"ಮಹಿಳೆ, ನೀ ಪಶ್ಚಾತ್ತಾಪ ಪಡುವ ಮುನ್ನ"

ಒಬ್ಬ ಕೆಲಸದಾಕೆ. ಮುಂಜಾನೆ 6 ಗಂಟೆಗೆ ಮನೆ ಬಿಟ್ಟರೆ ಸಂಜೆ ಹೊತ್ತಿಗೆ ಹಿಂತಿರುಗಿ ಬರೋದು. ಮನೆ ಮನೆಯಲ್ಲಿ ಬಟ್ಟೆ ಒಗೆಯೋದು, ಪಾತ್ರ ತೊಳೆಯೋದು, ನೆಲ ಗುಡಿಸಿ, ಒರೆಸೋದು ಆಕೆಯ ಕೆಲಸ. 8 ಮನೆಗಳಲ್ಲಿ ತಿಂಗಳಿಗೆ ಆರು ಸಾವಿರದಂತೆ ಒಟ್ಟು 48,000 ಸಂಬಳ ಆಕೆಯದ್ದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಒಬ್ಬ ಕೆಲಸದಾಕೆ. ಮುಂಜಾನೆ 6 ಗಂಟೆಗೆ ಮನೆ ಬಿಟ್ಟರೆ ಸಂಜೆ ಹೊತ್ತಿಗೆ ಹಿಂತಿರುಗಿ ಬರೋದು. ಮನೆ ಮನೆಯಲ್ಲಿ ಬಟ್ಟೆ ಒಗೆಯೋದು, ಪಾತ್ರ ತೊಳೆಯೋದು, ನೆಲ ಗುಡಿಸಿ, ಒರೆಸೋದು ಆಕೆಯ ಕೆಲಸ. 8 ಮನೆಗಳಲ್ಲಿ ತಿಂಗಳಿಗೆ ಆರು ಸಾವಿರದಂತೆ ಒಟ್ಟು 48,000 ಸಂಬಳ ಆಕೆಯದ್ದು.

ಪ್ರಾರಂಭದಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದ ಆಕೆ 10-15 ವರ್ಷಗಳ ನಿರಂತರ ದುಡಿಮೆಯಿಂದಾಗಿ ಸ್ವಂತ ಮನೆ ಕಟ್ಟಿಕೊಂಡು ಬಾಡಿಗೆಗೆ ಮನೆಗಳನ್ನು ನೀಡುವಷ್ಟು ಬೆಳೆದು ಬಿಡುತ್ತಾಳೆ. ಇದರ ಪ್ರತಿಫಲವಾಗಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ವಿದೇಶದಲ್ಲಿ ಎಮ್ .ಎಸ್ಸಿ ಓದಿಸುವ ಮೂಲಕ ಬದುಕಿನಲ್ಲಿ ಸಂತೃಪ್ತಿಯನ್ನು ಕಾಣುತ್ತಾಳೆ. ಇದು ಇತ್ತೀಚೆಗೆ ನಾನು ಓದಿದ್ದ ನೈಜ ಘಟನೆ. 

ಶೂನ್ಯದಿಂದ ಆರಂಭವಾಗಿ ಬದುಕು ಕಟ್ಟಿಕೊಳ್ಳುತ್ತ ಸಾಗುವುದು ಒಂದು ದೊಡ್ಡ ಸಾಹಸ. ಪ್ರಬಲ ಇಚ್ಛಾಶಕ್ತಿ ಹಾಗೂ ಬೆಂಬಿಡದ ಛಲ ಇಲ್ಲಿ ಕೆಲಸ ಮಾಡಿದ್ದಂತೂ ಸುಳ್ಳಲ್ಲ. ದಿನದ ಎಲ್ಲಾ ಗಂಟೆಗಳನ್ನು ಅಡುಗೆ ಮನೆಗೆ ಸೀಮಿತಗೊಳಿಸುವ ಮಹಿಳೆ ಕೊಂಚ ಮನಸ್ಸು ಮಾಡಿದಲ್ಲಿ ತನ್ನ ಕನಸುಗಳನ್ನು ನೆರವೇರಿಸುವ ಅದೆಷ್ಟೋ ಅವಕಾಶಗಳಿವೆ.   

