ಇಂಥ ಆಂಟಿಯರು ಪಕ್ಕದ ಮನೆಯಲ್ಲಿದ್ದರೆ ಹುಷಾರು...!

ನನಗಾಗ ಸಳಸಳ, ಭರಭರ ಟೀನೇಜು. ಮೆದುವಾಗಿ ಮಾತಾಡಿಸಿದರೆ ನಂಬುವ, ಬೈದರೆ ಅಳಬೇಕೆನ್ನಿಸುವ, ವಿನಾಕಾರಣದ ಆಕ್ರೋಶ, ಅಸಹನೆಯ ವಯಸ್ಸು!...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನನಗಾಗ ಸಳಸಳ, ಭರಭರ ಟೀನೇಜು. ಮೆದುವಾಗಿ ಮಾತಾಡಿಸಿದರೆ ನಂಬುವ, ಬೈದರೆ ಅಳಬೇಕೆನ್ನಿಸುವ, ವಿನಾಕಾರಣದ ಆಕ್ರೋಶ, ಅಸಹನೆಯ ವಯಸ್ಸು! ಇಷ್ಟು vulnerable ವಯಸ್ಸಿನಲ್ಲಿ, ಯಾರ ಮೇಲಾದರೂ ಸಾಯುವಷ್ಟು ಡಿಪೆಂಡ್ ಆಗೋಣ ಅನ್ನಿಸುವ ವಯಸ್ಸಿನಲ್ಲಿ, ಯಾರಾದರೂ ನಮ್ಮನ್ನು ಸಾಯುವಷ್ಟು ಪ್ರೀತಿಸಬಾರದೇ ಅಂತ ಅನ್ನಿಸುವ ಭಾವುಕ ವಯಸ್ಸಿನಲ್ಲಿ ನಮ್ಮ ಪಕ್ಕದ ಮನೆಯ ಆಂಟಿ ಪರಿಚಯವಾದಳು. ಈ ಕತೆಯಲ್ಲಿ ಆಕೆಯೇ ವಿಲನ್. ಎಸ್, ಲೇಡಿ ವಿಲನ್!

ನೋಡಲು ಗುಂಡು ಗುಂಡಗಿನ, ಮೀಡಿಯಂ ಎತ್ತರದ, ತುಸು ಬೆಳ್ಳಗಿನ ನಲವತ್ತರ ಆಂಟಿ. ಆಕೆ ತನ್ನನ್ನು ತಾನು ಕೆನೆ ತೆಗೆದ ಹಾಲಿನಷ್ಟು ಬೆಳ್ಳಗಿದ್ದೇನೆ ಎಂದು ನಂಬಿಕೊಂಡಿದ್ದಳು. ಮತ್ತು ಕಪ್ಪಗಿರುವವರು ಬದುಕಲಿಕ್ಕೇ ನಾಲಾಯಕ್ ಎಂಬ ತಿರಸ್ಕಾರ. 'ಬೆಳಗ್ಗೆ ಗಣಪತಿ ದೇವಸ್ಥಾನಕ್ಕೆ ಹೋಗಿದ್ದೆ, ಅರ್ಚನೆ ಮಾಡಿಸಿದೆ, ಅರ್ಚನೆ ಮಾಡಿದ ಪೂಜಾರಿ ಅಷ್ಟೇನೂ ಕಲರ್ ಇರಲಿಲ್ಲ, ಸ್ವಲ್ಪ ಡಿಮ್ಮು. ಆದರೆ ಚೆನ್ನಾಗಿ ಮಂತ್ರ ಹೇಳಿದ...' ಹೀಗೆ ಪೂಜಾರಿಯನ್ನೂ  colour concept ನಿಂದಲೇ ನೋಡುತ್ತಿದ್ದಳು ಆಂಟಿ.

