ಟೆಡ್ಡಿ ಚೇರ್ ಮನ್ರು!

ಮನೆಯಲ್ಲಿ ಟೆಡ್ಡಿಬೇರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಕುವುದು ಬೇಡ...
ಟೆಡ್ಡಿ ಬೇರ್‌ ಚೇರ್
ಟೆಡ್ಡಿ ಬೇರ್‌ ಚೇರ್

ಮನೆಯಲ್ಲಿ ಟೆಡ್ಡಿಬೇರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಕುವುದು ಬೇಡ ಅದಕ್ಕೊಂದು ಸೌಂದರ್ಯಯುತ ಗೌರವ ಕೊಡಿ. ಇವಕ್ಕಾಗಿಯೇ ವೈವಿಧ್ಯ ಕುರ್ಚಿಗಳು ಮಾರುಕಟ್ಟೆಯಲ್ಲಿವೆ...

ಅಲಂಕಾರದಿಂದ ಮನೆ ಇನ್ನಷ್ಟು ಮೆರುಗು ಕಟ್ಟಿಕೊಳ್ಳುತ್ತದೆ. ಮನೆಯ ಒಳಭಾಗವನ್ನು ನಾನಾ ಬಗೆಯಲ್ಲಿ ಅಲಂಕರಿಸುವುದರಲ್ಲಿ ನಮ್ಮ ಮಹಿಳಾ ಮಣಿಗಳು ಎತ್ತಿದ ಕೈ. ಅವರಿಗಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಅಲಂಕಾರಿಕ ವಸ್ತುಗಳು ಬಂದಿವೆ.

ಈ ಅಲಂಕಾರಿಕ ವಸ್ತುಗಳಲ್ಲಿ ಟೆಡ್ಡಿಬೇರ್ ಕೂಡ ಒಂದು. ಸಣ್ಣದು, ದೊಡ್ಡದು ಹೀಗೆ ನಾನಾ ರೀತಿಯ ಟೆಡ್ಡಿಗಳು ಸಿಗುತ್ತವೆ. ಅವುಗಳನ್ನು ತಂದ್ರೆ ಎಲ್ಲಿ ಇಡೋದು ಎಂಬ ಚಿಂತೆ ಸಹಜ. ಹಾಗಾಗಿ ಅವುಗಳನ್ನು ಕೂರಿಸಲೆಂದೇ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಸ್ಟ್ಯಾಂಡ್‌ಗಳನ್ನು ತಂದು ಅಥವಾ ಮನೆಯ ಹಾಸಿಗೆ, ಕುರ್ಚಿ, ಸೋಫಾಗಳ ಮೇಲೆ ಗೊಂಬೆಗಳನ್ನು ಕೂರಿಸುವುದು ಸಹಜ. ಆದರೆ ಮಕ್ಕಳು ಅವುಗಳನ್ನು ಎಳೆದು, ಬೀಳಿಸಿ ಆಟ ಆಡಿ ಗಲಿಬಿಲಿ ಮಾಡುವ ಅಪಾಯವೂ ಇರುತ್ತೆ. ಗೊಂಬೆ ಕೊಟ್ಟಿಲ್ಲಿ ಅಂದ್ರೆ ಅವರನ್ನು ಸಮಾಧಾನ ಮಾಡೋದು ಕಷ್ಟವೇ ಸರಿ.

ಅಷ್ಟೇ ಅಲ್ಲ, ಅದನ್ನು ನೆಲದಲ್ಲಿಟ್ಟರೆ ಸಾಕಷ್ಟು ಜಾಗವೂ ಬೇಕಾಗುತ್ತೆ. ಇದರಿಂದ ಸಹಜವಾಗಿ ಬೇರೆ ವಸ್ತುವಿಗೆ ಜಾಗದ ಕೊರತೆ ಕಾಡುತ್ತೆ. ಅಂತಹ ಸಮಸ್ಯೆ ನಿಮ್ಮ ಮನೆಯಲ್ಲೂ ಇದ್ದರೆ ಟೆಡ್ಡಿ ಇಲ್ಲಿ ಕೂರಿಸೋದು ಎಂಬ ಚಿಂತೆ ಬೇಡ. ಇತ್ತೀಚಿನ ದಿನಗಳಲ್ಲಿ ಅಂಥ ಟೆಡ್ಡಿಗಳಿಗೆಂದೇ ವಿಶೇಷವಾಗಿ ತಯಾರಿಸಿರುವ ಕುರ್ಚಿಗಳು ಮಾರುಕಟ್ಟೆಯಲ್ಲಿ ಈಗ ಲಭ್ಯ. ಅವುಗಳ ನಿರ್ವಹಣೆಯೂ ಸುಲಭ.

