

ಕಾಸರಗೋಡು ತಾಲೂಕಿನ ಪೆರ್ಲದಿಂದ ನಾಲ್ಕೂವರೆ ಕಿಲೋಮೀಟರ್ ಏರು ತಗ್ಗುಗಳ ರಸ್ತೆಯಲ್ಲಿ ಹಸಿರು ವನರಾಶಿಯ ನಡುವೆ ಸಾಗಿದಾಗ ಎತ್ತರದ ಗುಡ್ಡದ ಮೇಲೆ ನಿಂತು ಪಾತಾಳ ದೃಷ್ಟಿ ಬೀರಿದರೆ ಬೃಹದಾಕಾರದ ಹಳೇ ಮನೆ ಕಾಣಿಸುತ್ತದೆ. ಅದು ಎರಡು ಶತಮಾನಗಳನ್ನು ಕಂಡ ಮನೆ. ಇನ್ನೊಂದು ಶತಮಾನ ಬಂದರೂ ತನಗೆ ಮುಪ್ಪಾಗುವುದಿಲ್ಲ ಎನ್ನುವ ಮನೆ. ಅಲ್ಲಿ ಇಪ್ಪತ್ತು ಎಕರೆ ಭೂಮಿಯಲ್ಲಿ ವೈವಿಧ್ಯ ಕೃಷಿಯ ಮೂಲಕ ಸಾಧಕರ ಸಾಲಿನಲ್ಲಿ ಮಿಂಚುತ್ತಿದೆ ಶಿವಪ್ರಸಾದರ ಕುಟುಂಬ.
ಅಡಕೆ ಸೋಗೆಯ ಮಾಡಿನ ಮನೆಗೆ 1915ರಲ್ಲಿ ಶಿವಪ್ರಸಾದರ ತಾತ ಪರ್ತಜೆ ಸುಬ್ಬಯ್ಯ ಭಟ್ಟರು ಮಂಗಳೂರು ಹೆಂಚು ಹೊದೆಸಿದರು. 60 ವರ್ಷಗಳ ಹಿಂದೆ ಅತಿಥಿಗಳಿಗೆ ಕೂಡಲೆಂದು ಎದುರು ಭಾಗದಲ್ಲಿ ಒಂದು ಅಂಕಣ ಸೇರಿಸಿದ್ದು ಬಿಟ್ಟರೆ, ಎರಡು ಶತಮಾನಗಳ ಮನೆಯ ಬದುಕಿನಲ್ಲಿ ಒಂದಿಷ್ಟೂ ಬದಲಾವಣೆಯಾಗಿಲ್ಲ.
ಮಣ್ಣನ್ನು ಕಲಸಿಟ್ಟ ಒಂದಡಿ ದಪ್ಪದ ಗೋಡೆಗೆ ಯಾವ ಬಗೆಯ ಗಾರೆ ಕೊಟ್ಟರೋ ಗೊತ್ತಿಲ್ಲ. ಸ್ವಲ್ಪವೂ ಕಿತ್ತು ಹೋಗಿಲ್ಲ. ಮೂರು ಸಾವಿರ ಚದರಡಿಗೂ ಹೆಚ್ಚಿನ ಸ್ಥಳಾವಕಾಶವಿದೆ. ಅಷ್ಟೇ ವಿಸ್ತಾರದ ಮೇಲುಪ್ಪರಿಗೆ. ಎಣಿಕೆಗೆ ಕಷ್ಟ ಎಂಬಷ್ಟು ಕೋಣೆಗಳು. ಕೆಲವು ಕೋಣೆಗಳಿಗೆ ಮನೆಯವರು ಮಾತ್ರ ಸಲೀಸಾಗಿ ಹೋಗಬಹುದಾದಷ್ಟು ಕತ್ತಲೆಯಿದೆ. ಆದರೆ ಮಳೆಗಾಲದಲ್ಲಿ ಬಲುಬೆಚ್ಚಗೆ, ಬೇಸಿಗೆಯಲ್ಲಿ ತಂಪಿನ ವಾತಾವರಣಕ್ಕೆ ಪೂರಕವಾಗಿ ಮನೆಯ ವಾಸ್ತು ನಿರ್ಮಾಣವಾಗಿದೆ.
