ದೇವರಕೋಣೆ ಶುಚಿತ್ವ, ಅನುಸರಿಸಬೇಕಾದ ನೀತಿ ನಿಯಮಗಳು

ಪ್ರತಿಯೊಬ್ಬರ ಮನೆಯಲ್ಲಿ ದೇವರ ಪೂಜೆ-ಉಪಾಸನೆಗೆ ದೇವರ ಕೋಣೆ ಇದ್ದೇ ಇರುತ್ತದೆ. ದೇವರಕೋಣೆಯೆಂದರೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಟ್ಟಡವೊಂದು ಮನೆಯಾಗುವುದು ಅಲ್ಲಿ ವಾಸಿಸುವ ಮನುಷ್ಯರಿಂದ.  ಹಾಗೇಯೇ ಮನೆ ಮಂದಿರವಾಗುವುದು ಅಲ್ಲಿ ನೆಲೆನಿಂತ ದೇವರ ಕೋಣೆಯಿಂದ ಎನ್ನುವುದು ಹಿರಿಯರ, ಅನುಭವಿಗಳ ಮಾತು. ಮನೆ ಅನ್ನುವುದು ಮನದ ಮಿಡಿತ, ತುಡಿತ, ಸಂಸ್ಕಾರಗಳ ಮೇಲೆ ನಿಂತಿದೆ. ಆ ಮನಸ್ಸಿನ ಲಯ ಈ ದೇವರ ಕೋಣೆಯ ಮೇಲೆ ಅವಲಂಬಿಸಿದೆ. ಆಸ್ತಿಕರ ಪಾಲಿಗೆ ಮನೆಯ ಬಹುಮುಖ್ಯ ಭಾಗ ದೇವರ ಮನೆ. ಇದನ್ನು ಎಷ್ಟೇ ಅಚ್ಚುಕಟ್ಟಾಗಿ ಇಟ್ಟುಕೊಂಡಷ್ಟೂ ಅವರಿಗೆ ಕಡಿಮೆಯೇ.

ಪ್ರತಿಯೊಬ್ಬರ ಮನೆಯಲ್ಲಿ ದೇವರ ಪೂಜೆ-ಉಪಾಸನೆಗೆ ದೇವರ ಕೋಣೆ ಇದ್ದೇ ಇರುತ್ತದೆ. ದೇವರಕೋಣೆಯೆಂದರೆ ದೇವರ ಮೂರ್ತಿ ಅಥವಾ ಭಾವಚಿತ್ರಗಳನ್ನು ಅಡ್ಡಾದಿಡ್ಡಿಯಾಗಿ ಮನಸ್ಸಿಗೆ ಬಂದಂತೆ ಇಡುವ ಒಂದು ಜಾಗವಾಗಿರುತ್ತದೆ. ಕುಟುಂಬದ ಸದಸ್ಯರು ಯಾವ ಯಾವ ತೀರ್ಥಕ್ಷೇತ್ರಗಳಿಗೆ ಹೋಗುತ್ತಾರೆಯೋ, ಆ ತೀರ್ಥಕ್ಷೇತ್ರದಲ್ಲಿನ ದೇವರ ಚಿತ್ರ ಅಥವಾ ಸಣ್ಣಮೂರ್ತಿಯನ್ನು ತಂದು ಪ್ರತಿಷ್ಠಾಪಿಸುವುದು ನಮ್ಮ ಹವ್ಯಾಸವಾಗಿ ಹೋಗಿದೆ.

ದೇವರ ಕೋಣೆ ಶುಚಿತ್ವ

ಅವಸರದಲ್ಲಿ ಪೂಜೆ ಸಲ್ಲಿಸಿ ತೆರಳುವಾಗ ಏನಾದರೂ ಯಡವಟ್ಟಾಗಿ ಅನಾಹುತ ಆಗಬಹುದು ಎಂಬ ಅಂಜಿಕೆ ಕೆಲವರಿಗೆ ಇದ್ದೇ ಇರುತ್ತದೆ. ಕಡಿಮೆ ಅವಧಿಯಲ್ಲಿ ದೇವರ ಪೂಜೆ ಮಾಡುವವರಿಗೆ ಕೆಲವೊಂದು ಸರಳ ನಿಲುವುಗಳು ತಿಳಿದಿದ್ದರೆ ಚೆನ್ನ. ಕೆಲ ಸಲಹೆ, ಸೂಚನೆಗಳನ್ನು ಪಾಲಿಸಿದರೆ ಮನಸ್ಸಿಗೂ ನೆಮ್ಮದಿ.

