ಹಸಿರು ಮನೆಯ ಹಾದಿ

ಹಸಿರು ಮನೆಯ ಹಾದಿ

ಬೆಂಗಳೂರಿನಂಥ ನಗರದ ಮನೆಗಳನ್ನು `ಕಾಂಕ್ರೀಟ್ ಕಟ್ಟಡ, ಅಲ್ಲೇನಿದೆ ಗಾಳಿ, ಬೆಳಕು? ನಮ್ಮೂರೇ ಚೆಂದವು-ಸ್ವಚ್ಛ ಗಾಳಿ, ಬೆಳಕು ಸಿಗುತ್ತೆ' ಅಂತ ಜರಿಯುವವರೂ ಇದ್ದಾರೆ. ಆದರೆ, ಈ ಮಾತು ಸುಳ್ಳಾಗಿಸುವ ರೀತಿ ನಗರ ಮನೆಗಳು ಸ್ವಚ್ಛ ಹಸಿರು ವಾತಾವರಣ...

ಬೆಂಗಳೂರಿನಂಥ ನಗರದ ಮನೆಗಳನ್ನು `ಕಾಂಕ್ರೀಟ್ ಕಟ್ಟಡ, ಅಲ್ಲೇನಿದೆ ಗಾಳಿ, ಬೆಳಕು? ನಮ್ಮೂರೇ ಚೆಂದವು ಸ್ವಚ್ಛ ಗಾಳಿ, ಬೆಳಕು ಸಿಗುತ್ತೆ' ಅಂತ ಜರಿಯುವವರೂ ಇದ್ದಾರೆ. ಆದರೆ, ಈ ಮಾತು ಸುಳ್ಳಾಗಿಸುವ ರೀತಿ ನಗರ ಮನೆಗಳು ಸ್ವಚ್ಛ ಹಸಿರು ವಾತಾವರಣದ ಪರಿಸರಕ್ಕೆ ಅಂದಿಗಿಂತ ಇಂದು ಹೆಚ್ಚು ತೆರೆದುಕೊಳ್ಳುತ್ತಿವೆ. ಇದಕ್ಕೆ ನಿಮ್ಮ ಇಚ್ಛಾಶಕ್ತಿಯೇ ಶ್ರೀರಕ್ಷೆ. ಹಸಿರು ಪ್ರಜ್ಞೆ, ಸ್ವಚ್ಛ ಪರಿಸರ ರೂಪಿಸಿಕೊಳ್ಳಲು ನೀವು ವಾಸವಿರುವ ಮನೆಯೊಂದೇ ಸಾಕು. ಮನೆಯೆಂದ ಮೇಲೆ ಕಾಂಪೌಂಡ್ ಇದ್ದೇ ಇರುತ್ತದೆ.

ಕಾಂಪೌಂಡ್ ಒಳಗೂ ಒಂದಷ್ಟು ಮಣ್ಣಿರುವ ಜಾಗವಿದ್ದರೆ ಸಾಕು ಅಲ್ಲೂ ಪುಟ್ಟ ಹಸಿರು ತೋಟ ನಿರ್ಮಿಸಿಕೊಳ್ಳಲು ಸಾಧ್ಯ. ಟೆರೇಸ್ ಜಾಗವಂತೂ ಹಸಿರು ಗಿಡಗಳ ತಾಣವಾಗಿಸಿಕೊಳ್ಳಲು ಹೇಳಿ ಮಾಡಿಸಿದ ಜಾಗ. ನಿಮಗೆ ಲಭ್ಯವಿರುವ ಜಾಗದಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಿಡುವು ಸಿಕ್ಕಾಗ ಒಂದೊಂದು ಕುಂಡ, ಅದಕ್ಕೊಂದು ನಿಮ್ಮ ಇಷ್ಟದ ಗಿಡ ನೆಟ್ಟು ನೀರು, ಗೊಬ್ಬರ ಹಾಕುತ್ತಾ ಪೋಷಿಸಿ ನೋಡಿ, ಒಂದಾರು ತಿಂಗಳಲ್ಲಿ ಗಾರ್ಡನ್ ಸಿಟಿಗೇ ನಿಮ್ಮದೊಂದು ಹೆಗ್ಗಳಿಕೆಯ ಮನೆಯಾಗುತ್ತದೆ.