ತನ್ನ ಇಷ್ಟದ ಅಥವಾ ಯಾವುದಾದರೊಂದು ಕ್ಷೇತ್ರದಲ್ಲಿ ಪರಿಣಿತಿ ಹೊಂದಬೇಕು ಅಥವಾ ಹೊಂದಿದ್ದರೆ ಚೆನ್ನಾಗಿರುತ್ತಿತ್ತು ಅನಿಸಬೇಕಾದರೆ ನಾವು ಪ್ರಪಂಚ ನೋಡಬೇಕು. ಅಥವಾ ನಮ್ಮ ಕಂಫರ್ಟ್ ಜ಼ೋನ್ ನಿಂದ ಹೊರಗೆ ಬರಬೇಕು. ಈ ಅನುಭವ ಭಾರತದಿಂದ ಸಿಂಗಾಪುರಕ್ಕೆ ಬಂದ ಪ್ರಾರಂಭದಲ್ಲಿ ನನಗೂ ಆಗಿತ್ತು. ನಾನು ನೋಡಿದ ಪ್ರಕಾರ ಮನೆಯಲ್ಲಿ ಸುಮ್ಮನೆ ಕೂತು ಕಾಲಕಳೆಯುವ ಮಹಿಳೆಯರೇ ಕಡಿಮೆ. ಒಂದಾ ವೃತ್ತಿ ಇಲ್ಲವೇ ಕಲಿಕೆ. ಒಂದಲ್ಲಾ ಒಂದು ವಿಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡವರೇ ಹೆಚ್ಚು.    

ನಮ್ಮ ಅಪಾರ್ಟ್ಮೆಂಟ್ ನಲ್ಲಿ ಬಹುತೇಕ ಕುಟುಂಬ ಭಾರತೀಯರದ್ದು. ಗಂಡ, ಮಕ್ಕಳು ಕಚೇರಿ, ಶಾಲಾ - ಕಾಲೇಜು ಹೇಳಿ ಮನೆಯಿಂದ ಹೊರಟ ಬಳಿಕ ಆರಂಭವಾಗುತ್ತೆ ನೋಡಿ.. ಸ್ವಿಮ್ಮಿಂಗ್ , ಡ್ರಾಯಿಂಗ್, ಬೇಕಿಂಗ್, ಯೋಗ, ನೃತ್ಯ, ತಿಂಡಿ ತಿನಿಸು... ಏನುಂಟು ಏನಿಲ್ಲ. ಆದರೆ ಎಲ್ಲವೂ ತಮ್ಮ ಪರಿಶ್ರಮದ ಫಲವೇ ಹೊರತು “ ಅಯ್ಯೋ ಕಷ್ಟ ನನ್ನಿಂದ ಸಾಧ್ಯವಿಲ್ಲ” ಎಂದು ರಾಗ ಎಳೀತಾ ಪರಿಣಿತಿ ಹೊಂದಿದ್ದಂತೂ ಅಲ್ಲ. 

ಇಲ್ಲಿನ ಕೆಲ ಗೆಳತಿಯರು ಸಿಂಗಾಪುರಕ್ಕೆ ಆಗಮಿಸಿದ ಬಳಿಕ ಅದರಲ್ಲೂ ಸ್ವಿಮ್ಮಿಂಗ್, ಬೇಕಿಂಗ್ ಸಂಬಂಧಿಸಿದ ತರಗತಿಗಳಿಗೆ ತೆರಳಿ ಕೋರ್ಸ್ ಗಳನ್ನು ಪೂರ್ಣಗೊಳಿಸಿ ಇದೀಗ ಇತರರಿಗೆ ತರಗತಿಗಳನ್ನು ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ. ಮತ್ತೆ ಕೆಲ ಪಾಕ ಪ್ರವೀಣೆಯರು, ತಮ್ಮದೇ ಮೆನು ಲಿಸ್ಟ್ ಗಳನ್ನು ತಯಾರಿಸಿ, ಅಪಾರ್ಟ್ಮೆಂಟ್ ಒಳಗಿನ ಕುಟುಂಬಗಳಿಂದಲೇ ಆರ್ಡರ್ ಪಡೆಯುವ ವ್ಯವಸ್ಥೆಗಳನ್ನು ಆರಂಭಿಸಿ ಸಂಪಾದನೆಯಲ್ಲಿ ತೊಡಗಿದ್ದಾರೆ. 

ಹೀಗೆ ಸಣ್ಣ ಮಟ್ಟದಲ್ಲಿ ಆರಂಭಿಸಿದ್ದ ಓರ್ವ ಗೆಳತಿಯಂತೂ ರೆಸ್ಟೋರೆಂಟ್ ಇಡುವಷ್ಟು ತನ್ನ ವ್ಯಾಪಾರವನ್ನು ವಿಸ್ತರಿಸಿದ್ದಾರೆ. ಇನ್ನು ಕೆಲವರು ಬ್ಯೂಟಿಶಿಯನ್ ವೃತ್ತಿಯಲ್ಲೂ ತೊಡಗಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಹೊಂದಿಸುವ ಮೂಲಕ ಕಾರ್ಯನಿರತರಾಗಿದ್ದಾರೆ.  ಯೋಗ, ಡ್ರಾಯಿಂಗ್, ಟೈಲರಿಂಗ್, ಡ್ಯಾನ್ಸ್ ತರಗತಿಗಳನ್ನು ವಾರವಿಡೀ ನಡೆಸುತ್ತಾ ಕುಟುಂಬವನ್ನು ನಿರ್ವಹಿಸುತ್ತಾ ಸಾಗುತ್ತಿದ್ದಾರೆ ಮತ್ತೆ ಕೆಲವರು. ಆಸಕ್ತಿ ಇರೋ ಮಕ್ಕಳು, ಮಹಿಳೆಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯಗಳನ್ನು ಹೊಂದಿಸಿ ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.  

