ದೇಸಾಯಿ ವಾಡೆ

ದೇಸಾಯಿ ವಾಡೆ
Updated on: 

ಅತ್ಯಂತ ಪ್ರಾಚೀನ ದೇಗುಲಗಳನ್ನು ಹೊಂದಿದ, ಒಂದೊಮ್ಮೆ ಬೆಳವಲನಾಡಿನ ಕೇಂದ್ರವಾಗಿದ್ದ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ದೇಸಾಯಿ ವಾಡೆ ಚಲನಚಿತ್ರಗಳ ತಯಾರಿಕೆಗೆ ಹೇಳಿಮಾಡಿಸಿದ ಮನೆ.

ಬಾದಾಮಿ ಚಾಲುಕ್ಯರಿಂದ ಹಿಡಿದು ವಿಜಯನಗರ ಹಾಗೂ ಆದಿಲ್ ಷಾಹಿಗಳ ಆಡಳಿತದ ಕುರುಹು ಹೊಂದಿರುವ ಅಣ್ಣಿಗೇರಿಯಲ್ಲಿನ ಪ್ರಸಿದ್ಧ ದೇಸಾಯಿ ಮನೆತನದ ಈ ವಾಡೆ ನಾಡಿನೆಲ್ಲೆಡೆ ಹೆಸರು ಮಾಡಿದೆ.

ಈಗಾಗಲೇ ಈ ಸುಂದರ ಮನೆಯಲ್ಲಿ ಕನ್ನಡದ ನಾಲ್ಕೈದು ಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ಟಿ.ಎಸ್. ನಾಗಾಭರಣ ಅವರ 'ಸಿಂಗಾರೆವ್ವ' ಚಿತ್ರ ಪೂರ್ತಿ ಈ ದೇಸಾಯಿ ವಾಡೆಯಲ್ಲೇ ತಯಾರಾಗಿದೆ. ಈ ಮನೆ ಸಂಪೂರ್ಣವಾಗಿ ಸಾಗುವಾನಿ ಮರದ ಚಂದನೆಯ ಎರಡಂತಸ್ತನ್ನು ಹೊಂದಿದೆ. 10ರಿಂದ 15 ಗುಂಟೆ ಜಾಗದಲ್ಲಿ ವಿಸ್ತಾರವಾಗಿ ಹರಡಿರುವ ಈ ಮನೆಗೆ ಸುಮಾರು 200 ರಿಂದ 250 ವರ್ಷಗಳ ಇತಿಹಾಸವಿದೆ.

ಒಂದು ಅವಿಭಕ್ತ ಕುಟುಂಬ ವಾಸಿಸಲು ಹಾಗೂ ಆ ಕುಟುಂಬಕ್ಕೆ ಬೇಕಾದ ಎಲ್ಲ ಅವಶ್ಯಕತೆಗಳನ್ನು ಈ ಮನೆ ಹೊಂದಿದೆ. 70ಕ್ಕೂ ಹೆಚ್ಚು ಬಾಗಿಲುಗಳು, ಹತ್ತಾರು ಕೋಣೆಗಳು, ದನದ ಕೊಟ್ಟಿಗೆ, ಗೋದಾಮು ಹಾಗೂ ಮನೆ ಸುತ್ತಲೂ ರಕ್ಷಣಾ ಕೋಟೆ ಇದೆ. ಇದೇ ಕಾರಣಕ್ಕೆ ಹಲವು ಬೆಳ್ಳಿತೆರೆ ಮತ್ತು ಕಿರುತೆರೆ ನಿರ್ದೇಶಕರು ಈ ಮನೆಯನ್ನು ಚಿತ್ರೀಕರಣಕ್ಕೆ ಆರಿಸಿದ್ದಾರೆ.

ಗಂಗಪ್ಪಗೌಡರ, ಕೊಟ್ರೆಪ್ಪಗೌಡರ ಹಾಗೂ ಚಿಕ್ಕಪ್ಪಗೌಡರ ಎಂಬ ಹಿರಿಯರ ಆಶೀರ್ವಾದವೇ ಈ ಮನೆ ನಿರ್ಮಾಣಕ್ಕೆ ಕಾರಣ. ಈ ಹತ್ತು ವರ್ಷಗಳಲ್ಲಿ ಸಿಂಗಾರೆವ್ವ, ಕನಸೆಂಬ ಕುದುರೆ, ಸಂತ ಶಿಶುನಾಳ ಶರೀಫ, ಧರ್ಮದೇವತೆ ಎಂಬ ಚಿತ್ರಗಳು ಚಿತ್ರೀಕರಣಗೊಂಡಿವೆ. ಈ ಪೈಕಿ ಸಿಂಗಾರೆವ್ವ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂತು. 'ಒಂದು ಚಿತ್ರದ ಚಿತ್ರೀಕರಣಕ್ಕೆ ಬೇಕಾಗುವ ಎಲ್ಲ ರೀತಿಯ ಸೆಟ್ಟುಗಳು ಈ ಮನೆಯಲ್ಲಿ ಲಭ್ಯವಿತ್ತು ಎಂದು ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿಕೊಂಡಿದ್ದರು' ಎಂದು ದೇಸಾಯಿ ಮನೆತನದ ಸದಸ್ಯ ಮಹೇಶ ದೇಸಾಯಿ ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9986819006 ಸಂಪರ್ಕಿಸಬಹುದು.
-ಬಸವರಾಜ ಹಿರೇಮಠ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com