'ಬೆಳಗ್ಗೆ ಜಾಗಿಂಗ್ ಹೋಗುವಾಗ ಒಬ್ಬಳು ಹುಡುಗಿ ಜಾಗಿಂಗ್ ಮಾಡುತ್ತಿದ್ದಳು. ಅವಳು ಎಷ್ಟು ಬೆಳ್ಳಗಿದ್ದಳು ಅಂದರೆ ಅಷ್ಟು ಬೆಳ್ಳಗೆ....' ಆಗ ಆಂಟಿಯ ಮಾತು ಕೇಳಿಸಿಕೊಳ್ಳುವವರು... 'ಆಂಟಿ, ನಿಮಗಿಂತ ಬೆಳ್ಳಗಿದ್ದಳಾ? ಸಾಧ್ಯವಿಲ್ಲ ಬಿಡಿ' ಅನ್ನಬೇಕು. ಆಂಟಿಯ ಆತ್ಮ ಆಗ ಬೆಳ್ಳಗೆ ಪೂರಿಯಂತೆ ಉಬ್ಬಿ ಹೋಗುತ್ತಿತ್ತು. 'ನನ್ನಷ್ಟೇ ಕಲರ್ ಇದ್ದಳು ಅಂದ್ಕೋ... ಅಥವಾ ನನಗಿಂತ ಸ್ವಲ್ಪ ಡಿಮ್ ಇರಬಹುದು.' ಆಂಟಿ ತನ್ನ ಬಣ್ಣದ ಬಗ್ಗೆ ಬೀಗುತ್ತಾ ಹೇಳುತ್ತಿದ್ದಳು.
ಹೀಗೆ ನಿತ್ಯ ಬೆಳ್ಳಗಿರುವುದರ ಬಗ್ಗೆ ತಿಂಗಳುಗಟ್ಟಲೇ ಆಂಟಿಯ ಪ್ರವಚನ ಕೇಳಿ.. ಕೇಳಿ ನನಗೇ ಗೊತ್ತಾಗದಂತೆ ನನ್ನ ಗೋದಿ ಬಣ್ಣದ ಬಗ್ಗೆ ಕೀಳರಿಮೆ ಬೆಳೆಯತೊಡಗಿತು. To make matters worse  ನನ್ನಕ್ಕ ವಿಪರೀತ ಬೆಳ್ಳಗಿದ್ದಳು. ಅವಳು ಬೆಳ್ಳಗಿದ್ದಾಳೆಂದು, ನಾನು ಗೋದಿ ಬಣ್ಣಕ್ಕಿದ್ದೇನೆಂದು ನಮಗೆ ಗೊತ್ತಾಗಿದ್ದೇ ಈ ಆಂಟಿಯ ಕೃಪೆಯಿಂದಾಗಿ. ಬಣ್ಣದ ಕಾರಣದಿಂದ ಸುಪೀರಿಯಾರಿಟಿ ಅಥವಾ ಕೀಳರಿಮೆ ಬೆಳೆಸಿಕೊಳ್ಳಬಹುದೆಂಬ ಕಲ್ಪನೆಯೂ ನಮಗಿರಲಿಲ್ಲ.

ಒಟ್ಟಿನಲ್ಲಿ ನಾವು ಅಕ್ಕತಂಗಿಯರ ನಡುವೆ ವರ್ಣಭೇದ ನೀತಿ ತಂದಿಟ್ಟಳು ಆಂಟಿ. 'ಹೇಮ (ನನ್ನ ಅಕ್ಕ), ನೀನು ಹೆಸರಿಗೆ ತಕ್ಕಂತೆ ಬಂಗಾರದ ಬಣ್ಣ. ಹುಡುಗ ನಿನ್ನನ್ನು ನೋಡಲು ಬಂದರೆ ಕಣ್ಣು ಮುಚ್ಚಿಕೊಂಡು ಒಪ್ಪಿಕೊಂಡು ಹೋಗುತ್ತಾನೆ ಬಿಡು. ಪಾಪ, ಸುನೀತಳಿಗೇ ಪ್ರಾಬ್ಲಮ್ಮು. ಯಾಕೆ ಅವಳು ನಿನ್ನ ಥರ ಬೆಳ್ಳಗಿಲ್ಲ? ಸ್ವಲ್ಪ ಗೋದಿ ಬಣ್ಣ ಅಲ್ವ ಅವಳದು?' ಆಂಟಿ ಪ್ರಶ್ನಾರ್ಥಕವಾಗಿ ನನ್ನತ್ತ ನೋಡುತ್ತಿದ್ದಳು.

