
ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಆಕೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಒಬ್ಬ ಹೆಣ್ಣು ಮತ್ತೊಬ್ಬ ಹೆಣ್ಣಿಗೆ ಆಸರೆಯಾದರೆ ಹೇಗೆ ಅವರ ಬಾಳನ್ನು ಬೆಳಗಬಹುದು ಎಂಬುದಕ್ಕೆ ಇವರಿಬ್ಬರು ನಿದರ್ಶನ.
ಆಕೆಯ ಅನಿತಾ(ಹೆಸರು ಬದಲಿಸಲಾಗಿದೆ). ಎಲ್ಲರಂತೆ ಆ ಬಾಲಕಿಗೂ ಆಸೆ-ಆಕಾಂಕ್ಷೆಗಳು, ಜೀವನದಲ್ಲಿ ಕನಸುಗಳು ಇದ್ದವು. ಅವಳು 9ನೇ ತರಗತಿಯಲ್ಲಿದ್ದಾಗಲೇ ತಂದೆ ತೀರಿಕೊಂಡರು. ಕುಟುಂಬದ ಆದಾಯಕ್ಕೆ ಆಸರೆಯಾಗಿದ್ದ ಜೀವ ಕಳೆದುಹೋದಾಗ ಉಳಿದವರಿಗೆ ದಿಕ್ಕೇ ತೋಚದಂತಾಯಿತು.
ಅನಿತಾಳ ತಾಯಿ ಮನೆಯ ಹತ್ತಿರವಿದ್ದ ಬ್ಯೂಟಿ ಪಾರ್ಲರ್ ನಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡರು. ಅನಿತಾ ಓದು ಅರ್ಧಕ್ಕೇ ನಿಂತಿತು. ತಾಯಿ ಹೋಗುತ್ತಿದ್ದ ಬ್ಯೂಟಿ ಪಾರ್ಲರ್ ಗೆ ಅನಿತಾ ಕೂಡ ಅಮ್ಮನಿಗೆ ಸಹಾಯಕ್ಕೆಂದು ಹೋಗುತ್ತಿದ್ದಳು.
ಅಲ್ಲಿನ ಮಾಲಕಿ ಮಹಿಳೆಯರಿಗೆ ಮಾಡುತ್ತಿದ್ದ ಅಲಂಕಾರ, ಸೌಂದರ್ಯ ವರ್ಧಕ ಸಾಧನಗಳ ಲೇಪನ ಇತ್ಯಾದಿಗಳನ್ನು ನೋಡಿ ಬುದ್ದಿವಂತೆ ಅನಿತಾ ಕಲಿತುಕೊಂಡು ಬಿಟ್ಟಳು. ಅವಳ ಪ್ರತಿಭೆ ನೋಡಿ ಬ್ಯೂಟಿಷಿಯನ್ ತನ್ನ ಬಳಿಯೇ ಸಹಾಯಕಿಯಾಗಿ ಇರಿಸಿಕೊಂಡರು.
ಹೀಗೆ ಕೆಲ ವರ್ಷಗಳು ಕಳೆದ ನಂತರ ಅನಿತಾ ಕಾರು ಚಾಲಕನೊಬ್ಬನನ್ನು ಮದುವೆಯಾದಳು. ಇಬ್ಬರು ಮಕ್ಕಳಾದರು. ಅನಿತಾ ಕೆಲಸ ಮಾಡುತ್ತಿದ್ದ ಬ್ಯೂಟಿ ಪಾರ್ಲರ್ ಗೆ ಡಾ. ನಿರುಪಾ ಬರೇಜಾ ಎನ್ನುವವರು ಭೇಟಿ ನೀಡುತ್ತಿದ್ದರು. ಅವರಿಗೆ ಅನಿತಾಳ ಕುಶಲತೆ, ಬುದ್ದಿವಂತಿಕೆ ಹಿಡಿಸಿತು. ಆಕೆಯನ್ನು ಮನೆಗೆ ಬರಮಾಡಿ ಸೌಂದರ್ಯ ಸೇವೆಯನ್ನು ಪಡೆಯುತ್ತಿದ್ದರು. ಅಲ್ಲದೆ ಅನಿತಾಳ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಿದರು.
ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಅನಿತಾ ನಿರುಪಾ ಬರೇಜಾ ಅವರ ಸಹಕಾರದಿಂದ ಬೆಂಗಳೂರು ಹತ್ತಿರ ಸೈಟು ಖರೀದಿಸಿ ಮನೆ ಕಟ್ಟಿ ವಾಸವಾಗಿದ್ದಾರೆ. ಇಂದು ಅನಿತಾ ಬೆಂಗಳೂರು ನಗರದಲ್ಲಿ ಉತ್ತಮ ಬ್ಯೂಟಿಷಿಯನ್ ಆಗಿದ್ದು, ಉನ್ನತ ದರ್ಜೆಯ ಜನರಿಗೆ ಸೇವೆ ಒದಗಿಸುತ್ತಿದ್ದಾರೆ.
ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿದ ಡಾ.ನಿರುಪಾ ಬರೇಜಾ ಅವರಿಗೆ ಕೃತಜ್ಞತೆ ಸಲ್ಲಿಸುವ ಅನಿತಾ, ''ನನಗೆ ಸ್ವಂತ ಸಹೋದರಿಯರಿಲ್ಲ. ಆದರೆ ದೇವರು ನಿರುಪಾ ಬರೇಜ ಅವರನ್ನು ಸ್ವಂತ ಸಹೋದರಿಯಂತೆ ಉಡುಗೊರೆ ಕೊಟ್ಟಿದ್ದಾರೆ.'' ಎಂಬ ಮಾತುಗಳನ್ನು ಹೇಳುತ್ತಾರೆ.
ಹೀಗೆ ನಮ್ಮ ಸುತ್ತಮುತ್ತ ತಮ್ಮ ಕೌಶಲ್ಯ, ಬುದ್ಧಿವಂತಿಕೆ, ಸಾಮರ್ಥ್ಯಗಳಿಂದ ಜೀವನದಲ್ಲಿ ಮುಂದೆ ಬಂದ ನೂರಾರು ಹೆಣ್ಣುಮಕ್ಕಳು ಇರುತ್ತಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಅವರನ್ನು ನೆನೆಯುವುದು ನಿಜಕ್ಕೂ ಸೂಕ್ತ.
ಯಾರಿವರು ಡಾ.ನಿರುಪಾ ಬರೇಜಾ?: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೆರೈನ್ ಬಯೋಲಜಿಯಲ್ಲಿ ಸ್ನಾತಕೋತ್ತರ ಪಡೆದ ಇವರು ಪ್ರಸ್ತುತ ಅಮೆರಿಕ ಮೂಲದ ಬಯೋಟೆಕ್ ಮತ್ತು ಥೆರಪೆಟಿಕ್ಸ್ ಕಂಪನಿ ವಿಕಾಸ್ ಥೆರಪೆಟಿಕ್ಸ್ ನ ಭಾರತ ಕಾರ್ಯಾಚರಣೆಯ ಮುಖ್ಯಸ್ಥೆ ಹಾಗೂ ಬೆಂಗಳೂರಿನ ಮಜುಂದಾರ್ ಷಾ ವೈದ್ಯಕೀಯ ಸಂಸ್ಥೆಯ ಮುಖ್ಯ ಕಾರ್ಯಕ್ರಮ ನಿರ್ದೇಶಕರು ಕೂಡ ಹೌದು. ವೈದ್ಯಕೀಯ, ತಂತ್ರಜ್ಞಾನ ಮತ್ತು ನಿರ್ವಹಣೆ ವಿಷಯಗಳಲ್ಲಿ ಅಪಾರ ಅನುಭವವನ್ನು ಹೊಂದಿರುವ ಡಾ.ಬರೇಜಾ ವೈದ್ಯಕೀಯ ವಿಜ್ಞಾನಿ. ಈ ಹಿಂದೆ ಬಯೋಕಾನ್ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಕ್ಯಾನ್ಸರ್ ರೋಗಿಗಳ ಪರ ಕೆಲಸ ಮಾಡುವ ಇವರು, ಅನೇಕರಿಗೆ ದಾರಿದೀಪವಾಗಿದ್ದಾರೆ. ಬಡ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಒದಗಿಸುತ್ತಿದ್ದಾರೆ.
ಡಾ.ನಿರುಪಾ ಬರೇಜಾ ಅವರನ್ನು ಸಂಪರ್ಕಿಸಬಯಸುವವರು ದೂರವಾಣಿ ಸಂಖ್ಯೆ 8861239821 ಅಥವಾ 080-41105276ಗೆ ಕರೆ ಮಾಡಬಹುದು.
Advertisement