ಈಗಂತೂ ರಸ್ತೆ ಬದಿಯಲ್ಲೇ ಮಣ್ಣು, ಗೊಬ್ಬರ, ನರ್ಸರಿ ಮಾಡಿರುವ ಗಿಡಗಳು ಹೇರಳವಾಗಿ ಸಿಗುತ್ತವೆ. ಪೂಜೆ, ಔಷಧಿ ಉದ್ದೇಶಕ್ಕೆ ತುಳಸಿ ಗಿಡ ಹಾಕಿಕೊಳ್ಳಬಹುದು. ಇದರಲ್ಲಿ ಕೃಷ್ಣ ತುಳಸಿ, ಬಿಳಿ ತುಳಸಿ ಗಿಡಗಳೂ ಸಿಗುತ್ತವೆ. ಕರಿಬೇವಿನ ಸೊಪ್ಪು ಗಿಡ ಹಾಕಿದರೆ ಒಗ್ಗರಣೆಗೆ ಪದೇಪದೆ ಅಂಗಡಿಗೆ ಹೋಗುವುದು ತಪ್ಪುತ್ತದೆ. ಒಂದು ಪರಂಗಿ ಗಿಡ ಬೆಳೆದು ಫಲಕ್ಕೆ ಬಂದರೆ ನಿಮ್ಮ ಹೊಟ್ಟೆ ತುಂಬುವಷ್ಟು ಹಣ್ಣು ನಿಮ್ಮದಾಗುತ್ತದೆ. ಒಂದೆರಡು ಬಾಳೇಗಿಡ ಬೆಳೆದರೆ ಸಾಕು, ನಿಮ್ಮ ಮನೆಯ ಶುಭ ಕಾರ್ಯಕ್ಕೆ, ಊಟಕ್ಕೆ ಅಣಿಯಾಗುತ್ತದೆ. ಮೆಣಸಿನಕಾಯಿ, ಬದನೆ, ಟೊಮೊಟೊ ಗಿಡ, ಕೊತ್ತಂಬರಿ ಸೊಪ್ಪುಗಳನ್ನೂ ಬೆಳೆಯಬಹುದು. ಹೀರೆಕಾಯಿ, ಸೋರೆಕಾಯಿ, ಆಗಲಕಾಯಿ ಬಳ್ಳಿ ಗಿಡಗಳನ್ನು ನಿಮ್ಮ ಮನೆಗೇ ಹಬ್ಬಿಸಿಕೊಳ್ಳಬಹುದು. ಚೆಂಡು, ಮಲ್ಲಿಗೆ, ಕಾಕಡ, ಸ್ಪಟಿಕ, ಕನಕಾಂಬರ ಹೂವುಗಳನ್ನೂ ಟೆರೇಸ್‍ನಲ್ಲಿ ಕುಂಡಗಳಲ್ಲಿ ಹಾಕಿ ಫಸಲು ತೆಗೆಯಬಹುದು.

ಇಂಥ ಹೂವುಗಳು ದೇವರ ಪೂಜೆಗೆ, ಗೃಹಿಣಿಯರ ಮುಡಿಗೆ ಅಲಂಕೃತಗೊಳ್ಳುತ್ತವೆ. ಹಲವು ಗಿಡಗಳನ್ನು ಮನೆಯ ಒಳಾಂಗಣದಲ್ಲೂ ಕುಂಡದಲ್ಲಿ ಹಾಕಿ ಬೆಳೆದು ಹಸಿರ ಸಮೃದ್ಧಿ ಕಾಣುವ ಅವಕಾಶ ನಿಮಗೆ, ನಿಮ್ಮ ಮನೆಗೆ ಇದೆ. ಕಾಂಕ್ರೀಟ್ ಕಟ್ಟಡವನ್ನು ಗ್ರೀನ್‍ಹೌಸ್ ಆಗಿ ರೂಪಿಸಿಕೊಳ್ಳುವ ಜಾಣ್ಮೆ ಮಾತ್ರ ನಿಮ್ಮ ಕೈಯಲ್ಲೇ ಇದೆ. ದುಡಿದು ದಣಿದು ಬಂದಾಗ ನೀವೇ ಬೆಳೆದ ಗಿಡಗಳತ್ತ ಒಮ್ಮೆ ಕಣ್ಣಾಯಿಸಿದರೂ ಸಾಕು ನಿಮ್ಮ ಕಣ್ಮನಕ್ಕೆ ಖುಷಿ ನೀಡಿ ದಣಿವಾರಿಸುವುದು ಖಚಿತ. ನೀವು ಬೆಳೆದ ತರಕಾರಿಯಿಂದಲೇ ಅಡುಗೆ ಮಾಡಿ ತಿನ್ನುವಾಗ ಸಿಗುವ ಖುಷಿ, ಸಂಭ್ರಮ ಹೇಳತೀರದು. ನಮ್ಮ ಮನೆಯ ವಾತಾವರಣದಲ್ಲಿ ಇಷ್ಟೆಲ್ಲ ಸಾಧ್ಯತೆಗಳಿವೆ ಎಂಬುದರ ಮನವರಿಕೆ ಮೊದಲು ನಮಗಾಗಬೇಕು. ಅನ್ಯ ವಿಷಯಗಳತ್ತ ತಲೆಕೆಡಿಸಿಕೊಳ್ಳದೆ ಯಾಂತ್ರಿಕ ಬದುಕಿನಲ್ಲಿ ಬರೀ ಯಂತ್ರವಾಗುವ ಬದಲು ಕೈತೋಟದ ಕ್ರಿಯಾಶೀಲತೆ ಬೆಳೆಸಿಕೊಳ್ಳಬಹುದು. ಮುಂದೊಂದು ದಿನ ನಿಮಗೆ ನಿಮ್ಮದೇ ಸ್ವಂತ ತೋಟ ಮಾಡಿಕೊಳ್ಳುವುದಕ್ಕೂ ಇಂಥ ಹವ್ಯಾಸವೇ ಪ್ರೇರಣೆಯಾದೀತು.

-ಕಗ್ಗೆರೆ ಪ್ರಕಾಶ್

Related Stories

No stories found.

Advertisement

X
Kannada Prabha
www.kannadaprabha.com