'ನಾನು ನಮ್ಮಮ್ಮನ ಥರ. ಅವಳು ನಮ್ಮ ತಂದೆಯ ಥರ ಇರಲಿ ಬಿಡಿ ಆಂಟಿ' ಅಂತ ನನ್ನಕ್ಕ ಮಾತು ತೇಲಿಸುತ್ತಿದ್ದಳು. ನಾನು ನಮ್ಮಕ್ಕ ಒಟ್ಟಿಗೆ ಕಾಲೇಜಿಗೆ ಹೊರಟರೆ 'ಸುನೀತ, ನೀನು ಮುಖಕ್ಕೆ ಸ್ವಲ್ಪ ಕ್ರೀಮು ಪೌಡರು ಹಚ್ಚಿಕೊಂಡು ಹೋಗು. ಹೇಮ, ನಿನಗೇನು ಅಗತ್ಯವಿಲ್ಲ ಬಿಡು. ನೀನಿರೋದೇ ಬೆಳ್ಳಗೆ...' ಅಂತ ಆಂಟಿ ನೈಟಿ ಹಾಕಿಕೊಂಡು ಸೊಂಟದ ಮೇಲೆ ಕೈ ಇಟ್ಟು ನಿಂತುಕೊಂಡು ಆರ್ಡರ್ ಮಾಡುತ್ತಿದ್ದಳು. ತಿಂಗಳುಗಟ್ಟಲೆ ನಮ್ಮಕ್ಕನ ತಲೆ ತೀಡಿ ತೀಡಿ ಅಂತೂ ನಮ್ಮಕ್ಕನಿಗೆ ತಾನು ಬೆಳ್ಳಗಿದ್ದೇನೆಂದೂ ಹಾಗಾಗಿ ಸುಪೀರಿಯಾರಿಟಿ ಫೀಲ್ ಮಾಡಬೇಕೆಂದು ಮನದಟ್ಟು ಮಾಡಿಸಿದಳು. ಮತ್ತು 'ಸುನೀತ, ನೀನು ಗೋದಿ ಬಣ್ಣ. ಹಾಗಾಗಿ ನೋಡೋಕೆ ಅಷ್ಟು ಚೆನ್ನಾಗಿಲ್ಲ' ಅಂತ ಕೀಳರಿಮೆ ಮೂಡಿಸುವಲ್ಲಿ ಯಶಸ್ವಿಯಾದಳು.
Ofcourse, ಬೆಳ್ಳಗಿದ್ದರೆ ಒಂದು ಸುತ್ತು ಹೆಚ್ಚು ಚೆನ್ನಾಗಿ ಕಾಣಬಹುದೇನೋ... ಆದರೆ ಬೆಳ್ಳಗಿರುವುದೇ ಬದುಕಲ್ಲ ಅಂತ ಆ ವಯಸ್ಸಲ್ಲಿ ಗೊತ್ತಾಗಬೇಕಲ್ಲ. ಸದ್ಯಕ್ಕೆ ನಾನು ಬೆಳ್ಳಗಾಗಿಬಿಡಬೇಕು ಅಷ್ಟೇ. ಅದಷ್ಟೇ ನನ್ನ ತಲೆಯಲ್ಲಿತ್ತು. ತಲೆಗೆ ಏನಾದರೂ ಹೊಕ್ಕರೆ ಅದನ್ನು ಮಾಡಿಯೇ ಸಿದ್ದ. ಹಾಗಾಗಿ ಬೆಳ್ಳಗಾಗುವುದು ಹೇಗೆ ಅಂತ ಹುಡುಕತೊಡಗಿದೆ. ಸಿಕ್ಕ ಸಿಕ್ಕ ಕ್ರೀಮು ಟ್ರೈ ಮಾಡಿದೆ. ದುಡ್ಡು ಖರ್ಚಾಯಿತು. ಯಾರೋ ಬೀಟ್‌ರೂಟ್ ರಸ ಹಚ್ಚು ಅಂದರು. ಹಚ್ಚಿದೆ. ನನ್ನ ಚರ್ಮಕ್ಕೆ ಒಗ್ಗಲಿಲ್ಲವೇನೋ. ಮುಖವೆಲ್ಲಾ ಅಲರ್ಜಿಯಾಗಿ ಗುಳ್ಳೆಗಳು.

