
ಊಟ ಮಾಡಲು ಮೇಜು ಬೇಕೇ ಬೇಕು ಎನ್ನುವವರೇ ಹೆಚ್ಚು. ಅದರ ಬಳಿ ಕುರ್ಚಿಯ ಮೇಲೆ ಕುಳಿತು ಊಟ ಮಾಡುವುದೇ ಎಲ್ಲರಿಗೂ ಪ್ರಿಯವಾದುದು. ಭೋಜನ ಸಾಮಗ್ರಿಗಳೆಲ್ಲವನ್ನೂ ಅಲ್ಲೇ ತಂದಿಟ್ಟು ಬೇಕಾದಂತೆ ತಾವೇ ಬಡಿಸಿಕೊಳ್ಳುವುದೇ ರೂಢಿಯಾಗುತ್ತಿದೆ. ಸೊಗಿಸಿನ ಭೋಜನಕ್ಕೆ ಬಳಸುವ ಮೇಜಿನ ಬಗೆಗೂ ಹತ್ತು ಹಲವು ಸಲಹೆಗಳು ದೊರಕುತ್ತವೆ. ಹೆಚ್ಚೇಕೆ, ಅದಕ್ಕೂ ಒಂದು ಕೋಷ್ಟಕವೇ ಸಿದ್ಧವಾಗಿದೆ...
ಹೊಸ ಮನೆಯನ್ನು ಕಟ್ಟಿಸಿದ ಮೇಲೆ ಆಕರ್ಷಕವಾದ ಊಟದ ಹಾಲ್ ಕೂಡ ಅಲ್ಲಿ ವಿಜೃಂಭಿಸಬೇಕು. ಸಾಂಪ್ರಾದಾಯಿಕವಾಗಿ ನೆಲದ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತು ಉಣ್ಣುವ ಕಾಲ ಇದಲ್ಲ.
ಡೈನಿಂಗ್ ಟೇಬಲ್ ಅಥವಾ ಊಟದ ಮೇಜು ಖರೀದಿಗೆ ಮುನ್ನ ಐದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮೊದಲನೆಯದು ಅದರ ಗುಣಮಟ್ಟ. ಮರದ ಟೇಬಲ್‌ಕೊಳ್ಳುತ್ತಿದ್ದರೆ, ಊಟದ ವೇಳೆ ಬೀಳುವ ನೀರು ಮತ್ತು ಉಪ್ಪಿನಿಂದ ಧಕ್ಕೆಯಾಗದಂತೆ ದೃಢವಾಗಿರುವ ತೇಗ, ಹಲಸು, ಓಕ್, ಮೇಪಲ್ ಮುಂತಾದ ಮರದ ಹಲಗೆಗಳಿಂದ ತಯಾರಾದ ಮೇಜನ್ನೇ ಆರಿಸಿ.
ಕಾಲಕಾಲಕ್ಕೆ ಇವನ್ನು ರಕ್ಷಣಾತ್ಮಕ ಲೇಪನಗಳ ಮೂಲಕ ಹವೆಯ ಬದಲಾವಣೆಗಳಿಂದ ಕೆಡದ ಹಾಗೆ ಮಾಡಬಹುದು. ಸುಧೀರ್ಘ ಕಾಲ ಉಳಿಯುತ್ತವೆಯಲ್ಲದೆ ಬೇಡವಾದಾಗ ಅರ್ಧ ಬೆಲೆಗಾದರೂ ಮಾರಬಹುದು. ಹೀಗಾಗಿ ಉತ್ತಮ ಗುಣಮಟ್ಟದ ಮರವನ್ನೇ ಆಯ್ದುಕೊಳ್ಳಿ.
