ಮುಟ್ಟಾಗುವ ಮುನ್ನ ಕಿರಿಕಿರಿ, ನೋವು ಪರಿಹಾರಕ್ಕೆ ಸೂತ್ರಗಳು

ಪ್ರತೀ ತಿಂಗಳು ಶೇ. 85 ರಷ್ಟು ಮಹಿಳೆಯರು ಮುಟ್ಟಾಗುವ ಮುನ್ನ ಸಿಟ್ಟು, ಖಿನ್ನತೆ, ಹೊಟ್ಟೆ ನೋವು, ಬೆನ್ನುನೋವು ಮೊದಲಾದ ನೋವುಗಳಿಂದ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಇದೀಗ ಸಾಮಾಜಿಕ ತಾಣಗಳಲ್ಲಿ  ಎಂಬ #Happytobleed ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗುತ್ತಿರುವುದನ್ನು ನೋಡಿರಬಹುದು. ಮುಟ್ಟಾಗುವುದು ಅಥವಾ ಋತುಸ್ರಾವವಾಗುವುದು ಹೆಣ್ಣು ದೇಹದ ಸಹಜ ಪ್ರಕ್ರಿಯೆಯೇ ಆಗಿದ್ದರೂ, ಮುಟ್ಟಾಗುವ ದಿನಗಳ ಮುನ್ನ ಅನುಭವಿಸುವ ಶಾರೀರಿಕ ಮತ್ತು ಮಾನಸಿಕ ಸಂಕಟಗಳು ಅಷ್ಟಿಷ್ಟಲ್ಲ. ಪ್ರತೀ ತಿಂಗಳು ಶೇ. 85 ರಷ್ಟು ಮಹಿಳೆಯರು ಮುಟ್ಟಾಗುವ ಮುನ್ನ ಸಿಟ್ಟು, ಖಿನ್ನತೆ, ಹೊಟ್ಟೆ ನೋವು, ಬೆನ್ನುನೋವು ಮೊದಲಾದ ನೋವುಗಳಿಂದ ಒದ್ದಾಡುತ್ತಾರಂತೆ. ಮುಟ್ಟಾಗುವ ದಿನದ ಮುನ್ನ ಹೆಣ್ಮಕ್ಕಳ ಮೂಡ್ ಆಗಾಗ ಬದಲಾಗುತ್ತಲೇ ಇರುತ್ತದೆ. ಕೆಲವೊಬ್ಬರಿಗೆ ಹಸಿವು ಜಾಸ್ತಿಯಾದರೆ ಇನ್ನು ಕೆಲವರಿಗೆ ಹಸಿವೇ ಇಲ್ಲದಿರುತ್ತದೆ. ಹೊಟ್ಟೆಯಲ್ಲಿ ಅಸಾಧ್ಯ ನೋವು, ಮೀನಖಂಡ ಸೆಳೆತ, ಮುಖದಲ್ಲಿ ಮೊಡವೆ..ಇನ್ನು ಸಾಕಷ್ಟು ಬೇನೆಗಳು ಇರುತ್ತವೆ. 
ಈ ಹೊತ್ತಲ್ಲಿ ದೇಹದಲ್ಲಾಗುವ ಬದಲಾವಣೆಯನ್ನು ಪಿಎಂಎಸ್ (pre menstrual syndrome) ಎಂದು ಹೇಳುತ್ತಾರೆ.
ಹಾಗಾದರೆ ಪಿಎಂಎಸ್‌ನ್ನು ಹದ್ದುಬಸ್ತಿನಲ್ಲಿಡುವುದು ಹೇಗೆ? ಎಂಬ ಪ್ರಶ್ನೆಗೆ ಇಲ್ಲಿದೆ ಪರಿಹಾರ
ಸೇವಿಸುವ ಆಹಾರದ ಬಗ್ಗೆ ಗಮನವಿರಲಿ
ಅತೀ ಹೆಚ್ಚು ಉಪ್ಪು ಖಾರದ ವಸ್ತುಗಳಿಂದ ಹೊಟ್ಟೆಯಲ್ಲಿ ತಳಮಳವುಂಟಾಗುತ್ತದೆ. ಆದ ಕಾರಣ ಇಂಥಾ ಆಹಾರಗಳ ಸೇವನೆ ಬೇಡ. ಕಾಫಿ, ಮದ್ಯ ಸೇವನೆ ಬೇಡವೇ ಬೇಡ. ಮುಟ್ಟಾಗುವ ದಿನಕ್ಕಿಂತ ಒಂದು ವಾರ ಮುನ್ನ ನಿಮ್ಮ ಆಹಾರದಲ್ಲಿ ಬೇಳೆ ಕಾಳುಗಳನ್ನು ಹಣ್ಣು ಹಂಪಲುಗಳು, ತರಕಾರಿಗಳನ್ನು ಯಥೇಚ್ಛ ಸೇವಿಸಿ. ಯಾವುದೇ ಆಹಾರವನ್ನು ಸೇವಿಸುವಾಗ ಆಹಾರ ಸೇವನೆಯ ಸಮಯದಲ್ಲಿ ನಿರ್ದಿಷ್ಟ ಅಂತರವಿರಲಿ. 
