ಹೆಣ್ಣಿನ ಜೀವಂತಿಕೆಗೇ ಸವಾಲಾದ ಆ ಒಂದು 'ಸಂಪ್ರದಾಯ'!

ಮಹಿಳೆಯರನ್ನು ಶೋಷಣೆ ಮಾಡಿಕೊಂಡು ಬಂದಿರುವ ಅದೆಷ್ಟೋ ಅನಿಷ್ಟ ಸಂಪ್ರದಾಯಗಳು ಪ್ರಪಂಚದಾದ್ಯಂತ ಅನಾದಿ ಕಾಲದಿಂದಲೂ ಜಾರಿಯಲ್ಲಿವೆ. ಅಂತಹ ಸಂಪ್ರದಾಯಗಳಲ್ಲಿ ಶೋಷಣೆಯಷ್ಟೇ ಅಲ್ಲದೇ ದೈಹಿಕ ಯಾತನೆ, ಮಾನಸಿಕ ಹಿಂಸೆಯ ಜೊತೆಗೆ ಜೀವವೇ ಪಣಕ್ಕಿಡಬೇಕಾದ, ಹೆಣ್ಣಿನ ಜನನಾಂಗವನ್ನು ಕತ್ತರಿಸುವ ಸಂಪ್ರದಾಯವೂ ಒಂದು. ವಿಶ್ವದೆಲ್ಲೆಡೆಯೂ ನಡೆದುಕೊಂಡು ಬಂದಿರುವ ಈ ಪಿಡುಗಿನಿಂದ ಭಾರತವೇನ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಹಿಳೆಯರನ್ನು ಶೋಷಣೆ ಮಾಡಿಕೊಂಡು ಬಂದಿರುವ ಅದೆಷ್ಟೋ ಅನಿಷ್ಟ ಸಂಪ್ರದಾಯಗಳು ಪ್ರಪಂಚದಾದ್ಯಂತ ಅನಾದಿ ಕಾಲದಿಂದಲೂ ಜಾರಿಯಲ್ಲಿವೆ. ಅಂತಹ ಸಂಪ್ರದಾಯಗಳಲ್ಲಿ ಶೋಷಣೆಯಷ್ಟೇ ಅಲ್ಲದೇ ದೈಹಿಕ ಯಾತನೆ, ಮಾನಸಿಕ ಹಿಂಸೆಯ ಜೊತೆಗೆ ಜೀವವೇ ಪಣಕ್ಕಿಡಬೇಕಾದ, ಹೆಣ್ಣಿನ ಜನನಾಂಗವನ್ನು ಕತ್ತರಿಸುವ ಸಂಪ್ರದಾಯವೂ ಒಂದು. ವಿಶ್ವದೆಲ್ಲೆಡೆಯೂ ನಡೆದುಕೊಂಡು ಬಂದಿರುವ ಈ ಪಿಡುಗಿನಿಂದ ಭಾರತವೇನೂ ಹೊರತಾಗಿಲ್ಲ. ಇತ್ತೀಚಿನ ವರೆಗೂ ಭಾರತದ ಕೆಲ ಭಾಗಗಳಲ್ಲಿ ಈ ಸಂಪ್ರದಾಯ ನಡೆದುಕೊಂಡೇ ಬಂದಿದೆ. 


ಏನಿದು ಹೆಣ್ಣಿನ ಜನನಾಂಗದ ಕತ್ತರಿಸುವಿಕೆ? : ಹೆಣ್ಣಿನ ಜನನಾಂಗದ ಕತ್ತರಿಸುವಿಕೆ ಅಥವಾ Female genital mutilation (FGM) ಎನ್ನುವ ಪ್ರಕ್ರಿಯೆಯು ನಿರ್ದಿಷ್ಟ ಬುಡಕಟ್ಟು ಪಂಗಡದವರು ಆಚರಿಸುವ ಪದ್ಧತಿಯಾಗಿದ್ದು ಇದರಲ್ಲಿ ಹದಿಹರೆಯಕ್ಕೆ ಬಂದ ಹೆಣ್ಣುಮಕ್ಕಳ ಜನನಾಂಗವನ್ನು ಕತ್ತರಿಸಲಾಗುತ್ತದೆ. ಹಲವು ಬುಡಕಟ್ಟುಗಳಲ್ಲಿ ಇದೊಂದು ಕಡ್ಡಾಯವಾಗಿ ನಡೆಸಲೇ ಬೇಕಾದ ಧಾರ್ಮಿಕ ಆಚರಣೆಯಾಗಿದೆ. ಆದರೆ ಮುಖ್ಯವಾಗಿ ಹೆಣ್ಣಿನ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಿಂದ ಇದನ್ನು ನಡೆಸಲಾಗುತ್ತದೆಯೇ ವಿನಃ ಇದರ ಹಿಂದೆ ಯಾವ ವೈಜ್ಞಾನಿಕ ಕಾರಣಗಳೂ ಇಲ್ಲ. ನೋವು, ಯಾತನೆಗಳ ಹೊರತು ಇದನ್ನು ನಡೆಸುವುದರಿಂದ ಮಹಿಳೆಯರಿಗೆ ಯಾವ ಲಾಭವೂ ಇಲ್ಲ.  