ಮಿರರ್ ಮಾರಾಯ್ರೆ!

ಕನ್ನಡಿ
ಕನ್ನಡಿ

ಸುಮ್ಮನೆ ಅಲ್ಲ ಕನ್ನಡಿ ಎಂದರೆ. ರೂಬಿಯು ತನ್ನನ್ನೇ ತಾ ಕಂಡು ಬೊಗಳುವ ಅಚ್ಚರಿಗೂ, ಇನ್ನೊಂದು ಮಗುವಿದೆ ಎಂದು ಕೈ ಹಿಡಿಯಲು ಅಂಬೆಗಾಲಿಟ್ಟು ಹೋಗಿ ಕೈಚಾಚುವ ಪಾಪಚ್ಚಿಯ ಮುಗ್ಧತೆಗೂ ಕಾರಣವಾಗಿ ನಿಂತಲ್ಲೇ ನಗುತ್ತದೆ.

ಸೀರೆ ತಪ್ಪುತಪ್ಪಾಗಿ ಉಟ್ಟು ರ್ಯಾಂಪ್ ವಾಕ್ ನಡೆಸುವ, ಒಂದೇ ಜುಟ್ಟನ್ನು ಐವತ್ತು ಸಲ ಬಿಚ್ಚಿ ಹಾಕಿಕೊಂಡರೂ ಸಮಾಧಾನ ಸಿಗದ, ಮೊಡವೆಗಳ ನೋಡಿಕೊಳ್ಳುತ್ತಾ ಜೋಲುಮೋರೆ ಹಾಕುವ, ಅಳುವ, ನಗುವ, ಗಂಟೆಗಟ್ಟಲೆ ಮೇಕಪ್ ಹೇರಿಕೊಳ್ಳುವ, ಒಬ್ಬೊಬ್ಬಳೆ ಮಾತನಾಡುವ, ತುಂಟತನದಿಂದ ನಗುವ ಹದಿಹರೆಯದ ಮಗಳ ತಂಟೆತುಮುಲ, ತಕರಾರುಗಳೆಲ್ಲವೊಂದಿಗೆ ಅವಳ ದಿನದ ಅರ್ಧ ಭಾಗವನ್ನು ತಾನು ಹಿಡಿದಿಟ್ಟುಕೊಂಡು ಆಕೆಗೆ ಆಪ್ತ ಸಂಗಾತಿಯಾಗುತ್ತದೆ.

ಮನೆಮಗನ 6 ಪ್ಯಾಕ್‌ಗಳು ದಿನೇ ದಿನೇ ಬೆಳೆಯುತ್ತಿರುವುದಕ್ಕೆ, ಗಂಡನ ಮುಖದಲ್ಲಿ ದಿನದಿನವೂ ಬೆಳೆವ ಪಾರ್ಥೇನಿಯಂ ಕಳೆ- ಗಡ್ಡಮೀಸೆ- ಶೇವಿಂಗ್ ಕಂಡು ನೀಟ್ ಆಗುವುದಕ್ಕೆ, ಹೆಂಡತಿಯ ತಲೆಯಲ್ಲಿ ಒಂದೊಂದೇ ಕಾಣಸಿಕೊಳ್ಳುತ್ತಿರುವ ಬಿಳಕೂದಲುಗಳು ಬುಡಸಮೇತ ಕೊಲೆಯಾಗಿ ಕಳಚಿ ಬೀಳುವುದಕ್ಕೆ...ಮನೆಯ ಎಲ್ಲ ಆಗುಹೋಗುಗಳಿಗೂ ಸಾಕ್ಷಿಯಾಗುತ್ತದೆ. ಹಾಗೆಂದು ಫೋಟೋದಂತೆ ಭವಿಷ್ಯದಲ್ಲಿ ಸಾಕ್ಷಿ ಹೇಳಲಾರದು. ಕನ್ನಡಿಯ ವ್ಯಕ್ತಿತ್ವವೇ ಹಾಗೇ- ಎದುರಿದ್ದವರ ವ್ಯಕ್ತಿತ್ವವನ್ನು ಪ್ರತಿಫಲಿಸುತ್ತದೆ. ಆದರೆ ವರ್ತಮಾನವಷ್ಟೇ ಅದರ ಹಂಗು. ತನ್ನಿಂದ ಆಚೆ ಹೋದವರ ಗುಂಗೂ ಅದಕ್ಕಿಲ್ಲ. ಅಂದಮೇಲೆ, ತಾನೇನೂ ನೆನಪಿನಲ್ಲಿಟ್ಟುಕೊಳ್ಳದೆಯೂ ಮನೆಮಂದಿಯ ಸಾವಿರಾರು ನೆನಪುಗಳಿಗೆ ಕಾರಣವಾಗುವ ಕನ್ನಡಿಯನ್ನು ಮನೆಗೆ ತರುವಾಗ, ಅದಕ್ಕೊಂದು ಜಾಗ ಕಲ್ಪಿಸುವಾಗ ಎಷ್ಟೊಂದು ಅಂಶಗಳನ್ನು ಗಮನಿಸಬೇಕೆಂದಾಯಿತಲ್ಲವೇ?

ಕನ್ನಡಿ ಕಲೆಯಾದರೆ...
ಕನ್ನಡಿ ಕಲೆಯಿಂದ ತುಂಬಿ ಹೋಗಿದ್ದರೆ ತೋರುವ ಮುಖದ ಮೇಲೂ ಕಲೆಗಳು ಕುಳಿತುಬಿಡುತ್ತವೆ. ಕೊಳೆಯಾದ ಕನ್ನಡಿಯು ಮನೆಯ ಅಂದಗೆಡಿಸಿಬಿಡುತ್ತವೆ. ಹಾಗೆಂದು ನೀರು ಹಾಕಿ ಕನ್ನಡಿ ತೊಳೆಯುವಂಥ ಜಾಣ್ಮೆ ಎಂದೂ ಒಳ್ಳೆಯದಲ್ಲ. ಬದಲಿಗೆ ಒಮ್ಮೆ ಒಣಬಟ್ಟೆಯಿಂದ ಧೂಳನ್ನು ಬರೆಸಿ, ಪೌಡರ್ ಹಾಕಿ ಚೆನ್ನಾಗಿ ಒರೆಸಬಹುದು. ಇಲ್ಲದಿದ್ದಲ್ಲಿ ಆಲ್ಕೋಹಾಲ್ ಇಲ್ಲವೇ ಸೀಮೆಎಣ್ಣೆಯನ್ನು ಹಾಕಿ ಚೆನ್ನಾಗಿ ಉಜ್ಜಿ ಕಲೆಗಳನ್ನು ತೆಗೆಯಿರಿ. ತಿಂಗಳಿಗೊಮ್ಮೆ ಕನ್ನಡಿ ಸ್ವಚ್ಛಗೊಳಿಸುವ ಅಭ್ಯಾಸ ರೂಢಿಸಿಕೊಳ್ಳಿ.



-ರೇಶ್ಮಾರಾವ್


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com