

ಕರೆ ಕಟ್ಟುವುದು ಎಂದರೆ ನಿಮಗೆ ಗೊತ್ತಾ? ಬಹುಶಃ ನಿಮ್ಮನೆಯಲ್ಲಿ ಕಂಬಳಿ ಇದ್ದರೆ ಈ ಶಬ್ದ ಸಲೀಸಾಗಿ ನಿಮ್ಮ ಮೆದುಳಿನ ತಿಜೋರಿಯಲ್ಲಿ ಇರುತ್ತಿತ್ತು.
ಚಾದರ, ಜಮಖಾನ, ಶಾಲು, ರೈತಾಪಿ ವರ್ಗ ತಮ್ಮ ಕೃಷಿ ಕಾಯಕದಲ್ಲಿ ಬಳಸುವ ಗುಡಾರಗಳು, ಕುರಿಗಾರರು ಚಳಿಯಿಂದ ರಕ್ಷಣೆ ಪಡೆಯಲು ಬಳಸುವ ಕಂಬಳಿಗೆ ಕರೆ ಕಟ್ಟಲಾಗುತ್ತದೆ. ಕರೆ ಎಂದರೆ, ಅಂಚಿನ ದಾರದ ಮೂಲಕ ವಿಶೇಷ ವಿನ್ಯಾಸ.
ಇದು ಯಾಕಾಗಿ?
ಗ್ರಾಮೀಣರು ನಿತ್ಯ ಕಂಬಳಿ ಬಳಸುವಾಗ ಅದರ ಅಂಚುಗಳು ಹರಿದು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ವಿಶೇಷ ನೂಲಿನ ದಾರದಿಂದ ಕರೆ ಕಟ್ಟಲಾಗುತ್ತದೆ. ಇದನ್ನು ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾರೆ.
ಕರೆ ಕಟ್ಟುವ ಕೆಲಸಕ್ಕೆ ಇಬ್ಬರು ಬೇಕು. ಒಬ್ಬರು ಅದನ್ನು ಕಟ್ಟುತ್ತಾ ಸಾಗಿದರೆ, ಇನ್ನೊಬ್ಬರು ದೂರದಲ್ಲಿ ಕುಳಿತು, ಆ ನೂಲನ್ನು ಬದಲಾವಣೆ ಮಾಡುತ್ತಾ ಹೋಗುತ್ತಾರೆ. ಇದು ನೋಡಲು ಅತ್ಯಂತ ಮಜವಾಗಿ ಕಾಣುತ್ತದೆ. ಇವರೆಲ್ಲಾ ತಮ್ಮ ಕೂಲಿಯನ್ನು ಯಾವ ವಸ್ತುವಿಗೆ ಕರೆ ಹಾಕಲಾಗುತ್ತದೆ ಅದರ ಮೇಲೆಯೇ ನಿರ್ಧರಿಸುತ್ತಾರೆ. ಆದರೆ ಇಂದು ಪ್ರತಿಯೊಬ್ಬರ ಮನೆಯಂಗಳಕ್ಕೆ ಪ್ಲಾಸ್ಟಿಕ್ ಬಂದು ಕುಳಿತಿದ್ದು, ಇವರನ್ನು ಕರೆ ಕಟ್ಟಲು ಕರೆಯುವವರೇ ಇಲ್ಲದಂತಾಗಿದೆ.
ಕರೆ ನಾಪತ್ತೆ
ಕರೆ ಕಟ್ಟುವ ಕುಟುಂಬಗಳೂ ಇಂದು ಸಂಕಷ್ಟದಲ್ಲಿವೆ. ಇದೊಂದು ಅಪರೂಪದ ಕಲೆ. ಮುಂದಿನ ತಲೆಮಾರಿಗೆ ಇದನ್ನು ಕಲಿಸುವ ಕಾರ್ಯ ನಡೆಯಬೇಕಿದೆ. ಬದಲಾವಣೆ ಜಗದ ನಿಯಮ. ಹಾಗಂತ ನಮ್ಮಿಂದ ದೂರವಾಗುತ್ತಿರುವ ಕಲೆಗಳನ್ನು ಉಳಿಸುವತ್ತಲೂ ಗಮನ ನೀಡಬೇಕಿದೆ. ಇದು ಇಂದಿಗೂ ಕೆಲ ಕುಟುಂಬದ ಆದಾಯದ ಮೂಲವಾಗಿದ್ದು, ಇದನ್ನು ದಾಖಲೆಯ ರೂಪದಲ್ಲಿಯೂ ಸಂಗ್ರಹಿಸುವ ಕೆಲಸ ನಡೆಯಬೇಕಿದೆ.
ಈ ಕೆಲಸವನ್ನು ನನ್ನ ಗಂಡನಿಂದ ಕಲಿತಿದ್ದೆ. ಅವರು ತೀರಿ ಹೋದ ಮೇಲೆ ನಾನೇ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ನನ್ನ ಇಬ್ಬರು ಮಕ್ಕಳು ಇದೇ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಕಾಯಕದಿಂದ ನಮ್ಮ ಹೊಟ್ಟೆ ತುಂಬುತ್ತಿಲ್ಲ. ನಮಗೆ ಬೇರೆ ಕೆಲಸ ಗೊತ್ತಿಲ್ಲ. ಕೆಲವು ಬಾರಿ ಕೈಯಲ್ಲಿ ಹಣವಿಲ್ಲದೇ ಊರಿಂದೂರಿಗೆ ಕಾಲು ನಡಿಗೆಯಲ್ಲಿಯೇ ಸಾಗಿ, ಮತ್ತೊಂದು ಊರಿನಲ್ಲಿ ಅನ್ನ ಹುಡುಕುವಂತಹ ಸ್ಥಿತಿ ನಮ್ಮದಾಗಿದೆ.
- ದ್ಯಾಮವ್ವ ಕಿಳ್ಳಿಕೇತರ, ಕರಿ ಕಟ್ಟುವ ಮಹಿಳೆ
-ಶಿವಕುಮಾರ ಕುಷ್ಟಗಿ