ಜಾಗದ ಕೊರತೆಯೂ ಇರದು. ಟೆಡ್ಡಿಯನ್ನು ಮಕ್ಕಲು ಮುಟ್ಟಿ ಹಾಳು ಮಾಡುತ್ತಾರೆ. ಮನೆಯ ಸಿಕ್ಕಸಿಕ್ಕ ಜಾಗದಲ್ಲಿ ಅವುಗಳನ್ನು ಎಸೆದು ಹಾಳಾಗುತ್ತವೆ ಎಂಬ ಚಿಂತೆಯೂ ಇರುವುದಿಲ್ಲ.

ಹ್ಯಾಂಡ್ ಮೇಡ್
ಈ ಕುರ್ಚಿಗಳು ಹ್ಯಾಂಡ್ ಮೇಡ್. ಅವುಗಳನ್ನು ದಾರದಿಂದ ತಯಾರಿಸಲಾಗಿರುತ್ತದೆ. ಅದಕ್ಕೆಂದೇ ಮಾರುಕಟ್ಟೆಯಲ್ಲಿ ಪ್ರತ್ಯೇಕ ದಾರ ಸಿಗುತ್ತದೆ. ದಾರದ ಜೊತೆಗೆ ಒಂದೆರಡು ಕಡ್ಡಿಗಳಿದ್ದರೆ ಸಾಕು. ಅದನ್ನು ಖರೀದಿಸಿ ಕೈಯಿಂದ ಹೆಣೆದು, ಕಡ್ಡಿಗಳನ್ನು ಜೋಡಿಸಿ ಟೆಡ್ಡಿಗಳ ಕುರ್ಚಿಯನ್ನು ಸಿದ್ಧಪಡಿಸಬಹುದು.

ಇವುಗಳನ್ನು ಮೂರ್ನಾಲ್ಕು ರೀತಿಯಲ್ಲಿ ಸಿದ್ಧಪಡಿಸಬಹುದು. ಕೆಲವೆಡೆ ಮಹಿಳೆಯರು ಈ ಕುರ್ಚಿಗಳನ್ನು ಮನೆಯಲ್ಲೇ ಸಿದ್ಧಪಡಿಸಿ ಮಾರುತ್ತಾರೆ. ಇನ್ನೂ ಕೆಲವೆಡೆ ಅಂಗಡಿ ಮಾಲೀಕರು ಅದಕ್ಕೆ ಬೇಕಿರುವ ಸಾಮಾಗ್ರಿಗಳನ್ನು ತಾವೇ ತಂದು ಬೇರೆಯವರಿಂದ ಸಿದ್ಧ ಪಡಿಸಿ ಮಾರುತ್ತಾರೆ.

ಸಾಮಾನ್ಯವಾಗಿ ಇದು ಬ್ಯಾಂಗಲ್ ಸ್ಟೋರ್‌ಗಳಲ್ಲಿ ಹೆಚ್ಚಾಗಿ ಸಿಗುತ್ತದೆ. ಕೆಲವೆಡೆ ಬಟ್ಟೆ ಅಂಗಡಿಗಳಲ್ಲೂ ಇರುತ್ತದೆ. ಆದರೆ ಈ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲದ ಕಾರಣ ಅವುಗಳ ಪರಿಚಯವಿಲ್ಲ. ಈ ಟ್ರೆಂಡ್ ಈಗೀಗ ಹೆಚ್ಚುತ್ತಿದೆ.

ತಯಾರಿಕೆ ಹೇಗೆ?
ಮಾರುಕಟ್ಟೆಯಲ್ಲಿ 'ಜೂಲಾ ದಾರ' ಎಂದು ಸಿಗುತ್ತದೆ. ಅದರಿಂದ ಈ ಕುರ್ಚಿ ತಯಾರಿಸಬಹುದು. ಬಣ್ಣಬಣ್ಣದ ಕುರ್ಚಿಗಳನ್ನು ತಯಾರಿಸಬಹುದು ಕೆಲವೆಡೆ ಅದನ್ನು ಜೂಲಾ ಎಂದೇ ಕರೆಯುತ್ತಾರೆ. ಸಾಮಾನ್ಯವಾಗಿ ಒಂದು ಜೂಲಾ ಕುರ್ಚಿ ಸಿದ್ಧಪಡಿಸಲು ಎರಡರಿಂದ ಮೂರು ದಿನ ಬೇಕು. ದಾರ ದಪ್ಪ ಹಾಗಾಗಿ ಕೈಯಲ್ಲೇ ಸುಲಭವಾಗಿ ಹಾಕಬಹುದು.