ಮಳೆ ನೀರಲ್ಲಿ ಮುಖ ತೊಳಿ ಅಂದರು. ತೊಳೆದೆ. ಜೀವ ತಣ್ಣಗಾಯಿತು ಅಷ್ಟೇ. ರಾಗಿಗುಡ್ಡ (ಶಿವಮೊಗ್ಗ)ದ ಬಳಿ ಒಬ್ಬ ಸ್ವಾಮೀಜಿ ಇದ್ದಾನೆ. ಆತ ತಲೆ ಮೇಲೆ ಕೈ ಇಟ್ಟು ಬಾಡಿ ಕಲರ್ರೇ ಚೇಂಜ್ ಮಾಡಿಬಿಡುತ್ತಾನಂತೆ ಅಂತ ಕೇಳಿದೆ. ದುಡ್ಡು ಒಟ್ಟು ಮಾಡಿಕೊಂಡು ಅವನನ್ನು ನೋಡಲೆಂದೇ ಶಿವಮೊಗ್ಗಕ್ಕೆ ಹೋದರೆ ಗೊತ್ತಾಗಿದ್ದು ಆ ಸ್ವಾಮೀಜಿಯ ಲಾಡಿ ಲೂಸು ಅಂತ. ಬಸ್ ಚಾರ್ಜಿಗಷ್ಟೇ ದುಡ್ಡು ಉಳಿದು ಹಸಿದು ಬೆಂಗಳೂರಿನ ಬಸ್ಸು ಹತ್ತಿದವಳಿಗೆ ಪಕ್ಕದಲ್ಲಿ ಕೂತ ಆಂಟಿ ನಾಲ್ಕು ಬಾಳೆಹಣ್ಣು ಕೊಟ್ಟು 'ತಿನ್ನು ಹಸಿದಿದ್ದೀಯಾ ಅನ್ನಿಸುತ್ತೆ' ಅಂದಳು. ಅವಳು ಕೈಗೆ ಹಣ್ಣು ಕೊಟ್ಟಾಗ ಆಕೆಯ ಕಣ್ಣಲ್ಲಿನ ಮೃದು ಭಾವ ನನಗೆ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಅವಳ ಬಣ್ಣ, ರೂಪ ನನಗಿವತ್ತು ನೆನಪಿಲ್ಲ.

ಆ ಆಂಟಿಯಾಗಿದ್ದರೆ ಬಣ್ಣ ನೆನಪಿಟ್ಟುಕೊಂಡು ಹೇಳಿರುತ್ತಿದ್ದಳೋ ಏನೋ... ಬಸ್ಸಿನಲ್ಲಿ ಬಬ್ಬಳು ಸಿಕ್ಕಳು, ಕಪ್ಪಿದ್ದಳು, ಆದರೂ ತಿನ್ನಲು ಹಣ್ಣು ಕೊಟ್ಟಳು ಅಂತ. ಕರ್ಮ! ಧರ್ಮಸ್ಥಳ, ಶೃಂಗೇರಿ, ಹೊರನಾಡು, ಮನೆದೇವತೆ ಉಚ್ಚಿಂಗಮ್ಮ... ಮುಂತಾಗಿ ಎಲ್ಲಾ ದೇವರಿಗೂ ಹೋಲ್‌ಸೇಲ್ ಆಗಿ ಮನವಿ ಸಲ್ಲಿಸಿದೆ. 'ನಮ್ಮಕ್ಕನನ್ನು ಬೆಳ್ಳಗೆ ಹುಟ್ಟಿಸಿ ನನ್ನನ್ನು ಕಪ್ಪಗೆ ಹುಟ್ಟಿಸಿದ್ದೀಯಲ್ಲ... ನಿನಗೆ ಕರುಣೆಯಿಲ್ಲವೇ...? ಹೋಗಲಿ, ಈಗಲೂ ಕಾಲ ಮಿಂಚಿಲ್ಲ. ದಿನಬೆಳಗಾಗುವುದರೊಳಗೆ ನನ್ನನ್ನು ಬೆಳ್ಳಗಾಗಿಸು.'

