ.ಎಲ್, ಪಾತ್ರೆಗಳು, ಅವಶ್ಯವಿದ್ದಷ್ಟು ಹತ್ತಿ ಬೇಕು.
ಶುದ್ಧ ಉದ್ದಿನ ಹಿಟ್ಟನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಹದವಾಗಿ ಕಲೆಸಿ ಮಣೆ ಮೇಲೆ ರೋಲ್ ಮಾಡಬೇಕು. 45 ರಿಂದ 50 ಸೆಂ.ಮೀ. ಉದ್ದ, 3 ಸೆಂ.ಮೀ. ದಪ್ಪ, 5 ಸೆಂ.ಮೀ. ಎತ್ತರವಿರುವಂತೆ ವೃತ್ತಾಕಾರದ ಕಟ್ಟೆಯನ್ನು ಸಿದ್ಧಪಡಿಸಬೇಕು. ರೋಗಿಯನ್ನು ಬೋರಲಾಗಿ ಚಿಕಿತ್ಸೆ ನೀಡುವ ಮಂಚದ ಮೇಲೆ ಮಲಗಿಸಿ. ಉದ್ದಿನ ಹಿಟ್ಟಿನಿಂದ ತಯಾರಿಸಿದ ವೃತ್ತಾತಾರದ ಕಟ್ಟೆಯನ್ನು ಸೊಂಟ ನೋವಿರುವ ಜಾಗದಲ್ಲಿಟ್ಟು ಎಣ್ಣೆ ಸೋರದಂತೆ, ಕಟ್ಟೆಯ ಒಳ ಮತ್ತು ಹೊರಭಾಗವನ್ನು ಮೆತ್ತಬೇಕು.
ಚಿಕಿತ್ಸೆ ಮಾಡೋದು ಹೇಗೆ?
ಔಷಧಿಯುಕ್ತ ಎಣ್ಣೆಯನ್ನು ರೋಗಿಯು ಸಹಿಸುವಷ್ಟು ಬಿಸಿಮಾಡಿ ಸೊಂಟದ ಮೇಲೆ ಇಡಲಾದ ಉದ್ದಿನ ಕಟ್ಟೆಯಲ್ಲಿ ನಿಧಾನವಾಗಿ ಸುರಿಯಬೇಕು. ತಣ್ಣಗಾದ ಮೇಲೆ ಪುನಾ ಬಿಸಿ ಮಾಡಿ ಸುಮಾರು ಒಂದು ಗಂಟೆಯವರೆಗೆ, ಏಳು ದಿನ ಮಾಡಬೇಕು. ಚಿಕಿತ್ಸೆಯ ಕೊನೆಯಲ್ಲಿ ಸ್ಥಾನಿಕ ಅಭ್ಯಂಗ ಮತ್ತು ನಾಡಿ ಸ್ವೇದದಂತೆ ಚಿಕಿತ್ಸೆ ಮಾಡಬೇಕು.
ಎಚ್ಚರ ಅಗತ್ಯ
* ಔಷಧಿ ಸಿದ್ಧ ಎಣ್ಣೆಯನ್ನು ನೇರವಾಗಿ ಬಿಸಿ ಮಾಡಬಾರದು.
* 2 ಅಥವಾ 3 ದಿನಗಳ ನಂತರ ಸ್ವಲ್ಪ ಹೊಸ ಎಣ್ಣೆಯನ್ನು ಹಳೆ ಎಣ್ಣೆಗೆ ಸೇರಿಸಬೇಕು
ಎಣ್ಣೆಕಟ್ಟೆಯಿಂದ ಸೋರದಂತಿರಲಿ.
* ರೋಗಿಯ ಚರ್ಮ ಸುಡದಂತೆ ಎಣ್ಣೆ ಒಂದೇ ಸಮನಾದ ಉಷ್ಣತೆ ಹೊಂದಿರಬೇಕು.
* ಚಿಕಿತ್ಸೆಗೆ ಎರಡು ಗಂಟೆ ಮೊದಲು ಆಹಾರ ಸೇವಿಸಿ. ಚಿಕಿತ್ಸೆಯ ಮೊದಲು ಮಲಮೂತ್ರ ವಿಸರ್ಜಿಸಿ.
* ಅನುಭವಿ ಮತ್ತು ಸಿಬ್ಬಂದಿಯ ಮಾರ್ಗದರ್ಶನವಿಲ್ಲದೆ ಚಿಕಿತ್ಸೆ ಉಸಾಬರಿ ಬೇಡ.
ಯಾವ ನೋವಿಗಿದು ಓಕೆ?
* ಸೋಂಟದಿಂದ ನೋವು ಪ್ರಾರಂಭವಾಗಿ ಮೊಣಕಾಲು ಹಿಮ್ಮಡಿಯವರೆಗೆ ಹರಿಯುವ ನೋವು.
* ಉಳುಕು, ಮುರಿದ ಮೂಳೆಯ ನೋವು.
* ಸೋಂಟದ ಮೂಳೆಗಳಲ್ಲಿ ನರ ಒತ್ತಿ ಬರುವ ನೋವು.
* ಲುಂಬಾರ್ ಸ್ಪಾಂಡಿಲೋಸಿಸ್ ಮತ್ತು ಐವಿಡಿಪಿ (ಇಂಟ್ರಾ ವರ್ಟಿಬ್ರಲ್ ಡಿಸ್ಕ್ ಪ್ರೋಲ್ಯಾಪ್ಸ್). ಕಾರಣಗಳಿಲ್ಲದ ಸೊಂಟನೋವು ಅನುಭವಿಸುವವರು ಶಸ್ತ್ರಚಿಕಿತ್ಸೆಯಿಂದ ಪೂರ್ಣ ಲಾಭ ಪಡೆಯದವರಿಗೆ ಇದು ಒಳಿತು.
ತುಸು ಹುಷಾರ್!
* ಚಿಕಿತ್ಸೆಯ ಸಮಯ ಮತ್ತು ನಂತರದ ಕೆಲವು ಕಾಲ ರೋಗಿ ವಿಶ್ರಾಂತಿಯಲ್ಲಿರಬೇಕು.
* ನಡೆಯುವುದು ಮತ್ತು ಬಗ್ಗಿ ಏಳುವ ಕೆಲಸದಿಂದ ದೂರವಿರಿ.
* ವ್ಯಾಯಾಮ ಮತ್ತು ಪ್ರಯಾಣ ಬೇಡ.
* ಚಿಕಿತ್ಸೆ ನಂತರ ಬಿಸಿನೀರಿನಲ್ಲಿ ಸ್ನಾನಮಾಡಬೇಕು.
* ಶರೀರದ ವಾತದೋಷವನ್ನು ಕಡಿಮೆ ಮಾಡುವ ಆಹಾರ ಸೇವಿಸಿ.
-ಡಾ. ನಾಗೇಂದ್ರ ಆಚಾರ್ಯ
(ಮೊ. 9731353737)