ಮನೆಭಾವ!

ಮನೆಭಾವ!
Updated on: 

ಬಾಲ್ಯದಲ್ಲಿನ ಚುರುಕತನ, ವಯಸ್ಸಿಗೆ ತಕ್ಕ ಬುದ್ಧಿ, ಬುದ್ಧಿಯ ಸರಿಯಾದ ಬಳಕೆ, ಹಿರಿಯರ ಮೇಲಿನ ಗೌರವ, ಕಲಿಕಾ ಗ್ರಹಿಕೆ, ಓರಗೆಯ ಹುಡುಗರ ಜತೆಗಿನ ಬೆರೆಯುವಿಕೆ, ಇದೆಲ್ಲದರ ಸಮ್ಮಿಶ್ರಣದಂತಿದ್ದ ಹುಡುಗ, ಎಂಟು ವರ್ಷದ ಸನತ್. ಗೆಳೆಯರೊಂದಿಗೆ ಆಟವಾಡುತ್ತಿದ್ದಾಗ ಮತ್ತೊಬ್ಬ ತನ್ನ ಗೊಂಬೆಯನ್ನು ಮುಟ್ಟಿದ ಎನ್ನುವ ಕಾರಣಕ್ಕೆ ಆತನನ್ನು ಪಕ್ಕದಲ್ಲಿದ್ದ ಚರಂಡಿಗೆ ದಬ್ಬಿಬಿಟ್ಟ. ಸಂಬಂಧಿಕರಲ್ಲಿ ಅಷ್ಟೇ ಅಲ್ಲದೇ ಶಾಲೆಯಲ್ಲೂ ಶಿಕ್ಷಕರ ಪ್ರೀತಿಯ ಹುಡುಗ ಕ್ರಮೇಣ ಸ್ವಾರ್ಥಿಯಾಗಲಾರಂಭಿಸಿದ್ದ. ಸನತ್‌ನ ಸ್ವಭಾವದಲ್ಲಿ ದಿಢೀರ್ ಬದಲಾವಣೆ. ನಡೆದ ಘಟನೆಯಲ್ಲಿ ತಮ್ಮ ಮಗನದೇ ತಪ್ಪಿದೆ ಎನ್ನುವುದು ಗೊತ್ತಿದ್ದರೂ ಆತನ ತಂದೆ ವಹಿಸಿದ್ದು ಮಾತ್ರ ಮಗನ ಪರ.

ಶಾಲೆಯಲ್ಲಿ ಶಿಕ್ಷಕರು ಏನಾದರೂ ಗದರಿದರೆ ಸಾಕು ತಮ್ಮ ಮಕ್ಕಳ ತಪ್ಪೇನೆಂದೂ ಕೇಳದ ಹೆತ್ತವರು ಮೊದಲು ಎರಗುವುದೇ ಶಿಕ್ಷಕನ ಮೇಲೆ. ಅಪ್ಪಿ ತಪ್ಪಿ ಒಂದೆರಡು ಏಟು ಹೊಡೆದರಂತೂ ಮುಗಿದೇ ಹೋಯಿತು. ಮುಂದೆಂದೂ ಆತ/ ಆಕೆ ಆ ಮಗುವಿನ ಸಹವಾಸಕ್ಕೆ ಹೋಗುವಂತಿಲ್ಲ. ಇದರಿಂದ 'ಏನೇ ಮಾಡಿದರೂ ನನ್ನ ತಂದೆ ತಾಯಿ ನನಗೇ ಸಪೋರ್ಟ್ ಮಾಡುತ್ತಾರೆ' ಎನ್ನುವ ಮನೋಭಾವ ಬೆಳೆಸಿಕೊಳ್ಳುತ್ತದೆ ಮಗು. ಉಳಿಪೆಟ್ಟು ಬೀಳದೆ ಕಲ್ಲು ಶಿಲೆಯಾಗುವುದಾದರೂ ಹೇಗೆ?

