ಮನೆಗೆ ಬಿದಿರ ದಿರಿಸು

ಹಳೇ ಕಾಲ ಹಾಗಿತ್ತು. ಸುಲಭವಾಗಿ ಕೈಗೆಟಕುತ್ತಿದ್ದ ನೈಸರ್ಗಿಕ ಸಂಪನ್ಮೂಲವೆಂದರೆ ಬಿದಿರು. ಅದು ಬೆಳೆದಷ್ಟೂ ಬಾಳಿಕೆ ಎಂಬ ಮಾತಿದೆ.
ಮನೆಗೆ ಬಿದಿರ ದಿರಿಸು
Updated on: 

ಹಳೇ ಕಾಲ ಹಾಗಿತ್ತು. ಸುಲಭವಾಗಿ ಕೈಗೆಟಕುತ್ತಿದ್ದ ನೈಸರ್ಗಿಕ ಸಂಪನ್ಮೂಲವೆಂದರೆ ಬಿದಿರು. ಅದು ಬೆಳೆದಷ್ಟೂ ಬಾಳಿಕೆ ಎಂಬ ಮಾತಿದೆ.

ಆಕಾಶದೆತ್ತರ ಬೆಳೆದು ಹೂ ಬಿಟ್ಟು ಕಾಳು(ಬಿದಿರಕ್ಕಿ) ಚೆಲ್ಲಿದರೆ ಅದು ಬಿದಿರಿನ ಬದುಕಿಗೆ ಕೊನೆ. ಆಗ ಬಿದಿರನ್ನು ಕಡಿದು ತಂದು ಅದರಿಂದಲೇ ಕಂಬ ಹಾಕಿ ಚಾವಣಿಗೂ ಬಿದಿರನ್ನೇ ಬಳಸಿ ಮನುಷ್ಯ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದ. ಬಿದಿರನ್ನು ಸೀಳಿ ಚಾಪೆಯಂತೆ ಹೆಣೆದು ಗೋಡೆಯಾಗಿ ಮುಚ್ಚಿಕೊಳ್ಳುತ್ತಿದ್ದ. ಆದರೆ ಆಧುನಿಕ ಮನೆಗಳ ಕಲ್ಪನೆ ಮೂಡಿದಂತೆ ಬಿದಿರಿನ ಉಪಯೋಗ ಮೂಲೆ ಸೇರಿತು.

ಆದರೆ ಈಗ ಭಾರತವೂ ಸೇರಿದಂತೆ ಚೀನಾ, ಹವಾಯಿ ಮೊದಲಾದೆಡೆಗಳಲ್ಲಿ ಬಿದಿರಿನ ಮನೆಗಳು ಮತ್ತೆ ಜನ ಮನಕ್ಕೆ ಹತ್ತಿರವಾಗುತ್ತಿವೆ. ಇಂದಿನ ಕುಶಲ ತಂತ್ರಜ್ಞರು ಬಿದಿರಿನಿಂದ ಕಲಾತ್ಮಕವಾದ ವಿನ್ಯಾಸಗಳನ್ನು ಸೃಷ್ಟಿಸುತ್ತಿದ್ದಾರೆ. ಇದು ಬಿದಿರಿನದೆಂದು ಅರಿವಾಗದಷ್ಟು ಕೌಶಲ ಮೆರೆಯುತ್ತಿದ್ದಾರೆ. ಪ್ರಮುಖವಾಗಿ ಚೀನಾದಲ್ಲಿ ಬೆಳೆಯುವ ವಿಶೇಷವಾದ ಹಸಿರು ಬಿದಿರು ಇಂತಹ ಮನೆಗಳನ್ನು ರೂಪಿಸಲು ಸಹಕಾರಿಯಾಗಿದೆ.

ದೃಢವಾದ ಬಿದಿರನ್ನು ರಾಸಾಯನಿಕವಾಗಿ ಸಂಸ್ಕಾರಗೊಳಿಸಿ ವಿಶಿಷ್ಟ ಯಂತ್ರಗಳಿಂದ ಹದಗೊಳಿಸಿ ತಯಾರಿಸುವ ಕಲಾತ್ಮಕ ಗೋಡೆಗಳನ್ನು ಜೋಡಿಸಿ ಅಂದವಾದ ಅತ್ಯಾಧುನಿಕ ಸೌಧಗಳನ್ನು ಕಟ್ಟಲಾಗುತ್ತಿದೆ. ಚಾವಣೆಗೂ ಬಿದಿರಿನ ಹೊದಿಕೆ ತಯಾರಿಸುತ್ತಾರೆ. ಬೇಕಾದ ವೈವಿಧ್ಯಮಯ ಬಹುವರ್ಣಗಳಲ್ಲಿ ಸುಂದರ ವಿನ್ಯಾಸಗಳಿಂದ ಗೋಡೆಗಳನ್ನು ನಿರ್ಮಿಸಿ ಅದರಲ್ಲಿ ಚಿತ್ತಾರಗಳನ್ನು ಬಿಡಿಸಲಾಗುತ್ತಿದೆ. ನೆಲಕ್ಕೂ ಹೆಂಚುಗಳನ್ನು ಬಶಲದೆ ಚಿತ್ತಾಕರ್ಷಕವಾಗಿರುವ ನೈಜ ನೆಲವನ್ನು ನಾಚಿಸುವ ತಳವೂ ಬಿದಿರಿನಿಂದಲೇ ಸಿದ್ಧವಾಗುತ್ತಿದೆ.

