

ಮಲೆನಾಡು ಎಂದಾ ಕ್ಷಣ ನೆನಪಾಗುವುದು ಸಾಮಾನ್ಯವಾಗಿ ತೀರ್ಥಹಳ್ಳಿ. ಇಲ್ಲಿನ ಮಣ್ಣಿನ ಸೊಗಡೇ ಅಂಥದ್ದು. ತೀರ್ಥಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾಡಿನ ಹೆಸರಾಂತ ಗಾಯಕಿ, ಡಾ. ಶಮಿತಾ ಮಲ್ನಾಡ್. ಇದೀಗ ಡಾನ್ಸ್ಗೂ ಸೈ ಎನಿಸಿಕೊಂಡಿದ್ದಾರೆ. ಕರಿಯ ಚಿತ್ರದ 'ನನ್ನಲಿ ನಾನಿಲ್ಲ' ಗೀತೆಯ ಮೂಲಕ ಜನಪ್ರಿಯತೆ ಗಳಿಸಿಕೊಂಡ ಶಮಿತಾ, ನಂತರದ ದಿನಗಳಲ್ಲಿ ಬಹು ಬೇಡಿಕೆಯ ಗಾಯಕಿಯಾಗಿ ಇದೀಗ ಗಾಯನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಈಗಾಗಲೇ ಸರಿಸುಮಾರು ಇನ್ನೂರು ಚಲನಚಿತ್ರ ಗೀತೆಗಳಿಗೆ ದನಿಗೂಡಿರುವ ಶಮಿತಾ, ಜಾನಪದ ಗೀತೆ, ವಚನಗೀತೆ, ಭಕ್ತಿಗೀತೆ, ಭಾವಗೀತೆ, ದೇಶಭಕ್ತಿಗೀತೆ ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ಗೀತೆಗಳ ಧ್ವನಿಸುರುಳಿಗಳಲ್ಲಿ ಹಾಡಿದ್ದಾರೆ. ಸ್ವತಃ ರಾಗ ಸಂಯೋಜಿಸಿದ 'ಮಿಲನೋತ್ಸವ' ಇವರ ಮೊದಲ ಧ್ವನಿ ಮುದ್ರಿಕೆ.
ಬಿರುಗಾಳಿ ಚಿತ್ರದ 'ಮಧುರಾ ಪಿಸುಮಾತಿಗೆ' ಗೀತೆಗೆ ಫಿಲ್ಮ್ಫೇರ್ ಅವಾರ್ಡ್, ಸುವರ್ಣ ಫಿಲ್ಮ್ ಅವಾರ್ಡ್, ಸೌತ್ ಸ್ಕೋಪ್ ಅವಾರ್ಡ್ ಪಡೆದಿರುವ ಶಮಿತಾ ತಮ್ಮ ಮುಂದಿನ ಯೋಜನೆಗಳಿಗೆ ತಯಾರಾಗುತ್ತಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಡಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಿ ಕೊನೆ ಹಂತದವರೆಗೂ ಬಂದ ಶಮಿತಾ, ಯಾವ ಡಾನ್ಸರ್ಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
'ಇತ್ತೀಚೆಗೆ ಕನ್ನಡ ವಾಹಿನಿಯೊಂದರಲ್ಲಿ ಮೂಡಿಬಂದ ಡ್ಯಾನ್ಸ್ರಿಯಾಲಿಟಿ ಶೋ ತುಂಬ ಜನಪ್ರಿಯತೆ ಗಳಿಸಿತು. ಹೋದಲ್ಲೆಲ್ಲಾ ಜನ, ನೀವೇ ನಿಜವಾದ ವಿನ್ನರ್ ಅಂತಾರೆ. ನನ್ನ ಶ್ರಮಕ್ಕೆ ಇದಕ್ಕಿಂತ ಇನ್ನೇನು ಬೇಕು? ಆ ಶೋ ಆದ ಬಳಿಕ ಅಮೆರಿಕಕ್ಕೆ ಹೋಗಿದ್ದೆ. ಅಲ್ಲಿನ ಮಕ್ಕಳು ಕನ್ನಡ ಕಾರ್ಯಕ್ರಮಗಳನ್ನ ನೋಡೋದು ತುಂಬಾ ಕಮ್ಮಿ. ಆದರೆ ಮೊನ್ನೆ ಅಲ್ಲಿನ ಮಕ್ಕಳು ಪ್ರತೀ ಎಪಿಸೋಡ್ನ್ನೂ ವಿವರಿಸುವುದನ್ನು ನೋಡಿ ಅಚ್ಚರಿಯೊಂದಿಗೆ ಭಾವುಕಳಾದೆ. ನಾನು ಜನರನ್ನ ತಲುಪಿದ್ದೇನೆ ಎಂದು ಹೆಮ್ಮೆ ಎನಿಸಿತು. ಜನರ ಪ್ರೀತಿ-ವಿಶ್ವಾಸದ ಮುಂದೆ ಇನ್ನೇನು ಬೇಕು. ಅಲ್ವಾ?' ಇದು ಶಮಿತಾ ಮಲ್ನಾಡ್ರ ನೇರ ಮಾತುಗಳು. ಅವರ ಸರಳತೆ ಹೀಗೇ ಇರಲಿ. ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿ, ಅವಾರ್ಡ್ ಅವರ ಮಡಿಲು ತುಂಬಲಿ ಎಂಬುದೇ ನಮ್ಮ ಹಾರೈಕೆ.
-ಸಂಧ್ಯಾ ಭಟ್
Sandhya.athmika@gmail.com