ಎರಡನೆಯದು ಉಕ್ಕಿನ ಕಾಲುಗಳಿರುವ ಗಾಜು ಅಥವಾ ಅಮೃತಶಿಲೆಯ ಹಲಗೆಯಿರುವ ಮೇಜುಗಳನ್ನು ಆರಿಸಿಕೊಳ್ಳಬಹುದು. ಗಾಜು ತುಂಬಾ ಹಗುರವಾಗಿರುತ್ತದೆ. ಅಲ್ಲದೆ ತಣ್ಣಗಿನ ಅನುಭವ ನೀಡುತ್ತದೆ. ಉಪ್ಪು, ಖಾರ, ತುಕ್ಕು, ಮಳೆ, ಬಿಸಿಲು ಏನೇ ಇರಲಿ, ಇದರ ಮೇಲೆ ಬಿದ್ದರೆ ಅದನ್ನು ಕೆಡಿಸುವುದಿಲ್ಲ. ಇದರ ಮೇಲಿರಿಸಿದ ಊಟದ ಸಾಮಗ್ರಿಗಳು ಅಚ್ಚುಕಟ್ಟಾಗಿ, ಆಕರ್ಷಖವಾಗಿ ಕಾಣುವ ಕಾರಣ ಊಟ ತುಂಬಾ ಪ್ರಿಯವಾಗುತ್ತದೆ.
ಮೂರನೆಯದು ಮೇಜಿನ ಅಳತೆ. ಅದು ಎರಡೂವರೆ ಅಡಿಗಿಂತ ಎತ್ತರವಿರದಿದ್ದರೆ ಒಳ್ಳೆಯದು. ಅದರ ಹಲಗೆ ಮೊಣಕಾಲುಗಳಿಗೆ ತಗಲುವಂತಿರಬಾರದು. ಮೊಣಕೈಗಳು ಮೇಜಿಗೆ ಸರಾಗವಾಗಿ ಎಟಕುವಂತಿರಬೇಕು. ಇದರಿಂದ ಊಟದ ಸಮಯದಲ್ಲಿ ಕಿರಿಕಿರಿಯಾಗುವುದಿಲ್ಲ. ಕೈ ಮೇಜಿಗೆ ತಗಲಿ ತುತ್ತು ಕೆಳಗೆ ಬೀಳುವ ಅಪಾಯವೂ ಇಲ್ಲ.
ನಾಲ್ಕನೆಯದು ಮೇಜಿನ ಆಕಾರವನ್ನು ನಿರ್ಧರಿಸಿಕೊಳ್ಳಿ. ದೀರ್ಘ ಅಂಡಾಕಾರದ ಮೇಜುಗಲು ಊಟದ ಮನೆಯಲ್ಲಿದ್ದರೆ ನೋಡಲು ಶೋಭೆ. ಹಾಗೆಯೇ ಸ್ಥಳವನ್ನೂ ಉಳಿಸುತ್ತದೆ. ಇದರಲ್ಲಿ 84 ಇಂಚು ಅಳತೆಯ ಮೇಜಿನ ಮುಂದೆ ಹತ್ತು ಮಂದಿಗೆ ಊಟಕ್ಕೆ ಕುಳಿತುಕೊಳ್ಳಬಹುದು. ಅದೇ ಆಯತಾಕಾರದಲ್ಲಿದ್ದರೆ ಆರು ಮಂದಿಗಷ್ಟೇ ಜಾಗ ಸಿಗುತ್ತದೆ. ಇತ್ತೀಚೆಗೆ ಅಂಡಾಕೃತಿಯ ಮೇಜುಗಳೇ ಅನುಕೂಲ ಎನಿಸುತ್ತಿವೆ.
ಐದನೆಯದು ಮಕ್ಕಳು ಆಹಾರ ಚೆಲ್ಲಿದರೆ, ಜಿಡ್ಡು, ಸಾಂಬಾರು ಇತ್ಯಾದಿಗಳು ಬಿದ್ದರೆ ಅಂದಚಂದ ಹಾಳಾಗದಂಥ ಮೇಲ್ಭಾಗವಿರುವ ಮೇಜುಗಳನ್ನು ಆರಿಸಿ. ಶುಚಿಗೊಳಿಸುವುದೂ ಸುಲಭ. ಕಲೆಗಳು ಉಳಿಯುವುದಿಲ್ಲ. ಊಟಕ್ಕೆ ಬರುವಾಗ ಮೇಜಿನ ನೋಟ ಹಸಿವನ್ನು ಕೆರಳಿಸುವಂತಿರಬೇಕಲ್ಲದೆ ಊಟ ಬೇಡವೆಂಬ ಮನೋಭಾವ ತರದಂತಿರಲಿ.