ಕಲಾತ್ಮಕ ಬೋದಿಗೆ ಕಂಬಗಳ ಹಜಾರವಿದೆ, ಕುಸುರಿ ಕೆಲಸದ ಎಲ್ಲ ದಾರಂದಗಳೂ ನಾಲ್ಕು ಅಡಿಗಿಂತ ಎತ್ತರವಿಲ್ಲ. ಶತಮಾನಗಳಿಂದ ಉಪಯೋಗಿಸಿದ ಒಂದೇ ಒಂದು ಹುಲ್ಲಿನ ಚಾಪೆಯನ್ನೂ ಬೇಡವೆಂದು ಎಸೆದಿಲ್ಲ ಪ್ರಸಾದರು. ಅವಿಭಕ್ತ ಕುಟುಂಬವಾಗಿದ್ದ ಕಾಲದಲ್ಲಿ ಬಳಸುತ್ತಿದ್ದ ದೊಡ್ಡ ಗಾತ್ರದ ಏಳು ಕಡೆಯುವ ಕಲ್ಲುಗಳಿವೆ, ಹಿಟ್ಟು ಬೀಸುವ ಕಲ್ಲು ಮರದ ಶಾವಿಗೆ ಒತ್ತು ಇನ್ನೂ ಬಳಸುತ್ತಿದ್ದಾರಂತೆ ಮನೆಯೊಡತಿ ಶೈಲಾ.
ಗೋಡೆಯ ಮೇಲೆ ಮರದ ಹಲಗೆ ಜೋಡಿಸಿ, ಅದರ ಮೇಲೆ ಮಣ್ಣು ನೆಲ ನಿರ್ಮಿಸಿದ ವಿಶಾಲವಾದ ಮಹಡಿಯಲ್ಲಿ ಹತ್ತಾರು ಕೋಣೆಗಳಿವೆ. ಎಷ್ಟು ವರ್ಷ ಅಡಕೆ ದಾಸ್ತಾನಿಟ್ಟರೂ ಗಾಳಿ ಸೋಕದ ಹಾಗಿದೆ. ನೆಲದ ಪಕ್ಕ ರಹಸ್ಯವಾದ ಪುಟ್ಟ ಬಾಗಿಲಿರುವುದು ಮನೆಯವರು ಹೇಳಿದರೆ ಮಾತ್ರ ಗೊತ್ತಾಗುತ್ತದೆ. ಆ ಬಾಗಿಲು ತೆರೆದರೆ ಅಲ್ಲೊಂದು ಗೋಪ್ಯ ನೆಲಮಾಳಿಗೆ ಮಾಡಿದ್ದಾರೆ ಪೂರ್ವಿಕರು. ಹಾಗೆಯೇ ಇನ್ನೊಂದು ಕೋಣೆಗೆ ಹೊರಗಿನಿಂದ ಬಾಗಿಲಿದೆ, ಒಳಗಿನಿಂದ ರಹಸ್ಯ ಸಂಪರ್ಕವೂ ಇದೆ.
ಮೂರು ಸಾವಿರ ಮಂದಿಗೆ ಬೇಕಾದ ಅಡುಗೆಗೆ ಸಾಲುವಷ್ಟು ಕಂಚು ತಾಮ್ರದ ಪಾತ್ರೆಗಳ ರಾಶಿ ಮಹಡಿಯಲ್ಲಿದೆ. ಹಾಗೆಯೇ ವಿವಿಧ ಕಾಲಘಟ್ಟಗಳ ಬಳಕೆಯ ಉಪಕರಣಗಳಿವೆ. ಕಿಲೋಗಟ್ಟಲೆ ಬೆಳ್ಳಿ ಮತ್ತು ಕಂಚು ಬೆರೆಸಿ ಎರಕ ಹೊಯ್ದ ವಿಶಿಷ್ಟ ಪಾತ್ರೆಯೂ ಇದೆ. ದಶಕಗಳ ಹಿಂದಿನ ಸೀಮೆಎಣ್ಣೆಯ ಲಾಟೀನೂ ಜೋಪಾನವಾಗಿದೆ.