ನೆಟ್‌ವರ್ಕ್ ಸಿಗಲಿಲ್ಲವೋ ಏನೋ... ದೇವರು ನನಗೆ ರಿಪ್ಲೈ ಮಾಡಲಿಲ್ಲ. ಇತ್ತ ನಾನು ಬೆಳ್ಳಗಿನ ಹುಡುಗಿಯರನ್ನು ನೋಡಿದರೆ ಸಂಕೋಚದ ಮುದ್ದೆಯಾಗಿ ಬಿಡುತ್ತಿದ್ದೆ. ಆಂಟಿ ಹುಟ್ಟಿಸಿದ್ದ ಬಣ್ಣದ ಕೀಳರಿಮೆ ನನ್ನನ್ನು ಖಿನ್ನಳಾಗಿಸಿತ್ತು. ಭಾಷಣ, ನಾಟಕ, ಡ್ಯಾನ್ಸು ಅಂತ ಸದಾ ಫುಲ್ ಜೋಷ್‌ನಲ್ಲಿರುತ್ತಿದ್ದ ನಾನು ಈ ನಡುವೆ ಮಂಕಾಗಿದ್ದನ್ನು ಗಮನಿಸಿದ ನಮ್ಮ ಹೈಸ್ಕೂಲ್ ಪ್ರಾಂಶುಪಾಲರು ನನ್ನನ್ನು ನಿಲ್ಲಿಸಿ. 'ಯಾಕಮ್ಮಾ, ಏನಾದ್ರೂ ಪ್ರಾಬ್ಲಮ್ಮಾ...? ಯಾಕೆ ಈ ನಡುವೆ ಸೈಲೆಂಟಾಗಿ ಬಿಟ್ಟಿದ್ದೀಯ' ಅಂತ ಕೇಳಿದ್ದರು. ಆಗ ನನ್ನ ಪಕ್ಕ ಬೆಳ್ಳನೆ ಗೆಳತಿ ದೀಪ ಇದ್ದಳು. ಆದರೂ ನಮ್ಮ ಪ್ರಾಂಶುಪಾಲರ ಗಮನ, ಕಾಳಜಿ ನನ್ನ ಮೇಲಿತ್ತು. ಇಂತಹ ಸಂದರ್ಭಗಳಲ್ಲೆಲ್ಲಾ ಎಲ್ಲರೂ ಆಂಟಿಯಂತೆ ಯೋಚಿಸುವುದಿಲ್ಲ. ಟ್ಯಾಲೆಂಟ್, ವ್ಯಕ್ತಿತ್ವಕ್ಕೆ ಬೆಲೆ ಕೊಡುವ ನಮ್ಮ ಪ್ರಾಂಶುಪಾಲರ ಥರದವರೂ ಇರುತ್ತಾರೆ ಅನ್ನಿಸಿ ನನ್ನ ಕಾನ್ಫಿಡೆನ್ಸ್ ಹೆಚ್ಚುತ್ತಿತ್ತು. ಬಣ್ಣವೇ ಬದುಕಲ್ಲ. ಬದುಕಿಗೆ ಸಾವಿರಾರು ಬಣ್ಣಗಳು ಅಂತ ಧೈರ್ಯ ಮೂಡುತ್ತಿತ್ತು.