ಕೊಂಚ ಪರಿಶ್ರಮ ಪಟ್ಟಲ್ಲಿ ಇಂತಹ ವಿದ್ಯೆಗಳಲ್ಲಿ ಪರಿಣತಿ ಆಗೋದು ಏನು ಕಷ್ಟವಿಲ್ಲ.  ಅದರಲ್ಲೂ ವಿದೇಶ ವಾಸ, ಮನೆ - ಮಕ್ಕಳ ಜವಾಬ್ದಾರಿಗಳಿಂದಲೂ ತಪ್ಪಿಸಿಕೊಳ್ಳಲಾಗದೆ, ಇತ್ತ ತಾನು ಏನಾದ್ರೂ ಸಾಧನೆ ಮಾಡಬೇಕು ಅನ್ನುವವರಿಗೆ ಇಂತಹ ವೃತ್ತಿಗಳು ಖಂಡಿತ ಸಹಾಯಕ್ಕೆ ಬರಲಿವೆ. Bend in the road is not the end of the road ಎಂಬ ಮಾತಿನ ಹಾಗೆ ಇರುವ ಪರಿಸ್ಥಿತಿಗೆ ಗೊಣಗದೆ, ಅಲ್ಲಿದ್ದುಕೊಂಡೇ ಆಸಕ್ತಿದಾಯಕ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡುವ ಪ್ರಮೇಯ ಎದುರು ನೋಡಬೇಕಾಗಿಲ್ಲ.

ಛಲವಿದ್ದರೆ ಯಾರೂ ಎಲ್ಲೂ ಬೇಕಾದರೂ ಬದುಕಬಹುದು. ಅಂತಹ ಶಕ್ತಿ ನಮ್ಮಲ್ಲೇ ಇರುತ್ತದೆ. ಆದರೆ  ತುಂಬಾ ಬೇಗ ಭಯ ಪಡೋದು, ಸೋತೆವು ಅಂದುಕೊಳ್ಳೋದು, ಇತರರ ಅಭಿಪ್ರಾಯಗಳ ಬಗ್ಗೆ ಚಿಂತಿಸೋದು, ಒತ್ತಡಕ್ಕೆ ಸಿಲುಕಿ ಒದ್ದಾಡುವ ಮೂಲಕ ಈ ಆಲೋಚನೆಗಳು ಕೆಲವೊಮ್ಮೆ ನಮ್ಮ ಶಕ್ತಿಯನ್ನೇ ಅಡಗಿಸಿಬಿಡುತ್ತವೆ. 

ನಾವು ಆರಂಭಿಸುವ ಯಾವುದೇ ಕಾರ್ಯಕ್ಕೆ ರಾತ್ರಿ ಬೆಳಗಾಗೋದರಲ್ಲಿ ಫಲಿತಾಂಶ ಬಯಸೋದು ಮೂರ್ಖತನ. ಸಾಧನೆ ಅನ್ನೋದು ನಿರಂತರ ಪರಿಶ್ರಮದ ಪರಿಣಾಮವೇ. ಏನಾದರೂ ಸಾಧನೆ ಮಾಡಬೇಕೆಂದು ಹೇಳುತ್ತಾ ಸುಮ್ಮನೆ ಕುಳಿತರೂ ಶೂನ್ಯವೇ ಉತ್ತರ. ತಡವೇಕೆ, ಟೀಕೆಗಳನ್ನು ಅನುಭವಿಸಿದರೂ, ಕಷ್ಟಗಳನ್ನು ಎದುರಿಸಿದರೂ ನಮ್ಮಲ್ಲಿ ನಾವು ನಂಬಿಕೆ ಕಳೆದುಕೊಳ್ಳದೆ ಸಾಧನೆ ಮಾಡಲೇಬೇಕೆಂಬ ಹಸಿವನ್ನು ಸದಾ ಜಾಗೃತಗೊಳಿಸಿದಲ್ಲಿ ಯಶಸ್ಸು ಖಂಡಿತ.

ಲೇಖನ: ಶ್ರೀವಿದ್ಯಾ ರಾವ್

ಯಕ್ಷಪ್ರಭ ಉಜಿರೆ

ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ-574240

ಇಮೇಲ್ ವಿಳಾಸ: kshrividya.rao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com