ಸಿನಿಮಾ ಗ್ರಾಮ

ಸಿನಿಮಾ ಗ್ರಾಮ
Updated on: 

ಸುಂದರ ಪರಿಸರ. ಪ್ರಶಾಂತ ವಾತಾವರಣ. ಕಾವೇರಿಯ ನೀನಾದ. ನದಿ ತಟದಲ್ಲಿನ ದೇಗುಲಗಳು. ಹಸಿರಿನಿಂದ ಕಂಗೊಳಿಸುವ ಭತ್ತದ ಗದ್ದೆಗಳಿರುವ ನಿಸರ್ಗ ರಮಣೀಯತೆಯ ನಡುವಿರುವ ಶತಮಾನ ಕಂಡ ಬಂಗಲೆಗಳು. ಇವು ಸ್ಯಾಂಡಲ್‌ವುಡ್ ಆದಿಯಾಗಿ ಹಾಲಿವುಡ್ ಜನರನ್ನು ಇಂದಿಗೂ ಸೆಳೆಯುತ್ತಿವೆ.

ಅದು ಮಹದೇವಪುರ ಗ್ರಾಮ. ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ಸಿನೆಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಒಂದರ್ಥದಲ್ಲಿ ಇದು ಸಿನಿಮಾ ಗ್ರಾಮವೇ ಆಗಿಬಿಟ್ಟಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿದೆ ಮಹದೇವಪುರ. ನೂರಾರು ಚಿತ್ರಗಳು ಚಿತ್ರೀಕರಣಗೊಂಡಿರುವ ಇಲ್ಲಿನ ಸಂಸ್ಕೃತಿ, ಸೊಗಡಿಗೆ ಮಾರು ಹೋಗದ ಚಿತ್ರತಾರೆಯರೇ ಇಲ್ಲ.

ಗ್ರಾಮದ ತಿಮ್ಮೇಗೌಡ್ರ ಭವ್ಯ ಬಂಗಲೆಯಲ್ಲಿ ಅತಿ ಹೆಚ್ಚು ಸಿನೆಮಾಗಳ ಚಿತ್ರೀಕರಣಗಳು ನಡೆದಿವೆ. ಪಟೇಲ್ ಕೆಂಪೇಗೌಡ್ರ ತೊಟ್ಟಿಮನೆ ಹಾಗೂ ಸಿದ್ದೇಗೌಡ ಅವರ ತೊಟ್ಟಿ ಮನೆಗಳಲ್ಲೂ ಕೆಲವೊಂದು ಸನ್ನಿವೇಶಗಳನ್ನು ಶೂಟಿಂಗ್ ಮಾಡಲಾಗಿದೆ. ಒಂದೇ ಚಿತ್ರದಲ್ಲಿ ಮೂರು ಮನೆಗಳಲ್ಲಿ ಚಿತ್ರೀಕರಿಸಿರುವ ಉದಾಹರಣೆ ಇದೆ.

149 ವರ್ಷದ ಹಿಂದೆ (1865ರಲ್ಲಿ) ನಿರ್ಮಾಣಗೊಂಡಿರುವ ಈ ಭವ್ಯಬಂಗಲೆ ತೋಟ ಸೇರಿ ಆರು ಎಕರೆ ವಿಸ್ತೀರ್ಣದಲ್ಲಿದೆ. ಆಗಿದು ಮೈಸೂರು ಅರಸರ ಸಂಬಂಧಿಕರದ್ದಾಗಿತ್ತು. ಬೇಸಿಗೆ ಅರಮನೆಯಂತೆ ಇಲ್ಲಿ ರಾಜರು ವಿಶ್ರಾಂತಿಗೆಂದು ಬರುತ್ತಿದ್ದರು ಎಂಬ ಸುದ್ದಿ. ನಂತರ ಬಂಗಲೆ ತಿಮ್ಮೇಗೌಡರ ಸುಪರ್ದಿಗೆ ಬಂತು. ಈಗಿಲ್ಲಿ ಗೌಡರ ನಾಲ್ಕನೇ ತಲೆಮಾರಿನವರು ಜೀವನ ಸಾಗಿಸುತ್ತಿದ್ದಾರೆ. ಎರಡು ಅಂತಸ್ತಿನ ಬಂಗಲೆಯ ಗೋಡೆಗಳಿಗೆ ಚುರುಕಿ ಗಾರೆ ಬಳಸಿದ್ದು, ಹೆಂಚುಗಳನ್ನು ಹೊದಿಸಲಾಗಿದೆ. ಹೊರಭಾಗದಲ್ಲಿ ಕಬ್ಬಿಣದ ಕಂಬಗಳಿವೆ.
ಬಂಗಲೆಯ ಕೆಳಭಾಗದಲ್ಲಿ ಒಂದು ಹಾಲ್, ಆರು ಕೊಠಡಿಗಳು ಹಾಗೂ ಗೋಡೆಯ ಮೇಲೆ ಮರದ ಹಲಗೆಗಳನ್ನು ಜೋಡಿಸಿ ನಿರ್ಮಿಸಲಾಗಿರುವ ವಿಶಾಲ ಮಹಡಿಯಲ್ಲಿ ಲಿವಿಂಗ್ ಹಾಲ್, ಎರಡು ಕೊಠಡಿ, ಡೈನಿಂಗ್ ಹಾಲ್ ಇದೆ. ಮಳೆಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಂಪಿನ ವಾತಾವರಣಕ್ಕೆ ಪೂರಕವಾಗಿದೆ. ಶತಮಾನಗಳ ಮನೆಯ ಬದುಕಿನಲ್ಲಿ ಒಂದಿಷ್ಟೂ ಬದಲಾವಣೆಯಾಗಿಲ್ಲ. ಆ ರೀತಿಯಲ್ಲಿ ಟಿ. ವಾಸುದೇವ ಮತ್ತು ಶ್ರೀನಿವಾಸ್ ಬಂಗಲೆ ಕಾಪಾಡಿಕೊಂಡು ಬಂದಿದ್ದಾರೆ.