ಆದರೆ ಆಂಟಿಯ 'ಕಲರ್ ಕಲರ್ ವ್ಹಾಟ್ ಕಲರ್‌' ಪ್ರವಚನದ ಮುಂದೆ ನನ್ನೆಲ್ಲಾ ಧೈರ್ಯ, ಭರವಸೆ ವಾಶ್ ಔಟ್ ಆಗಿ ಬಿಡುತ್ತಿತ್ತು. ಮತ್ತೆ ನನಗೆ ಆ ಆಂಟಿಯಿಂದ ಬಿಡುಗಡೆ ಸಿಕ್ಕಿದ್ದು ಕಡೆಗೆ ನಮ್ಮ ತಂದೆಗೆ ಬೇರೆ ಊರಿಗೆ ಟ್ರಾನ್ಸ್‌ಫರ್ ಆದಾಗಲೇ. Unfortunately,, ಆಕೆ ಅಷ್ಟು ಹೊತ್ತಿಗಾಗಲೇ ನನ್ನ ಜ್ಜ್ಟಗೆ ಸಾಕಷ್ಟು ಡ್ಯಾಮೇಜ್ ಮಾಡಿದ್ದಳು. ವಿನಾಕಾರಣ, ನನ್ನ ಬಣ್ಣದ ಬಗ್ಗೆ ಮೂಡಿಸಿದ್ದ ಕೀಳರಿಮೆ ಹೋಗಿಸಿಕೊಳ್ಳಲು ನನಗೆ ವರುಷಗಳೇ ಬೇಕಾದವು.
=
ನಿಮ್ಮ ಅಕ್ಕಪಕ್ಕದ ಮನೆಗಳಲ್ಲೂ ಇಂಥ ಆಂಟಿಯರೋ, ಅಕ್ಕಂದಿರೋ ಇರಬಹುದು. ಇದ್ದರೆ ಬೆಳ್ಳಗೇ ಇರಬೇಕು. ಇಲ್ಲದಿದ್ದರೆ ಬದುಕಿರುವುದೇ ವೇಸ್ಟು. ಚೂಪು ಮೂಗಿದ್ದವರಷ್ಟೇ ಮನುಷ್ಯರು. ಮೊಂಡು ಮೂಗು, ಚಿಕ್ಕ ಮೂಗು ಇದ್ದರೆ ನೋಡಲು ಚೂರೂ ಚೆನ್ನಾಗಿ ಕಾಣಲ್ಲ... ಥೂ ಅಸಹ್ಯ!

ಅಗಲ ಕಣ್ಣು ನೋಡೋಕೆ ಚಂದ. ಚಿಕ್ಕ ಕಣ್ಣಿದ್ದರೆ ನೋಡೋಕೆ ಚೂರೂ ಚೆನ್ನಾಗಿ ಕಾಣಲ್ಲ. ಕುಳ್ಳಗಿರಲೇಬಾರದು. ಅಟ್ ಲೀಸ್ಟ್, ಶಿಲ್ಪ ಶೆಟ್ಟಿಯಷ್ಟಾದರೂ ಹೈಟಿರಬೇಕು. ಪ್ರೊಫೆಷನ್ ಅಂದ್ರೆ ಡಾಕ್ಟರು. ಓದಿದರೆ ಡಾಕ್ಟರ್ ಓದಬೇಕು. ಬಿಟ್ಟರೆ ಸಾಫ್ಟ್‌ವೇರ್. ಬೇರೆಲ್ಲಾ ವೇಸ್ಟ್ ನನ್ನ ಪ್ರಕಾರ. ಬದುಕಿದರೆ ಅಮೆರಿಕಾದಲ್ಲಿ ಬದುಕಬೇಕು. ಡಾಲರ್‌ಗಳಲ್ಲಿ ದುಡ್ಡು ಸಂಪಾದಿಸಬೇಕು. ಇಂಡಿಯಾದಲ್ಲಿ ಏನಿದೆ ಮಣ್ಣು...? ಹೀಗೆ ಥರಾವರಿ ನಂಬಿಕೆಗಳಿರುವ ಜನ, ತಾವು ನಂಬಿದ್ದೇ ಸರಿ ಎಂದು ತೀರ್ಮಾನಿಸಿದ ಜನ, ಹಾಗೆ ತೀರ್ಮಾನಿಸಿ ಸಿಕ್ಕವರಿಗೆಲ್ಲಾ ಪ್ರವಚನ ನೀಡುವ ಜನ, ತಾವು ನಂಬಿ ಕೆಟ್ಟದ್ದಲ್ಲದೆ ಅಕ್ಕ ಪಕ್ಕದವರನ್ನೂ ತಮ್ಮ ನಂಬಿಕೆಗಳಿಂದ ಹಾಳು ಮಾಡುವ ಜನ.