ಹಲವೆಡೆಗಳಲ್ಲಿ ಇನ್ನೂ ಹರೆಯಕ್ಕೆ ಬಾರದ ಹೆಣ್ಣುಮಕ್ಕಳ ಜನನಾಂಗವನ್ನು ಕತ್ತರಿಸಿ ಹೊಲಿಗೆ ಹಾಕುವ ಮುಖಾಂತರ ಜನನಾಂಗದ ಗಾತ್ರವನ್ನು ಚಿಕ್ಕದಾಗಿ ಮಾಡಲಾಗುತ್ತದೆ. ನಂತರ ವಿವಾಹದ ನಂತರ ಹೊಲಿಗೆಯನ್ನು ತೆಗೆಯಲಾಗುತ್ತದೆ. ಇನ್ನು ಬಹಳಷ್ಟು ಕಡೆಗಳಲ್ಲಿ ಜನನಾಂಗದ ಚಂದ್ರನಾಡಿಯನ್ನೇ ಕತ್ತರಿಸಿ ತೆಗೆಯುವುದು, ಜನನಾಂಗದ ಚರ್ಮವನ್ನು ಕಿತ್ತೆಸೆಯುವುದು ಇತ್ಯಾದಿಗಳನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮುಳ್ಳುಗಳಿಂದ ಚುಚ್ಚುವುದು, ತೂತುಗಳನ್ನು ಮಾಡುವುದು, ಸುಡುವುದು, ಗಾಯಗಳನ್ನು ಮಾಡುವುದು ಇತ್ಯಾದಿ ಭಯಾನಕ ಹಾಗೂ ಅಮಾನುಷ ಕೃತ್ಯಗಳು ಒಳಗೊಂಡಿರುತ್ತದೆ. ಇದರ ಪರಿಣಾಮದಿಂದಾಗಿ ಹೆಣ್ಣುಮಕ್ಕಳು ತೀವ್ರವಾದ ರಕ್ತ ಸ್ರಾವ, ಸೋಂಕು, ಭಯಂಕರವಾದ ನೋವು, ಊತ, ಗಾಯಗಳು ಮಾಯದೇ ಇರುವುದು, ಮೂತ್ರ ವಿಸರ್ಜಿಸಲು ಸಮಸ್ಯೆಯುಂಟಾಗುವುದು, ಯಾತನೆದಾಯಕ ಋತುಸ್ರಾವ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುವುದಲ್ಲದೇ ಬಹಳಷ್ಟು ಮಹಿಳೆಯರಿಗೆ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗುವುದಿಲ್ಲ, ಎಷ್ಟೋ ಮಹಿಳೆಯರು ಮಗುವಿಗೆ ಜನ್ಮನೀಡಲು ಸಾಧ್ಯವಾಗದೇ ಇದ್ದರೆ ಇನ್ನಷ್ಟು ಮಹಿಳೆಯರು ಮಗುವನ್ನು ಜನ್ಮ ನೀಡುವ ಸಂದರ್ಭದಲ್ಲಂತೂ ರಕ್ತ ಸ್ರಾವ ಸೇರಿದಂತೆ ಹಲವು ರೀತಿಯ ಯಾತನೆಗಳನ್ನು ಅನುಭವಿಸಬೇಕಾಗುತ್ತದೆ. ಇಷ್ಟೇ ಅಲ್ಲದೇ ಜೀವಮಾನಪರಿಯಂತ ಮಾನಸಿಕ ಆಘಾತ ಮತ್ತು ಹಿಂಸೆಯನ್ನೂ ಸಹಿಸಬೇಕಾಗುತ್ತದೆ..  ಹಾಗೂ ಬಹಳಷ್ಟು ಪ್ರಕರಣಗಳಲ್ಲಿ ಅತಿಯಾದ ನೋವಿನಿಂದಾಗಿ ಮಹಿಳೆಯರು ಸಾವನ್ನಪ್ಪುವುದೂ ಇರುತ್ತದೆ. ಪ್ರಪಂಚದಾದ್ಯಂತ ಇವತ್ತಿಗೂ ಸುಮಾರು ಇನ್ನೂರು ಮಿಲಿಯನ್ ಮಹಿಳೆಯರು ಈ ಪ್ರಕ್ರಿಯೆಗೆ ಒಳಗಾಗಿದ್ದಾರಲ್ಲದೇ ಆಫ್ರಿಕಾ, ಮಿಡ್ಲ್ ಈಸ್ಟ್, ಏಷ್ಯಾ ಸೇರಿದಂತೆ ಮೂವತ್ತಕ್ಕಿಂತ ಹೆಚ್ಚು ದೇಶಗಳಲ್ಲಿ ಈ ಪಿಡುಗು ಜಾರಿಯಲ್ಲಿದೆ ಎಂದು ವಿಶ್ವಸಂಸ್ಥೆಯ ವರದಿಯು ಹೇಳುತ್ತದೆ. 