ನಿತ್ಯ ಊಟಕ್ಕೆ ಎಷ್ಟು ಜನವಿರುತ್ತಾರೆ ಎಂಬ ಲೆಕ್ಕಾಚಾರದ ಮೇಲೆ ಊಟದ ಟೇಬಲ್ ಆಯ್ಕೆ ಮಾಡುವುದು ಯೋಗ್ಯ. ಹೆಚ್ಚು ಮಂದಿಯಿದ್ದರೆ ಕಡಿಮೆ ಸ್ಥಳವನ್ನು ಬಳಸಿ ಹೆಚ್ಚು ಜನರಿಗೆ ಅನುಕೂಲವಾಗುವ ಮಾದರಿಯೇ ಇರಲಿ. ನೈಸರ್ಗಿಕ ಸೌಂದರ್ಯಕ್ಕೆ ಬೆಲೆ ಕೊಡುವವರು ಮರದಿಂದ ಸಿದ್ಧವಾದ ಅಲಂಕಾರಿಕ ಟೇಬಲ್‌ಗಳನ್ನು ಕೊಳ್ಳಿ. ಇದರ ಬೆಲೆ ತೀರ ದುಬಾರಿಯೆಂಬುದು ನೆನಪಿರಲಿ.
ಆದರೆ ಕಡಿಮೆ ಬೆಲೆಗೆ ಸಿಗುವುದೆಂದು ಪ್ಲೈವುಡ್ ಜಾತಿಯ ಮೃದು ಮರದ ತಯಾರಿಕೆಗಳು ಬೇಡ. ಹೆಚ್ಚು ಜನಗಳಿರುವಲ್ಲಿ ನಾಲ್ಕು ಕಾಲಿನ ಟೇಬಲಿಗಿಂತ ಮಧ್ಯೆ ಒಂದೇ ಕಾಲಿನಲ್ಲಿ ಇಡೀ ಟೇಬಲನ್ನು ಆಧರಿಸುವ ದುಂಡಗಿನ ಟೇಬಲ್ ಇದ್ದರೆ ನಮ್ಮ ಕಾಲುಗಳಿಗೆ ವೃಥಾ ಆಗುವ ತೊಂದರೆಯನ್ನು ತಪ್ಪಿಸುತ್ತದೆ.
ಕೊಠಡಿ ಸಣ್ಣದಾಗಿದ್ದರೆ ಕಡಿಮೆ ಜಾಗವನ್ನು ಉಪಯೋಗಿಸಬಲ್ಲ ಅನುಕೂಲಕರ ಟೇಬಲ್ ಖರೀದಿಯೇ ಉತ್ತಮ. ಮೇಲ್ಭಾಗದ ಬಣ್ಣ ಬಿಳಿಯದಾಗಿದ್ದರೆ ಪದಾರ್ಥಗಳು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿ ಊಟದ ಸವಿ ಹೆಚ್ಚುತ್ತದೆ. ಊಟದ ಮೇಜಿನ ಮೇಲೆ ಬಟ್ಟೆ ಹಾಸುವುದನ್ನು ಸಾಧ್ಯವಿರುವಷ್ಟು ತಪ್ಪಿಸುವಂಥ ಮೇಲ್ಮೈಯನ್ನೇ ಸ್ವೀಕರಿಸುವುದು ಯೋಗ್ಯವೇ.
-ಪ. ರಾಮಕೃಷ್ಣ ಶಾಸ್ತ್ರಿ
Advertisement