ಇಂಥ ಭ್ರಮಾಧೀನ ಜನರ ಭ್ರಮೆಯ ಮಾತುಗಳಿಗೆ ಕಿವಿ ಕೊಡಬೇಡಿ. ಕೊಟ್ಟು ಕೀಳರಿಮೆಯಿಂದ ನರಳಬೇಡಿ.

ಸಣ್ಣ ಕಣ್ಣಿನ ಜಪಾನೀಯರು ಬುದ್ಧಿಮತ್ತೆಗೆ ಹೆಸರಾದವರು. ಇನ್ಫೋಸಿಸ್ ನಾರಾಯಣ ಮೂರ್ತಿಯವರು ನೋಡಲು ತುಸು ಕಪ್ಪು. ಐದಡಿ ಒಂದೆರಡು ಇಂಚಿನ ಪೂಜಾ ಗಾಂಧಿ, ರಮ್ಯಾ ಸಿನೆಮಾ ತೆರೆಯನ್ನು ಆಳುತ್ತಿಲ್ಲವೇ...? ಅಷ್ಟು ಹೆಸರು, ಜನಪ್ರಿಯತೆ ಪಡೆದ ಸಚಿನ್ ಡಾಕ್ಟರೂ ಅಲ್ಲ, ಸಾಫ್ಟ್‌ವೇರೂ ಅಲ್ಲ ಮತ್ತು ಆತ ಇಂಡಿಯಾದಲ್ಲೇ ಬದುಕುತ್ತಿದ್ದಾನೆ. ಬದುಕಿನ ಒಳವೃತ್ತದ ಆತ್ಮ ಬಂಧುಗಳು, ನಿಮ್ಮ ಆಸಕ್ತಿ ಮತ್ತು ನೀವು ಮಾಡುತ್ತಿರುವ ಕೆಲಸದಲ್ಲಿ ನಿಮಗಿರುವ ಪ್ಯಾಷನ್ ಅಷ್ಟೇ ನಿಮಗೆ ಬದುಕಿನ ಉತ್ಕೃಷ್ಟ ಸುಖಗಳನ್ನು ನೀಡಬಲ್ಲುದು. ಉಳಿದೆಲ್ಲಾ ಭ್ರಮೆಗಳು ವೇಸ್ಟು.
=
ಇತ್ತೀಚೆಗೆ ಪರಿಚಯದವರೊಬ್ಬರು ಮಾತಿನ ಮಧ್ಯೆ ಅಂದರು. 'ವಿಷಯ ಗೊತ್ತಾಯ್ತಾ...? ಆ ಆಂಟಿ ಹೋಗಿಬಿಟ್ಟರಂತೆ.' 'ಯಾವ ಆಂಟಿ?' ನಾನು ಕೇಳಿದೆ. 'ಅದೇ ಬಣ್ಣ ಬಣ್ಣ ಅಂತ ಬಡ್ಕೋತಿತ್ತಲ್ಲ ಆ ಆತ್ಮ...' ನನ್ನ ಪರಿಚಯದವರು ಮಾತು ಮುಂದುವರಿಸಿದರು. ಅವರು ಹೇಳಿದ್ದರ ಸಾರಾಂಶ ಹೀಗಿತ್ತು. ನಮ್ಮ ತಂದೆಗೆ ಟ್ರಾನ್ಸ್‌ಫರ್ ಆಗಿ ನಾವು ಆ ಊರು ಬಿಟ್ಟ ಮೇಲೆ ಆ ಆಂಟಿಗೆ ಲೇಟಾಗಿ ಮಕ್ಕಳಾದವಂತೆ. ಎರಡು ಗಂಡು ಮಕ್ಕಳು. ಮಕ್ಕಳಾದ ಮೇಲೆ ಅದೇನಾಯಿತೋ ವಿಪರೀತ ದಪ್ಪವಾಗಿಬಿಟ್ಟರಂತೆ. ಇತ್ತೀಚೆಗೆ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡರಂತೆ. ಆಕೆಯ ಗಂಡ ಇನ್ನೊಂದು ಮದುವೆ ಮಾಡಿಕೊಂಡ. ನನ್ನ ಪರಿಚಿತರು ನಿಟ್ಟುಸಿರಿಟ್ಟರು.

-ಸುನೀತ ಹೆಚ್.ಡಿ
anish2620@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com