ಸ್ವಾತಂತ್ರ್ಯಪೂರ್ವದಲ್ಲಿ ಶಿವಪ್ರಸಾದರ ತಂದೆ ರಾಮಕೃಷ್ಣ ಭಟ್ಟರು ಖರೀದಿಸಿ ತಂದ ತೂಕದ ಯಂತ್ರ ಇನ್ನೂ ಸಬಲವಾಗಿದೆ. ಜರ್ಮನ್ ನಿರ್ಮಿತ ಗೋಡೆ ಗಡಿಯಾರ ಈಗಲೂ ಇದೆ. ರಾಮಕೃಷ್ಣ ಭಟ್ಟರು ಆ ಕಾಲದಲ್ಲೇ ಪದವೀಧರರಾಗಿ ಚಿನ್ನದ ಪದಕ ಗಳಿಸಿದ್ದರು. ಮೂರು ಭಾಷೆಗಳಲ್ಲಿ ಘನಪಂಡಿತರು, ಅವರು ಸಂಗ್ರಹಿಸಿದ ಸಹಸ್ರಾರು ಗ್ರಂಥಗಳು ಹಳೇ ಮನೆಯಲ್ಲಿ ಹೊಸದರಂತೆ ಜೋಪಾನವಾಗಿವೆ. ಮೂವತ್ತು ವರ್ಷಗಳ ಹಿಂದಿನ ರೆಫ್ರಿಜಿರೇಟರ್, ರೇಡಿಯೋ ಎಲ್ಲವೂ ಸುಸ್ಥಿತಿಯಲ್ಲಿವೆ.
ವಿಶಾಲವಾದ ದನದ ಕೊಟ್ಟಿಗೆ ಹಾಗೆಯೇ ಕೃಷಿ ಸಲಕರಣೆಗಳ ದಾಸ್ತಾನಿಗೂ ಸುತ್ತಲೂ ಆ ಕಾಲದ ಉಪ ಕಟ್ಟಡಗಳಿವೆ. ಸಮಾರಂಭಗಳ ಅಡುಗೆಗೆಂದು ನೆಲದಲ್ಲಿ ಗುಳಿ ತೋಡಿ ನಿರ್ಮಿಸಿದ ವಿಶಿಷ್ಟ ಒಲೆಗಳು ಸಾಲಾಗಿವೆ. ಗತಕಾಲದ ದಾಸ್ತಾನು ಪೆಟ್ಟಿಗೆ ಭಾರೀ ಗಾತ್ರದ ಕಲಂಬಿಯಿದೆ.
ಅಡಕೆತೋಟದ ಮಧ್ಯ ಕಾಡುಮಾವು ಹಲಸಿನಹಣ್ಣಿನ ನೈಸರ್ಗಿಕ ಕೊಡುಗೆಗಳನ್ನು ಉಂಡು ಬೆಳೆದಿರುವ ಈ ಪೀಳಿಗೆ ಹಿರಿಯರ ಕಾಲದ ಮನೆಯನ್ನು ಅಭಿಮಾನದಿಂದ ಉಳಿಸಿಕೊಂಡಿರುವುದು ಸಂತೋಷದ ಸಂಗತಿ.
3
ಸಾವಿರ ಮಂದಿಗೆ ಸಾಲುವ ಅಡುಗೆ ಪಾತ್ರೆಗಳಿವೆ.
30
ವರ್ಷಗಳ ಹಿಂದಿನ ಫ್ರಿಡ್ಜ್, ರೇಡಿಯೋ ಇದೆ.
60
ವರ್ಷಗಳ ಹಿಂದಷ್ಟೇ ಏಕೈಕ ಬದಲಾವಣೆ.
1915
ಮನೆಗೆ ಹೆಂಚು ಹೊದಿಸಿದ ವರ್ಷ.
-ಪ. ರಾಮಕೃಷ್ಣ ಶಾಸ್ತ್ರಿ