ಡ್ರೆಸ್ ಡಯೆಟ್

ಈಗಿನ ಕಾಲದಲ್ಲಿ ಮನೆ ಖರ್ಚು ನಿಭಾಯಿಸುವುದೇ ಕಷ್ಟವಾಗಿದೆ...
ಡ್ರೆಸ್ ಡಯೆಟ್
Updated on: 

-ಸಂಸಾರ ತಿಂಗಳ ಖರ್ಚಿನ ಲೆಕ್ಕಾಚಾರ ಹಳಿ ತಪ್ಪುತ್ತಿರುವುದೆಲ್ಲಿ?
-ತಜ್ಞರು ಏನು ಹೇಳುತ್ತಾರೆ?
-ಗೃಹಿಣಿಯ ಬಜೆಟ್‌ನ ಲೆಕ್ಕಾಚಾರವನ್ನು ಬುಡಮೇಲು ಮಾಡುವುದು ಯಾವುದು?



ಬಜೆಟ್ ಸರಿದೂಗಿಸಲು ಇದೇ ದಾರಿ

ಈಗಿನ ಕಾಲದಲ್ಲಿ ಮನೆ ಖರ್ಚು ನಿಭಾಯಿಸುವುದೇ ಕಷ್ಟವಾಗಿದೆ. ಎಷ್ಟೇ ಕೈ ಹಿಡಿದು ಖರ್ಚು ಮಾಡಿದರೂ ಹಣ ಸಾಲುತ್ತಿಲ್ಲ. ಇದು, ಮೊನ್ನೆ ಮೊನ್ನೆಯವರೆಗೂ ನಮ್ಮ ತಾಯಿ, ಚಿಕ್ಕಮ್ಮ, ದೊಡ್ಡಮ್ಮಂದಿರು ಹೇಳುತ್ತಿದ್ದ ಮಾತಾಯಿತು. ಈಗ ಪತಿ-ಪತ್ನಿ ಇಬ್ಬರೂ ದುಡಿದು ಸಂಪಾದಿಸುತ್ತಿರುವ ಕಾಲ. ಇಷ್ಟಾದರೂ ಪರಿಸ್ಥಿತಿ ಬದಲಾಗಿದೆಯಾ? ತಿಂಗಳ ಕೊನೆ ಬಂತೆಂದರೆ ದಂಪತಿಗಳ ಮನಸ್ಸಿನಲ್ಲಿ ಒಂದಷ್ಟು ಅಲುಕು ಇದ್ದೇ ಇರುತ್ತದೆ. ಈ ತಿಂಗಳು ಇಷ್ಟೇ ಹಣದಲ್ಲಿ ಮನೆ ನಿಭಾಯಿಸಬೇಕು ಎಂಬ ಟಾರ್ಗೆಟ್ ರೀಚ್ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ತಿಂಗಳಾದರೂ ನೋಡಬೇಕು ಅಂದುಕೊಳ್ಳುತ್ತಾರೆ.
ಹಾಗಾದರೆ ಈ ಖರ್ಚಿನ ಲೆಕ್ಕಾಚಾರ ಹಳಿ ತಪ್ಪುತ್ತಿರುವುದೆಲ್ಲಿ? ಬೆಲೆ ಏರಿಕೆ ಎಂಬುದು ಮಾಮೂಲಿ ಕಾರಣ. ದಿಢೀರ್ ಎಂದು ಊಹಿಸದೆ ಬರುವ ಖರ್ಚುಗಳು ಗೃಹಿಣಿಯ ಬಜೆಟ್‌ನ ಲೆಕ್ಕಾಚಾರವನ್ನು ಬುಡಮೇಲು ಮಾಡುತ್ತವೆ. ಇದನ್ನು ತಡೆಗಟ್ಟಲು ಉಪಾಯವಿಲ್ಲವೆ? ತಜ್ಞರು ಏನು ಹೇಳುತ್ತಾರೆ?