ಇಂತಹದೊಂದು ರಕ್ಕಸ ಪದ್ಧತಿಗೆ ಭಾರತದಲ್ಲಿರುವ ಹಲವು ಭಾಗದ ಮಹಿಳೆಯರೂ ಬಲಿಪಶುಗಳಾಗಿದ್ದಾರೆ. ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಕೇರಳ ಪ್ರಾಂತ್ಯಗಳಲ್ಲಿ ವಾಸಿಸುವ ಬೋಹ್ರಾ ಜನಾಂಗಕ್ಕೆ ಸೇರಿದ ಮಹಿಳೆಯರು "ಖತನ" ಅಥವಾ "ಖಫ್ಜ್" ಎಂದು ಕರೆಯಲ್ಪಡುವ ಈ ಪ್ರಕ್ರಿಯೆಗೆ ಒಳಗಾಗುತ್ತ ಬಂದಿದ್ದಾರೆ. 2018ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಬೋಹ್ರಾ ಜನಾಂಗಕ್ಕೆ ಸೇರಿದ ಏಳು ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಶೇಕಡಾ 75% ರಷ್ಟು ಮಹಿಳೆಯರು ಈ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಅದರಲ್ಲೂ ಶೇಕಡಾ 33% ರಷ್ಟು ಜನ ಇದರಿಂದಾಗಿ ಭೀಕರವಾಗಿ ಬಳಲಿದ್ದಾರೆ.  ನೋವಿನ ಸಂಗತಿಯೆಂದರೆ ಮಹಿಳೆಯರೇ ಇದನ್ನು ಇನ್ನೊಂದು ಮಹಿಳೆಗೆ ನೆರವೇರಿಸುವುದು. ಅದರಲ್ಲೂ ತಾಯಂದಿರೇ ತಮ್ಮ ಹೆಣ್ಣು ಮಕ್ಕಳು ಹರೆಯಕ್ಕೆ ಬಂದಾಗ ಈ ಪ್ರಕ್ರಿಯೆಯನ್ನು ನಡೆಸುತ್ತಾರೆ. ಕಾಲವಿಂದು ಮುಂದುವರೆದಿದ್ದರೂ ಸುಶಿಕ್ಷಿತರೆನಿಸಿಕೊಂಡವರೂ ಇಂದಿಗೂ ಇಂತಹ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಮೇ 2017ರಲ್ಲಿ ಆಗತಾನೇ ಈ ಪ್ರಕ್ರಿಯೆಗೊಳಗಾದ  ಹುಡುಗಿಯೊಬ್ಬಳು ತೀವ್ರವಾದ ರಕ್ತಸ್ರಾವದಿಂದ ಬಳಲುವುದನ್ನು ಕಂಡು ಆಕೆಯ ತಾಯಿ ಆಕೆಯನ್ನು ಆಸ್ಪತ್ರೆಗೆ ಒಯ್ದರು. ಆಕೆಯ ತಾಯಿಯೇ ಹೇಳುವಂತೆ, ರಕ್ತಸ್ರಾವದಿಂದಾಗಿ ಮೂರು ಬೆಡ್ ಶೀಟ್‍ಗಳು ಸಂಪೂರ್ಣವಾಗಿ ಒದ್ದೆಯಾಗಿದ್ದವು. ಇನ್ನೊಂದು ಪ್ರಕರಣದಲ್ಲಿ ಬಾಲಕಿಯೊಬ್ಬಳು ಬರೊಬ್ಬರಿ ಆರು ದಿನಗಳ ವರೆಗೆ ಸತತವಾಗಿ ರಕ್ತಸ್ರಾವದಿಂದ ಬಳಲಿದ್ದಳು. 