ಬಾಗಿಲುಗಳು, ಕಿಟಕಿಗಳೂ ಮರದ ಬದಲು ಬಿದಿರಿನಿಂದ ಮೂಡಿ ಬರುವಂತಾಗಿದೆ. ಐಷಾರಮಿ ಮಲಗುವ ಮನೆಗಳ ವಿನ್ಯಾಸವಂತೂ ಯಾವುದೇ ಕಾಂಕ್ರೀಟಿನ ಕಲೆಗಿಂದ ಕಡಿಮೆಯಾಗಿಲ್ಲ. ಆಧುನಿಕ ಶೈಲಿಯ ಸ್ನಾನಗೃಹಗಳನ್ನೂ ಅದರಿಂದ ನಿರ್ಮಿಸಬಹುದು. ತಯಾರಿಕೆಯ ಹಂತದಲ್ಲಿ ಮಿಶ್ರವಾಗುವ ರಾಸಾಯನಿಕಗಳು ಸ್ನಾನದ ಮನೆಯ ಶೈತ್ಯ ವಾತಾವರಣದಲ್ಲೂ ಜಗ್ಗದೆ ಉಳಿಯಲು ಬಿದಿರಿಗೆ ನೆರವಾಗುತ್ತದೆ. ವರಾಂಡಗಳನ್ನೂ ಬಿದಿರಿನ ಸಲಕರಣೆಗಳಿಂದ ಶೋಭಾಯಮಾನಗೊಳಿಸಲಾಗುತ್ತಿದೆ. ಇನ್ನು ಪೂರ್ಣವಾಗಿ ಬಿದಿರಿನಿಂದ ನಿರ್ಮಾಣವಾಗುವ ಮನೆಗಳ ಆಯುಸ್ಸಿನ ಬಗೆಗೆ ಅನುಮಾನಗಳಿರುವುದು ಸಹಜ. ಆದರೆ ದ್ವಿತೀಯ ವಿಶ್ವಯುದ್ಧದ ವೇಳೆ ಜಪಾನಿನಲ್ಲಿ ತಾತ್ಕಾಲಿಕವಾಗಿ ಬಿದಿರಿನಿಂದಲೇ ಸೇತುವೆ ನಿರ್ಮಿಸಿ ಅದರ ಮೇಲೆ ಯಶಸ್ವಿಯಾಗಿ ರೈಲು ಓಡುತ್ತಿತ್ತು ಎಂಬುದನ್ನು ಓದಿದರೆ ಇದರ ದೃಡತೆಯ ಬಗೆಗೆ ಅನುಮಾನಿಸುವುದು ಬೇಡ. ನಮ್ಮ ರಾಜ್ಯದಲ್ಲಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಸಾಕಷ್ಟು ಬಿದಿರು ಸದ್ಬಳಕೆಯಾಗದೆ ಸತ್ತು ನಾಶವಾಗುವುದನ್ನು ತೀರ್ಥಹಳ್ಳಿ ಮೊದಲಾದೆಡೆ ಕಾಣಬಹುದು. ಇಲ್ಲೀಗ ಬಿದಿರಿನ ಮನೆಗಳ ತಂತ್ರಜ್ಞಾನ ವಿರಳವಾಗಿದೆ. ಇಂಥ ಬಿದಿರಿನ ಬಳಸಿ ಮನೆಗಳನ್ನು ನಿರ್ಮಿಸುವುದರಿಂದ ಹಣವೂ ಉಳಿತಾಯ. ಕಾರ್ಮಿಕರು ಮತ್ತು ಇನ್ನಿತರ ಖರ್ಚು ವೆಚ್ಚಗಳಲ್ಲೂ ಉಳಿತಾಯ ಸಾಧ್ಯ. ನೈಸರ್ಗಿಕ ಸಂಪನ್ಮೂಲಗಳೂ ಉಳಿಯುತ್ತವೆ.


- ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com