ಒಂದು ಕೆ.ಜಿ. ದಾರದಿಂದ ಎರಡು ಕುರ್ಚಿಗಳನ್ನು ಎಣೆಯಬಹುದು. ಜಡೆ ಹೆಣೆಯುವ ಮಾದರಿಯಲ್ಲೇ ಇವುಗಳನ್ನು ಹಾಕಲಾಗುತ್ತದೆ. ಕುರ್ಚಿ ಯಂತೆಯೇ ಇರುವ ಇವುಗಳನ್ನು ಗೋಡೆಗೆ ನೇತು ಹಾಕುವಂತೆ, ಚೌಕ ಅಥವಾ ಗುಂಡಾಕಾರದಲ್ಲಿ ಹಾಕಬಹುದು.

ಅಗತ್ಯ ಬಿದ್ದಲ್ಲಿ ಸುತ್ತಲೂ ಸಣ್ಣಸಣ್ಣ ಕನ್ನಡಿ ಹಾಕಿ ಅವುಗಳ ಅಂದವನ್ನು ಹೆಚ್ಚಿಸಬಹುದು. ಸರಳವಾಗಿಯೂ ಹೆಣೆಯಬಹುದು. ಮನೆಯ ಯಾವುದೇ ಭಾಗದಲ್ಲೂ ಇದನ್ನು ನೇತು ಹಾಕಬಹುದು. ಜಾಗವೂ ಅಗತ್ಯವಿಲ್ಲ. ಅಂದವೂ ಹೆಚ್ಚುತ್ತದೆ.

ಕುರ್ಚಿ ದರ

ಸಾಮಾನ್ಯವಾಗಿ ಅದಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ತಯಾರಕರೇ ಖರೀದಿಸುತ್ತಾರೆ. 500 ರಿಂದ 1 ಸಾವಿರ ರುಪಾಯಿಗೆ ಮಾರಲಾಗುತ್ತದೆ. ಹೋಲ್‌ಸೇಲ್‌ನಲ್ಲಿ ಕಡಿಮೆ ಆಗುತ್ತದೆ. ಅಂಗಡಿಯಲ್ಲಿ ದರ ಹೆಚ್ಚಿರುತ್ತದೆ. ನಿರುದ್ಯೋಗಿಗಳಾಗಿ ಮನೆಯಲ್ಲಿ ಕುಳಿತಿರುವ ಮಹಿಳೆಯರಿಗೆ ಇದರಿಂದ ಅನುಕೂಲವಾಗುತ್ತದೆ. ಕೈಗೆ ಒಂದು ಕಸುಬು, ಕಲೆ ಪ್ರದರ್ಶನವೂ ಆಗುತ್ತದೆ. ಆದರೆ ಇದನ್ನು ಹೆಣೆಯುವ ಬಗ್ಗೆ ತರಬೇತಿ ನೀಡಲು ಪ್ರತ್ಯೇಕ ಶಾಲೆಗಳಿಲ್ಲ. ಇದು ಕೈ ಕಸುಬಾದ ಕಾರಣ ಒಬ್ಬರಿಂದೊಬ್ಬರಿಗೆ ಹರಡಿದೆ. ಈ ಕುರ್ಚಿ ಬೇಕಿರುವವರು ಅಥವಾ ಅದನ್ನು ಸಿದ್ಧಪಡಿಸಲು ಆಸಕ್ತರು 9481553448ಕ್ಕೆ ಸಂಪರ್ಕಿಸಬಹುದು.

ಇದು ಒಂದು ರೀತಿಯ ಕೈ ಕಸುಬು. ಇಂದು ಸಿದ್ಧ ವಸ್ತುಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಇಂಥವುಗಳಿಗೆ ಬೆಲೆ ಕಡಿಮೆ. ಆದರೆ, ಜೂಲಾರೆ ಹಾಗೇನಿಲ್ಲ. ಹೆಚ್ಚಿನ ಮಂದಿಗೆ ಇದು ತಿಳದಿಲ್ಲವಾದರೂ ಸಹಜವಾದ ಬೇಡಿಕೆ ಇದೆ. ಟೆಡ್ಡಿಯೂ ಸೇಫ್, ಮನೆಯ ಅಂದವೂ ಹೆಚ್ಚುತ್ತದೆ.

ಜೆ.ಕೆ. ಕುಸುಮಾ
ಟೆಡ್ಡಿ ಕುರ್ಚಿ ತಯಾರಕರು


- ಶಾಂತ ತಮ್ಮಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com