ದೇವರ ಮನೆಗೆ ಸ್ನಾನ ಮಾಡಿ ತೆರಳುವಾಗ ಒಂದು ಒದ್ದೆ ಬಟ್ಟೆ ಜತೆಗೊಯ್ಯಿರಿ. ತುಪ್ಪ ಅಥವಾ ಎಣ್ಣೆ ದೀಪ ಹಚ್ಚಿದ ತಕ್ಷಣ ಇದರಿಂದ ಕೈ ಒರೆಸಿಕೊಂಡರೆ ದೇವರ ಕೋಣೆಯ ಇತರೆ ಭಾಗ ಜಿಡ್ಡಾಗುವುದಿಲ್ಲ. ಅಲ್ಲದೆ ದೇವರ ಮನೆಯಲ್ಲಿ ಎಲ್ಲದರೂ ಎಣ್ಣೆ ಅಥವಾ ತುಪ್ಪ ಬಿದ್ದರೆ ತಕ್ಷಣ ಆ ಬಟ್ಟೆಯಿಂದ ಒರೆಸುವುದರಿಂದ ಜಿಡ್ಡು ನೆಲದ ಮೇಲೆ ಉಳಿಯುವುದಿಲ್ಲ. ಎಣ್ಣೆ ದೀಪ ಇಟ್ಟ ಜಾಗದಲ್ಲಿ ಕೊಂಚ ಜಿಡ್ಡು ಇದ್ದಂತೆ ಅನ್ನಿಸಿದರೂ ಒರೆಸಿ ಬಿಡಿ. ಹೀಗೆ ಮಾಡಿದರೆ ಜಿಡ್ಡು ಗಟ್ಟುವ ಸಮಸ್ಯೆ ಇರದು. ಕರ್ಪೂರದ ಆರತಿ, ಅಗರ ಬತ್ತಿ ಆರತಿ ಮಾಡುವ ಪರಿಪಾಠ ಸಾಮಾನ್ಯ. ಇವನ್ನು ದೇವರ ಕೋಣೆಯ ಒಳಗೆ ಇಡುವ ಬದಲು ಆರತಿ ಆದ ತಕ್ಷಣ ಅದನ್ನು ಕೋಣೆಯಿಂದ ಆಚೆ ಇಟ್ಟುಬಿಡಿ. ಇದು ಸ್ವಚ್ಛತೆ ಹಾಗೂ ರಕ್ಷಣೆ ದೃಷ್ಟಿಯಿಂದ ಪ್ರಮುಖ. ಅಲ್ಲದೆ ಇವುಗಳ ಹೊಗೆ ಕಿರಿದಾದ ದೇವರ ಕೋಣೆಯಲ್ಲಿ ಉಳಿದು ಬಿಟ್ಟರೆ ಗೋಡೆಗೆ ಅಂಟಿಕೊಂಡು ಬಹು ಬೇಗ ಗೋಡೆಯ ಬಣ್ಣ ಮಾಸುತ್ತದೆ.

ಗೋಡೆ  ಗ್ರಾನೈಟ್ ಅಥವಾ ಟೈಲ್ಸ್‌ನದ್ದಾಗಿದ್ದರೆ ಕನಿಷ್ಠ ಮೂರು ತಿಂಗಳಿಗೊಮ್ಮೆ ತೊಳೆದು ಅಥವಾ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ. ಸ್ವಲ್ಪ ಸೋಪಿನ ನೀರು ಹಾಕಿ ತೊಳೆದರೆ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಪೌಡರ್ ಅಥವಾ  ಕ್ಲೀನರ್‌ಗಳನ್ನು ತಂದು ಕೂಡ ಪ್ರಯೋಗಿಸಬಹುದು. ದೇವರಮನೆಯಲ್ಲಿ ತುಪ್ಪ ಅಥವಾ ಎಣ್ಣೆ ದೀಪ ಬಹು ಬೇಗ ಆರಿ ಹೋಗುತ್ತದೆ. ಇದರಿಂದ ದೇವರ ಮನೆಯಲ್ಲಿ ಒಂದು ಚಿಕ್ಕ ಬಲ್ಬ್ ಅಳವಡಿಸಿ. ಅದರ ಬೆಳಕು ಸದಾ ಇರುವಂತೆ ನೋಡಿಕೊಳ್ಳಿ.

ದೇವರಕೋಣೆಯೆದುರು ಕುಳಿತರೆ ನಮ್ಮ ಮನಸ್ಸು ಶಾಂತವಾಗಬೇಕು, ಉತ್ಸಾಹವೆನಿಸಬೇಕು, ಭಗವಂತನ ಕುರಿತು ಭಕ್ತಿಭಾವ ಹೆಚ್ಚಾಗಬೇಕು, ದೇವರಕೋಣೆಯಲ್ಲಿ ಭಗವಂತನ ಅಸ್ತಿತ್ವದ ಅರಿವಾಗಬೇಕು, ದೇವರು ನಮ್ಮೊಂದಿಗಿದ್ದಾನೆ ಎಂದು ಅನಿಸಬೇಕು. ದೇವಸ್ಥಾನವು ಹೇಗೆ ಇಡೀ ಗ್ರಾಮ ಅಥವಾ ಊರಿಗೆ, ಶಕ್ತಿ ಅಥವಾ ಚೈತನ್ಯವನ್ನು ಪೂರೈಸುತ್ತದೆಯೋ, ಅದೇ ರೀತಿ ದೇವರಕೋಣೆಯು ಇಡೀ ಮನೆಗೆ ಶಕ್ತಿ, ಚೈತನ್ಯವನ್ನು ಪೂರೈಸಬೇಕು, ದೇವರ ಮನೆಯ ವಾತಾವರಣವನ್ನು ಶುದ್ಧ ಮಾಡಬೇಕು.

- ಶಿಲ್ಪ.ಡಿ.ಚಕ್ಕೆರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com