ಬೈಡೆಟ್ ಟಾಯ್ಲೆಟ್

ಬೈಡೆಟ್ ಟಾಯ್ಲೆಟ್
Updated on: 

ಶೌಚಾಲಯಗಳನ್ನು ಅತ್ಯಾಧುನಿಕಗೊಳಿಸುವ ಕಲ್ಪನೆ ಹುಟ್ಟಿದ್ದು ಜಪಾನಿನಲ್ಲಿ. ಅದು 1980ರ ದಶಕದಲ್ಲಿ. ಅಂಥ ಕಲ್ಪನೆಯ ಮೂರ್ತರೂಪವಾಗಿ ಟೋಟೊ ಕಂಪನಿ ಬೈಡೆಟ್ ಶೌಚಾಲಯವನ್ನು ನಿರ್ಮಿಸಿ ಗಿನ್ನೆಸ್ ದಾಖಲೆಗೆ ಸೇರಿಕೊಂಡಿತು. ಮುಂದೆ ಅದರಲ್ಲಿ ಸುಧಾರಣೆಗಳನ್ನು ಮಾಡುತ್ತಲೇ ಸಾಗಿತು. ಈಗ ಬೈಡೆಟ್ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜಪಾನಿನ ಬಹುತೇಕ ಮನೆಗಳಲ್ಲಿ ಇದರದ್ದೇ ವೈಭವೀಕರಣ. ಬೈಡೆಟ್ ಶೌಚಾಲಯದಲ್ಲಿ ಶುಚಿಗೊಳಿಸಲು ಕೈಗಳು ಬೇಕಂತಿಲ್ಲ. ಪೆನ್ಸಿಲ್ ಗಾತ್ರದ ಕೊಳವೆಯ ರಂಧ್ರಗಳಲ್ಲಿ ರಭಸದಿಂದ ಚಿಮ್ಮುವ ನೀರು ಆ ಕೆಲಸವನ್ನು ನಿರ್ವಹಿಸುತ್ತದೆ. ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ಈ ಟಾಯ್ಲೆಟ್‌ನಲ್ಲಿ ಎಷ್ಟು ಬೇಕೋ ಅಷ್ಟೇ ಬಿಸಿಯಾದ ನೀರನ್ನು ಪಡೆಯಬಹುದು. ಆ ನೀರಿನಲ್ಲಿ ಸುಗಂಧಿತವಾದ, ಕ್ರಿಮಿನಾಶಕ ಗುಣವುಳ್ಳ ಸೋಪು ಮಿಶ್ರಣವಾಗಿರುತ್ತದೆ. ಆದರೆ ಮಲಬದ್ಧತೆ, ಮೂಲವ್ಯಾಧಿ ಇತ್ಯಾದಿ ಸಮಸ್ಯೆಗಳಿರುವವರಿಗೆ ಅದರಿಂದ ಬಾಧಕವಾಗುತ್ತದೆ. ಅಂಥವರಿಗೆ ಸಾಬೂನುರಹಿತ ನೀರೂ ಬರುತ್ತದೆ.
ಬೇಸಿನ್‌ನಲ್ಲಿ ಕುಳಿತ ಕೂಡಲೇ ಸ್ವಯಂಚಾಲಿತವಾಗಿ ಶೌಚದ ಗುಂಡಿ ತೆರೆದುಕೊಳ್ಳುತ್ತದೆ. ಬಳಿಕ ತಾನಾಗಿ ಮುಚ್ಚಿಕೊಳ್ಳುತ್ತದೆ. ಹೀಗಾಗಿ ಒಳಗೆ ಬರುವಾಗ ದುರ್ಗಂಧ ಅಸಹ್ಯವುಂಟು ಮಾಡುವುದಿಲ್ಲ. ಇದರಲ್ಲಿ ತ್ಯಾಜ್ಯವನ್ನು ಸಾಗಿಸಲು ಕೊಳವೆಗಳ ಉಪಯೋಗವಿಲ್ಲ. ವಿದ್ಯುಚ್ಛಕ್ತಿಯ ಮೂಲಕ ಅದು ಬಯೋಗ್ಯಾಸ್ ಆಗಿ ಪರಿವರ್ತನೆ ಹೊಂದಿ ಒಲೆ ಉರಿಸಲು ಬೇಕಿದ್ದರೆ ಬಳಸಿಕೊಳ್ಳಬಹುದು.