ಉಪಾಯವಿದೆ ಎನ್ನುತ್ತಾರೆ ಹಣಕಾಸು ತಜ್ಞರು. ಆರು ತಿಂಗಳು 'ಬಟ್ಟೆಗಳ ಡಯೆಟ್‌' ಅನ್ನು ಅನುಸರಿಸಿ ನೋಡಿ ಎನ್ನುತ್ತಾರೆ ಇಂಗ್ಲೆಂಡಿನ ಆರ್ಥಿಕ ತಜ್ಞೆ ಹೀತರ್ ಮ್ಯಾಕ್‌ಗ್ರೆಗರ್. ಇವರು ಮಿತವ್ಯಯ ಸಲಹಾಕಾರರೂ ಆಗಿದ್ದಾರೆ. ಬಟ್ಟೆಗಳ ಶಾಪಿಂಗ್ ಮಹೀಳೆಯರ ಬಹುದೊಡ್ಡ ಚಟ ಎನ್ನುತ್ತಾರೆ. ಅವರು. ಮ್ಯಾಕ್‌ಗ್ರೆಗರ್ ಪ್ರಕಾರ ಈ ಬಾಬ್ತಿನಲ್ಲಿಯೇ ಮಹಿಳೆಯರು ಹೆಚ್ಚು ಹಣ ವ್ಯರ್ಥಗೊಳಿಸುತ್ತಾರೆ. ಹಣಕಾಸಿನ ಲೆಕ್ಕಾಚಾರ ಅಚ್ಚುಕಟ್ಟುಗೊಳಿಸಬೇಕು. ಖರ್ಚು ಕಡಿಮೆ ಮಾಡಬೇಕು ಎಂದೆಲ್ಲ ಬಯಸುವ ಮಹಿಳೆಯರು ಮೊದಲು ತಮ್ಮ ಮನೆಯಲ್ಲಿನ ಉಡುಪು ಸಂಗ್ರಹಾಗಾರವನ್ನು ಒಮ್ಮೆ ನೋಡಿ ಎಂಬುದು ಇವರು ನೀಡುವ ಸಲಹೆ. ಆರು ತಿಂಗಳ ಕಾಲ ಬಟ್ಟೆಗಳ ಡಯೆಟ್ ಪಾಲಿಸಿ. ಫ್ಯಾಶನ್ ಹೆಸರಿನಲ್ಲಿ ಮಾರುಕಟ್ಟೆಗೆ ಪ್ರತಿನಿತ್ಯ ದಾಂಗುಡಿಯಿಡುವ ಬಟ್ಟೆಗಳತ್ತ ಕಣ್ಣುಹಾಯಿಸದಿರಿ ಎನ್ನುತ್ತಾರೆ ಅವರು.
ನೀವು ಬಟ್ಟೆ ಅಂಗಡಿ ಮುಂದೆಯಿಂದ ಹಾದು ಹೋಗುತ್ತೀರಿ. ಅಲ್ಲಿ ಪ್ರದರ್ಶಿಸಿರುವ ಉಡುಪುಗಳೂ ಮನಸೆಳೆಯುತ್ತವೆ. ಆಗ ನೀವು, ಇಲ್ಲ, ನಾನೀಗ ಬಟ್ಟಗಳ ಡಯೆಟ್‌ನಲ್ಲಿದ್ದೇನೆ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ಅಂದಹಾಗೆ ಈ ಪಥ್ಯ ಒಳ ಉಡುಪುಗಳಿಗೆ ಅನ್ವಯವಾಗದಿರಲಿ, ನೀವು ಗಮನವಿಟ್ಟು ನೋಡಿದರೆ, ನಿಮಗೆ ಅಗತ್ಯವಿರುವ ಬದಲು ಅಲ್ಲಿ ನೇತು ಹಾಕಿರುವ, ಡಿಸ್‌ಪ್ಲೇ ಮಾಡಿರುವ ಬಟ್ಟೆಗಳನ್ನು ತಂದಿರುವುದೇ ಹೆಚ್ಚು ಎಂದು ಮನವರಿಕೆಯಾಗುತ್ತದೆ. ಇನ್ನೇನಿದ್ದರೂ, ತೀರಾ ಅಗತ್ಯವಿರುವ ಬಟ್ಟೆಗಳನ್ನು ಮಾತ್ರ ಖರೀದಿ ಮಾಡುತ್ತೇನೆ ಎಂದು ನಿರ್ಧರಿಸಿ ಎಂಬುದಾಗಿ ಮ್ಯಾಕ್‌ಗ್ರೆಗರ್ ಹೇಳುತ್ತಾರೆ.
ನಿಮ್ಮ ಮನೆಯ ಬೀರುವಿನತ್ತ ಕಣ್ಣು ಹಾಯಿಸಿದ ನಂತರ ಮನೆಯಲ್ಲಿ ಕ್ಲೀನಿಂಗ್‌ಗಾಗಿ ಉಪಯೋಗಿಸುವ ಡಿಟರ್ಜೆಂಟ್‌ಗಳ ಬಗ್ಗೆ ಗಮನ ಹರಿಸಿ, ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಡಿಟರ್ಜೆಂಟ್‌ಗಳನ್ನು