ಯಾವ್ಯಾವ ಚಿತ್ರಗಳು?
ಡಾ. ರಾಜ್‌ಕುಮಾರ್ ಮತ್ತು ಅಂಬರೀಷ್ ಅಭಿನಯದ ಒಡಹುಟ್ಟಿದವರು, ಕಾಮನಬಿಲ್ಲು, ಕೌರವ, ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ರಾಜಾಧಿರಾಜ, ವೇದಂ ಪುದಿದು, ಹಾಲಿವುಡ್‌ನ ದಿ ಬ್ಲಾಕ್ ಆಫ್ ಜಂಗಲ್ ಸೇರಿದಂತೆ ಅನೇಕ ಸಿನೆಮಾ ಶೂಟಿಂಗ್ ಇಲ್ಲಿ ನಡೆದಿದೆ. ರಮೇಶ್ ಮತ್ತು ಶೃತಿ ಅಭಿನಯದ ಕರ್ಪೂರದ ಗೊಂಬೆ, ಜಗ್ಗೇಶ ನಟನೆಯ ಬೇವುಬೆಲ್ಲ, ವಿಜಯರಾಘವೇಂದ್ರ ಬಾಲ್ಯದಲ್ಲಿ ನಟಿಸಿದ್ದ ಚಿನ್ನಾರಿ ಮುತ್ತ, ವಿಷ್ಣು ನಟನೆಯ ಬೆತ್ತಲೆಸೇವೆ, ಶಿವರಾಜ್‌ಕುಮಾರ್ ಅವರ ಜನುಮದ ಜೋಡಿ, ರಾಘವೇಂದ್ರ ರಾಜ್‌ಕುಮಾರ್ ಅಭಿನಯಿಸಿರುವ ನಂಜುಂಡಿ ಕಲ್ಯಾಣ ಚಿತ್ರಗಳ ಚಿತ್ರೀಕರಣ ಇಲ್ಲಾಗಿದೆ.
ಇನ್ನು ಸಿದ್ದೇಗೌಡ ಅವರಿಗೆ ಸೇರಿದ 12 ಕಂಬಗಳ ತೊಟ್ಟಿಮನೆಯಲ್ಲಿ ನಟ ಸುನೀಲ್ ಅಭಿನಯದ ಸಿಂಧೂರ ತಿಲಕ, ರವಿಚಂದ್ರನ್ ಅವರ ಹಳ್ಳಿಮೇಷ್ಟ್ರು, ಅಂಜದಗಂಡು, ಸಾಹುಕಾರ ಹಾಗೂ ಓಂ ಪ್ರಕಾಶ್ ನಿರ್ದೇಶಿಸಿದ ಕನ್ನಡಿ ಒಳಗಿನ ಗಂಟು ಧಾರಾವಾಹಿ ಚಿತ್ರೀಕರಣಗೊಂಡಿವೆ. ಈಗ ಬಂಗಲೆ ಮಾಲೀಕರು ವಾಸಕ್ಕೆ ಅಡಚಣೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರೀಕರಣಕ್ಕೆ ಅವಕಾಶ ನೀಡುತ್ತಿಲ್ಲ.
-ಎಂ.ಅಫ್ರೋಜ್
ಖಾನ್‌ಚಿತ್ರಗಳು - ಎಚ್.ಕೆ.ಅಶ್ವಥ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com