ಈ ಹೊಸ ಶೌಚಾಲಯದಲ್ಲಿ ತಾನಾಗಿ ಡಿಯೋಡರೆಂಟ್ ಸುಗಂಧ ಬಿಡುಗಡೆಯಾಗುವ ಕಾರಣ ಮುಜುಗರವಾಗದು. ಹಿತವಾದ ಸಂಗೀತ ಆಲಿಸಬಹುದು. ಇದರಲ್ಲಿ ಒಮ್ಮೆ ಬಟನ್ ಒತ್ತಿದರೆ ಅಗತ್ಯವಿರುವಷ್ಟೇ ನೀರು ಸೇಚನೆಯಾಗಿ ಬಳಿಕ ತಾನಾಗಿ ನಿಲ್ಲುತ್ತದೆ. ಮೂವರು ಇರುವ ಒಂದು ಕುಟುಂಬದಲ್ಲಿ ಇದರಿಂದಾಗಿ ದಿನದಲ್ಲಿ ಉಳಿಯುವ ನೀರಿನ ಪ್ರಮಾಣ 20 ಲೀಟರುಗಳಂತೆ.
ವಯಸ್ಸಾದವರಿಗೆ ಅನುಕೂಲವಾದ ಬಗೆಯಲ್ಲಿ ಕುಳಿತುಕೊಳ್ಳಲು ಇಂಥ ಶೌಚಾಲಯಗಳ ಬೇಸಿನ್‌ನಲ್ಲಿ ವ್ಯವಸ್ಥೆಗಳಿವೆ. ಅತಿ ಕಡಮೆ ವಿದ್ಯುಚ್ಛಕ್ತಿ ಬಳಸುತ್ತದೆ. ತಾನಾಗಿ ಕೀಟಾಣುನಾಶ ಮಾಡುವ ಅನುಕೂಲವಿದೆ. ಇದರೊಳಗೆ ಮಾತ್ರ ಧರಿಸಲು ರಬ್ಬರ್ ಚಪ್ಪಲಿಗಳಿವೆ. ಶೌಚಾಲಯದೊಳಗಿನ ಕೀಟಾಣುಗಳು ಚಪ್ಪಲಿಗಳ ಮೂಲಕ ಹೊರಗೆ ಬರದಂತೆ ಹೀಗೆ ಮಾಡಲಾಗಿದೆಯಂತೆ. ಭವಿಷ್ಯದಲ್ಲಿ ಇನ್ನಷ್ಟು ಸುಧಾರಣೆಗಳಾಗಲಿವೆಯೆಂದು ತಯಾರಕರು ಹೇಳುತ್ತಾರೆ. ಬೇಸಿನ್ ಮೇಲೆ ಕುಳಿತವನ ರಕ್ತದ ಒತ್ತಡ, ಕೊಬ್ಬು ಮತ್ತು ಸಕ್ಕರೆಯ ಅಂಶದ ಅಳತೆ ತಿಳಿಯುತ್ತದೆ. ಅಂತರ್ಜಲಸಹಿತ ಸೆಲ್ಯುಲರ್ ದೂರವಾಣಿಯ ಸಂಪರ್ಕ ಸಿಗಲಿದೆ. ಬ್ಯಾಟರಿಚಾಲಿತವಾಗಿ ಬೇಕಾದಲ್ಲಿಗೆ ಒಯ್ಯುವಂಥ ಪೋರ್ಟೆಬಲ್ ಶೌಚಾಲಯವೂ ಬರಲಿದೆ. ಸದ್ಯಕ್ಕೆ ಇದರ ಬೆಲೆ 300 ಅಮೆರಿಕನ್ ಡಾಲರುಗಳಿಂದ ಆರಂಭವಾಗಿ ಐದು ಸಾವಿರ ಡಾಲರುಗಳನ್ನೂ ದಾಟುತ್ತದೆ.



-ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com