ಬದಿಗೊತ್ತಿ. ಬೈಕಾರ್ಬೋನೇಟ್ ಸೋಡಾ (ಅಡುಗೆ ಸೋಡಾ) ಬಳಸಿ ಎನ್ನುತ್ತಾರೆ ಅವರು. ಡಿಟರ್ಜೆಂಟ್‌ಗಳಿಗೆ ಹೋಲಿಸಿದರೆ ಇದು ಬಹಳ ಅಗ್ಗ. ಆಹಾರ ಪದಾರ್ಥಗಳ ಖರೀದಿಯಲ್ಲಿ ಮಿತವ್ಯಯ ಸಾಧಿಸಿ. ಸೂಪರ್ ಮಾರ್ಕೆಟ್‌ಗೆ ತೆರಳುವ ಮೊದಲೇ, ಬೇಕಿರುವ ವಸ್ತುಗಳ ಪಟ್ಟಿ ತಯಾರಿಕೊಳ್ಳಿ. ಮಾಲ್‌ಗಳಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಬಿಟ್ಟಾಕಿ.
ಅಂದ ಹಾಗೆ ಮನೆಯ ಖರ್ಚುವೆಚ್ಚದ ಜವಾಬ್ದಾರಿಯನ್ನು ಯಾವುದೇ ಕಾರಣಕ್ಕೂ ಪುರುಷರಿಗೆ ಒಪ್ಪಿಸಬೇಡಿ ಎಂಬುದು ಇವರು ಹೇಳುವ ಮತ್ತೊಂದು ಕಿವಿಮಾತು. ಹಣ ಕಾಸಿನ ಸೂತ್ರ ಸದಾ ನಿಮ್ಮ ಕೈಯಲ್ಲಿರ. ವಾರಕ್ಕೊಮ್ಮೆ, ಒಂದು ಗಂಟೆಯನ್ನು ಇದಕ್ಕಾಗಿ ತೆಗೆದಿಟ್ಟು, ಖರ್ಚಿನ ಎಲ್ಲ ವಿವರ, ಕ್ರೆಡಿಟ್ ಕಾರ್ಡ್, ಸಾಲದ ಕಂತು, ಫೋನ್ ಬಿಲ್ ಇತ್ಯಾದಿ ಎಲ್ಲವನ್ನೂ ಬರೆದಿಡಿ, ಕೆಲವು ಮಹಿಳೆಯರು ಹಣಕಾಸಿನ ವ್ಯವಹಾರಕ್ಕಾಗಿ ಪುರುಷರನ್ನು ಅವಲಂಬಿಸಿರುತ್ತಾರೆ. ಇದರ ಬದಲು ನಿಮ್ಮ ಹಣಕಾಸನ್ನು ನೀವೇ ನಿರ್ವಹಿಸಿ ಎಂಬುದು ಮ್ಯಾಕ್‌ಗ್ರೆಗರ್ ಸಲಹೆ.
ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗಿನ ಕಾಲದ ಮಹಿಳೆಯರಿಗೆ ತಕ್ಕಮಟ್ಟಿಗಾದರೂ ಆರ್ಥಿಕ ಸ್ವಾತಂತ್ರ್ಯ ದೊರೆತಿದೆ. ಖರ್ಚು ಮಾಡಬೇಕಾದಾಗ ಅಳೆದೂ-ತೂಗಿ ಖರ್ಚು ಮಾಡಬೇಕಾದ ಹೊಣೆಯೂ ಅವರ ಮೇಲಿದೆ. ಹಾಗಾಗಿಯೇ ಯಾವುದೇ ಮಹಿಳೆ, ಮನೆಯ ಆರ್ಥಿಕ ಸ್ಥಿತಿಯನ್ನು ನಿಭಾಯಿಸುವ ವಿಚಾರಕ್ಕೆ ಬಂದಾಗ ಈಗಲೂ ಇತಿ-ಮಿತಿಯಲ್ಲಿರಬೇಕಾಗುತ್ತದೆ. ಬಹುಶಃ ಎಲ್ಲ ಕಾಲಕ್ಕೂ ಇದು ಹೀಗೆಯೇ ಎಂದು ತೋರುತ್ತದೆ.

ಪ್ರೇಮ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com