ಶಾರೀರಿಕ ವ್ಯಾಯಾಮ
ದೇಹಕ್ಕೆ  ವ್ಯಾಯಾಮ ಅತ್ಯಗತ್ಯ. ಪ್ರತೀ ದಿನ ಸ್ವಲ್ಪ ಹೊತ್ತು ವ್ಯಾಯಾಮ ಮಾಡಿದರೆ, ಸ್ನಾಯುಗಳು ಬಲಗೊಳ್ಳುವುದು ಮಾತ್ರವಲ್ಲದೆ ದೇಹದ ತೂಕವೂ ಕ್ರಮದಲ್ಲಿರುತ್ತದೆ.
ವಿಟಾಮಿನ್‌ಗಳು
ಕ್ಯಾಲ್ಶಿಯಂ, ಮೆಗ್ನೇಶಿಯಂ, ವಿಟಾಮಿನ್ ಬಿ6 ಮತ್ತು ವಿಟಾಮಿನ್ ಇ ಹೊಂದಿರುವ ಪದಾರ್ಥಗಳನ್ನು ಸೇವಿಸಿ.
ಮನೆ ಮದ್ದು
ಶುಂಠಿ ಅಥವಾ ಜೀರಿಗೆ ಜಗಿದು ನುಂಗುವ ಮೂಲಕ ಹೊಟ್ಟೆ ನೋವು ಶಮನವಾಗುತ್ತದೆ. ದೇಹದಲ್ಲಿ ಸಕ್ಕರೆಯ ಅಂಶ ಕಡಿಮೆ ಆಗದಂತೆ ನೋಡಿಕೊಳ್ಳಬೇಕು. ಲೈಮ್ ಸೋಡಾ ಅಥವಾ ಜೀರಿಗೆ ನೀರು ಕುಡಿದರೆ ರಿಲಾಕ್ಸ್ ಆಗುತ್ತದೆ. 
ಮಾನಸಿಕ ಒತ್ತಡ ಕಡಿಮೆ ಮಾಡಿ
ಆ ಹೊತ್ತಿನಲ್ಲಿ ಮಾನಸಿಕ ಒತ್ತಡ ಅನುಭವಿಸುವವರು ಪ್ರಾಣಾಯಾಮ, ಯೋಗ ಅಥವಾ ಮಸಾಜ್ ನಿಂದ ದೇಹದ ಒತ್ತಡವನ್ನು ಕಡಿಮೆ ಮಾಡಬೇಕು. ಈ ದಿನಗಳಲ್ಲಿ ನಿದ್ದೆ ಅತೀ ಅಗತ್ಯ. ದೇಹವನ್ನು ಎಷ್ಟು ದುಡಿಸಿಕೊಳ್ಳುತ್ತಿರೋ ಅದಕ್ಕೆ ತಕ್ಕಂತೆ ವಿಶ್ರಾಂತಿಯೂ ಅಗತ್ಯ ಎಂಬುದು ನೆನಪಿರಲಿ.
ಗರ್ಭ ನಿರೋಧಕ ಮಾತ್ರೆ ಸೇವಿಸುವವರು
ಗರ್ಭ ನಿರೋಧಕ ಮಾತ್ರೆ ಸೇವಿಸುವವರಿಗೆ ಈ ರೀತಿ ಪಿಎಂಎಸ್ ಇದ್ದರೆ ಕಡಿಮೆ ಪ್ರಮಾಣದ ಗರ್ಭ ನಿರೋಧಕ ಮಾತ್ರೆ ಸೇವಿಸಿದರೆ ನೋವು ಕಡಿಮೆಯಾಗುತ್ತದೆ.
ಖಿನ್ನತೆಯಿದ್ದರೆ ವೈದ್ಯರ ಸಲಹೆ ಪಡೆಯಿರಿ
ಮುಟ್ಟಾಗುವ ದಿನಗಳಲ್ಲಿ ಅತೀವ ಖಿನ್ನತೆ ಅನುಭವಿಸುತ್ತಿದ್ದರೆ ವೈದ್ಯರ ಸಲಹೆ ಪಡೆದು ಖಿನ್ನತೆ ನಿವಾರಣೆ ಮಾತ್ರೆಗಳನ್ನು ಸೇವಿಸಬಹುದು.
ಯಥೇಚ್ಛ ನೀರು ಕುಡಿಯಿರಿ
ಕೆಲವರ ಮುಖ, ಕೈ ಕಾಲು, ಮುಖ ಬೆಚಳಿಕೊಂಡಿರುತ್ತದೆ. ಹೀಗಾಗುತ್ತಿದ್ದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ. ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ಅಜೀರ್ಣ ಸಮಸ್ಯೆ ಕಂಡು ಬರುವುದಿಲ್ಲ. ಮಾತ್ರವಲ್ಲ ಮೂತ್ರ ವಿಸರ್ಜನೆ, ರಕ್ತದೊತ್ತಡ ನಿಯಂತ್ರಣ, ಮಲಬದ್ಧತೆ, ಪೊಟಾಷಿಯಂ ಲೆವೆಲ್ ನ್ನು ನಿಯಂತ್ರಣದಲ್ಲಿರಿಸಲು ನೀರು ಅತ್ಯಗತ್ಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com