ಹಿಂದಿನ ಕಾಲದ ಸ್ವರೂಪವೇ ಬೇರೆ. ಸಾಧನೆಯ ಶೃಂಗಕ್ಕೇರಿದ ಬಹಳಷ್ಟು ವ್ಯಕ್ತಿಗಳಲ್ಲಿ ಹೆತ್ತವರ ಪಾತ್ರ ಎದ್ದು ಕಾಣುತ್ತದೆ. ಶಿವಾಜಿಯ ತಾಯಿ ಮಗನಲ್ಲಿ ದೇಶ ಪ್ರೇಮ ಬಿತ್ತದಿದ್ದಿದ್ದರೆ, ಇಂದು ಶಿವಾಜಿಯ ಹೆಸರು ಅಜರಾಮರವಾಗುತ್ತಿರಲಿಲ್ಲ. ಚಂದ್ರಗುಪ್ತನ ತಾಯಿ ಮಗನ ಪ್ರಾಣಕ್ಕೆ ಅಂಜಿ ಅನ್ಯಾಯದ ವಿರುದ್ಧದ ಅವನ ದಂಗೆಗೆ ಸಹಕರಿಸದಿದ್ದಿದ್ದರೆ ಮಗಧ ಸಾಮ್ರಾಜ್ಯ ಉಳಿಯುತ್ತಿರಲಿಲ್ಲ. ಚಾಣಕ್ಯನ ಪ್ರತಿಜ್ಞೆ, ಆರ್ಯಾವರ್ತದ ಕನಸು, ಮಗಧದ ಜನರ ಗೋಳು ಬಹುಶಃ ಹಾಗೆಯೇ ಉಳಿದು ಬಿಡುತ್ತಿತ್ತು. ಶಾಲಾ ದಿನಗಳಲ್ಲಿ ಪೆನ್ನು ಕದ್ದಿದ್ದ, ಧೂಮಪಾನ ಮಾಡಿ ಸಿಕ್ಕಿಕೊಂಡ ಗಾಂಧೀಜಿಯನ್ನು ಅವರ ತಂದೆ ಪೆಟ್ಟು ಕೊಟ್ಟು ಶಿಕ್ಷಿಸದೇ ಹೋಗಿದ್ದರೆ ಮುಂದೆ ಗಾಂಧೀಜಿ ಮಹಾತ್ಮ ಎನ್ನಿಸಿಕೊಳ್ಳುತ್ತಿರಲಿಲ್ಲವೇನೋ. ಇತಿಹಾಸದ ಪುಟಗಳನ್ನು ಒಮ್ಮೆ ತಿರುಗಿಸಿ ನೋಡಿದರೆ ಇಂಥ ನೂರಾರು ಉದಾಹರಣೆಗಳು ಸಿಗುತ್ತವೆ. ಬೇಸರದ ಸಂಗತಿಯೆಂದರೆ ಇಂದಿನ ತಂದೆ ತಾಯಿಯರಿಗೆ ನೀತಿ ಕಥೆಗಳನ್ನು ಹೇಳಲು ಸಮಯವೂ ಇಲ್ಲ, ತಾಳ್ಮೆಯಂತೂ ಮೊದಲೇ ಇಲ್ಲ.

ಒಂದಕ್ಕೊಂದು ಅಂಟಿಕೊಂಡಿರುವಂತಿದ್ದ ಹಳೆಯ ಮನೆಗಳು ಈಗ ಕಾಣಸಿಗುವುದೇ ಅಪರೂಪ. ಸಿಕ್ಕರೂ ಮನೆಯ ಚೆಂದವನ್ನು ಹೆಚ್ಚಿಸುವ ವಿಭಿನ್ನ ರೀತಿಯ ಕಾಂಪೌಂಡ್. ಮಕ್ಕಳನ್ನು ಬೇರೆಯವರೊಂದಿಗೆ ಬೆರೆಯಲು ಬಿಡುವುದೇ ಇಲ್ಲ. ತನಗೆಂದು ಕೊಡಿಸಿದ ನೂರಾರು ರುಪಾಯಿಯ ಆಟದ ಸಾಮಾನುಗಳೇ ಮಗುವಿಗೆ ಎಲ್ಲಾ. 'ಪುಟ್ಟಾ, ನೀನೇನಾದರೂ ಗೊಂಬೆಯನ್ನು ಪಕ್ಕದ ಮನೆ ಹುಡುಗನಿಗೆ ಕೊಟ್ಟೆ ಅಂದ್ರೆ ಮುಗೀತು, ಆತ ಹಾಳುಮಾಡಿ ಬಿಡ್ತಾನೆ' ಎಂಬೆಲ್ಲಾ ಸ್ವಾರ್ಥದ ಮಾತುಗಳು ಮಗುವಿನ ಮನಸ್ಸನ್ನು ಸಣ್ಣದಾಗಿ ಕಲಕಿಬಿಡುತ್ತವೆ. ಓದಿನ ವಿಷಯದಲ್ಲಿ ಯಾರೂ ನಿನ್ನನ್ನು ಸೋಲಿಸಬಾರದು ಎಂಬಂಥ ಒತ್ತಡದ ಮಾತುಗಳು ಆರೋಗ್ಯಪೂರ್ಣ ಪೈಪೋಟಿಗಿಂತ ಇತರರಿಗೆ ಕೆಡುಕನ್ನು ಬಯಸುವಂತೆ ಮಾಡುತ್ತದೆ. ಚಿಕ್ಕ ವಿಷಯಗಳಲ್ಲಿ ಶುರುವಾದ ಸ್ವಾರ್ಥ ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ.
-ಕೋಕಿಲಾ ಎಂ.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com