ಸಾಂಪ್ರದಾಯಿಕ ಕಟ್ಟಳೆಗಳನ್ನು ಬದಿಗೊತ್ತಿ ವೃಂದಾವನದ ವಿಧವೆಯರು ಹೋಳಿಯಾಡಿದರು!

400 ವರ್ಷಗಳಿಂದ ನಡೆದು ಬರುತ್ತಿದ್ದ ಸಂಪ್ರದಾಯವನ್ನು ಒಡೆದು ವೃಂದಾವನದ ವಿಧವೆಯರು ಹೋಳಿಯಾಡಿದ್ದಾರೆ. ವಿಧವೆಗಳಿಗೆ ಬಣ್ಣ ನಿಷೇಧ...
ಹೋಳಿಯಾಡುತ್ತಿರುವ ವೃಂದಾವನದ ವಿಧವೆಯರು
ಹೋಳಿಯಾಡುತ್ತಿರುವ ವೃಂದಾವನದ ವಿಧವೆಯರು
ವೃಂದಾವನ: ಭಾರತದಲ್ಲಿ ಸ್ತ್ರೀ ಸಬಲೀಕರಣದ ದನಿ ಮೊಳಗುತ್ತಿರುವ ಹೊತ್ತಿನಲ್ಲೇ ಕೆಲವೊಂದು ಸಾಂಪ್ರದಾಯಿಕ ಕಟ್ಟಳೆಗಳಿಂದ ಮಹಿಳೆಯರು ಹೊರ ಬಂದಿಲ್ಲ. ಅಂಥದರಲ್ಲಿ ವಿಧವೆಗಳಿಗೆ ವಿಧಿಸಿರುವ ಕೆಲವು ಕಟ್ಟಳೆಗಳೂ ಸೇರಿವೆ. ವಿಧವೆಯರನ್ನು ಶಾಪಗ್ರಸ್ತರಂತೆ ನೋಡುವ ರೀತಿಯೂ ಭಾರತದ ಹಲವೆಡೆಗಳಲ್ಲಿದೆ. ಬಿಳಿ ಸೀರೆಯುಟ್ಟು ಶುಭ ಕಾರ್ಯಗಳಲ್ಲಿ ಭಾಗವಹಿಸದಂತೆ ಅವರಿಗೆ ನಿರ್ಬಂಧ ವಿಧಿಸಲಾಗುತ್ತದೆ. ಹೀಗೆ ವಿಧವೆಯರು ಎಲ್ಲರಿಂದಲೂ ಭಿನ್ನವಾಗಿ ಬದುಕು ಸಾಗಿಸಬೇಕಾದ ಪದ್ಧತಿಗಳೂ ನಮ್ಮ ದೇಶದಲ್ಲಿದೆ.
ಇದೀಗ ಅಂಥಾ ಸಂಪ್ರದಾಯಗಳನ್ನು ಮೀರಿ ವೃಂದಾವನದ ವಿಧವೆಯರು ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ. 400 ವರ್ಷಗಳಿಂದ ನಡೆದು ಬರುತ್ತಿದ್ದ ಸಂಪ್ರದಾಯವನ್ನು ಒಡೆದು ವೃಂದಾವನದ  ವಿಧವೆಯರು ಹೋಳಿಯಾಡಿದ್ದಾರೆ. ವಿಧವೆಗಳಿಗೆ ಬಣ್ಣ ನಿಷೇಧ, ಅವರೇನಿದ್ದರೂ ಬಿಳಿ ಬಟ್ಟೆಯಲ್ಲೇ ಇರಬೇಕು ಎಂಬ ಸಂಪ್ರದಾಯಕ್ಕೆ ಸೆಡ್ಡು ಹೊಡೆದು, ಅಲ್ಲಿನ ವಿಧವೆಯರು ಹೋಳಿಯಾಡಿದ್ದಾರೆ. ಬಣ್ಣಗಳನ್ನು ಮೈ ಮೇಲೆ ಎರಚಿ, ಸಂತೋಷದಿಂದ ಸಿಹಿ ತಿನಿಸುಗಳನ್ನು ಹಂಚಿ, ಹೂ ಪಕಳೆಗಳ ಮಳೆ ಸುರಿದು ಅವರು ನಕ್ಕು ನಲಿದಿದ್ದಾರೆ.
ಈ ವರ್ಷದ ಹೋಳಿ ನನ್ನ ಜೀವನದಲ್ಲಿನ ಮನೋಹರವಾದ ಹೋಳಿಯಾಗಿತ್ತು ಅಂತಾರೆ ವೃಂದಾವನದಲ್ಲಿರುವ ನೇಪಾಳ ಮೂಲದ  65ರ ಹರೆಯದ ರಸಿಯಾ. 17ಗ ಹರೆಯದಲ್ಲಿ ರಸಿಯಾ ಪತಿ ವಿಧಿವಶವಾಗಿದ್ದು, ಅಂದಿನಿಂದ ರಸಿಯಾ ವೃಂದಾವನದಲ್ಲಿದ್ದಾರೆ.
ತುಂಬಾ ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡವಳು ಅನ್ನಪೂರ್ಣ ಶರ್ಮಾ. ಈಗ 37ರ ಹರೆಯದ ಅನ್ನಪೂರ್ಣ ಪತಿಯ ಮರಣಾನಂತರ ಅಪ್ಪನೊಂದಿಗೆ ವಾಸಿಸುತ್ತಿದ್ದಳು.  ಅನಂತರ ಅಪ್ಪನೂ ತೀರಿದ ಮೇಲೆ  ವೃಂದಾವನಕ್ಕೆ ಬಂದು ಇಲ್ಲೇ ಇರಬೇಕಾಗಿ ಬಂತು. ವೃಂದಾವನದ ಹೊರಗೆ ವಿಧವೆಗಳಿಗೆ ಜೀವನ ನಡೆಸುವುದು ಸುಲಭವಲ್ಲ ಎಂಬುದನ್ನು ನಾನು ಸ್ವಯಂ ಅನುಭವಿಸಿದ್ದೇನೆ ಅಂತಾರೆ ಈಕೆ. ಈಗ ಬಿಎ ಕಲಿಯುತ್ತಿರುವ ಅನ್ನುಪೂರ್ಣಳಿಗೆ ವಿಧವೆ ಎಂಬ ಪಟ್ಟದಿಂದ ಹಲವಾರು ತೊಂದರೆಗಳು ಎದುರಿಸಬೇಕಾಗಿ ಬಂದಿದೆ.
ವೃಂದಾವನದ ವಿಧವೆಗಳು ಹೋಳಿಯಾಡುವ ಮೂಲಕ ಹೊಸತೊಂದು ಬದಲಾವಣೆಯನ್ನೇ ತಂದಿದ್ದಾರೆ. ಗಂಡ ತೀರಿ ಹೋಗಿದ್ದಾನೆ ಎಂಬ ಕಾರಣದಿಂದ ಒಬ್ಬ ಹೆಣ್ಣನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿಡಬಾರದು ಎಂದು ವಿಧವೆಗಳು ದನಿ ಎತ್ತಿದ್ದಾರೆ. ಈಗ ಅವರ ಬಿಳಿ ಬಟ್ಟೆಗಳಲ್ಲಿ ಹೋಳಿಯದ್ದು ಮಾತ್ರವಲ್ಲ ಬದಲಾವಣೆಯ ಬಣ್ಣವೂ ತುಂಬಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com