ಈ ಪಿಡುಗಿನ ನಿವಾರಣೆಗೆ ಪ್ರಪಂಚದಾದ್ಯಂತ ಹಲವಾರು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 1997ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು UNICEF ಹಾಗೂ UNFPA ಗಳ ಸಹಯೋಗತ್ವದಲ್ಲಿ ಇದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಣೆಯನ್ನು ನೀಡಿತ್ತು. 2008ರಲ್ಲಿ ಒಂಭತ್ತು ದೇಶಗಳ ಸಹಕಾರದೊಂದಿಗೆ ಮಹಿಳೆಯರ ಜನನಾಂಗ ಕತ್ತರಿಸುವಿಕೆಯ ನಿರ್ಮೂಲನೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಮೇ 2016ರಲ್ಲಿ ಮಹಿಳೆಯರ ಆರೋಗ್ಯದ ಕುರಿತು ಮಾರ್ಗದರ್ಶನಗಳನ್ನು ಪ್ರಕಟಿಸಿತಲ್ಲದೇ ಈ ಪದ್ಧತಿಯ ವಿರುದ್ಧ ಮಹಿಳೆಯರ ಸಬಲೀಕರಣ ಮಾಡುವುದಕ್ಕೆ ಪ್ರೋತ್ಸಾಹವನ್ನೂ ನೀಡಿತು. ಅಲ್ಲದೇ ವಿಶ್ವವ್ಯಾಪಿ ಇರುವ ಬಹಳಷ್ಟು ಎನ್‍ಜಿಓಗಳೂ ಕೂಡಾ ಹೋರಾಟಗಳನ್ನು ನಡೆಸಿವೆ. 


ಭಾರತದಲ್ಲಿ ಮಹಿಳೆಯರ ಜನನಾಂಗ ಕತ್ತರಿಸುವಿಕೆಯ ನಿರ್ಮೂಲನೆಗೆ ಸಂಬಂಧಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ2016ರಲ್ಲಿ ಹೂಡಿದ್ದ ದಾವೆಯ ಸಂಬಂಧಿಸಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು "ಭಾರತದಲ್ಲಿರುವ ಈ ಸಂಪ್ರದಾಯಕ್ಕೆ ಸಂಬಂಧಪಟ್ಟಂತೆ ಅಧಿಕೃತವಾಗಿ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲ" ಎಂದು ಹೇಳಿಕೆ ನೀಡಿತ್ತು. ಆದರೆ ವಿ ಸ್ಪೀಕ್ ಔಟ್ ಎಂಬ ಅಭಿಯಾನವು ಈ ಪಿಡುಗಿನಿಂದ ನೊಂದ ಮಹಿಳೆಯರಿಗೆ ದನಿಯಾಯಿತು. ಈ ಕುರಿತು ಅಧ್ಯಯನ ನಡೆಸಿ ಭಾರತದಲ್ಲಿ ಇಂದಿಗೂ ಜಾರಿಯಲ್ಲಿರುವ ಈ ಪಿಡುಗಿನ ಕುರಿತು ಸಂಪೂರ್ಣ ಮಾಹಿತಿಯನ್ನೂ, ಇಂದರಿಂದಾಗಿ ಯಾತನೆಯನ್ನು ಅನುಭವಿಸಿದ ಮಹಿಳೆಯರ ಅಭಿಪ್ರಾಯಗಳನ್ನೂ ಕಲೆಹಾಕಿತು. ಅಲ್ಲದೇ ಬೋಹ್ರಾ ಜನಾಂಗದ ಬಹಳಷ್ಟು ಮಹಿಳೆಯರೂ ಕೂಡಾ ಇದರ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟವನ್ನು ನಡೆಸಿದರು. ಆದರೂ ಸರ್ಕಾರದಿಂದ ಇದಕ್ಕೆ ತಕ್ಕುದಾದ ಯಾವ ಪ್ರತಿಕ್ರಿಯೆಯಾಗಲೀ ಪರಿಹಾರವಾಗಲೀ ಬಂದಿಲ್ಲ.  


ಒಟ್ಟಿನಲ್ಲಿ ಮಹಿಳೆಯರ ಜನನಾಂಗವನ್ನು ಕತ್ತರಿಸುವಂತಹ ಅಮಾನವೀಯ ಕೃತ್ಯವು ಲಿಂಗತಾರತಮ್ಯಕ್ಕೆ ಎಡೆಮಾಡಿಕೊಡುವುದಲ್ಲದೇ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಮಹಿಳೆಯರ ಮೇಲಿನ ಶೋಷಣೆಗಳಲ್ಲಿನ ಒಂದು ಭೀಕರ ಮಜಲು ಇದಾಗಿದೆ. ಇಂಥದ್ದೊಂದು ಶೋಷಣೆಗೊಳಗಾದ ಎಷ್ಟೋ ಎಳೆಯ ಬಾಲಕಿಯರು ತಮ್ಮ ಬಾಲ್ಯವನ್ನು ಕಳೆದುಕೊಂಡಿದ್ದಾರೆ.. ಎಷ್ಟೋ ಮಹಿಳೆಯರ ಬದುಕುವ ಹಕ್ಕನ್ನೇ ಈ ಸಂಪ್ರದಾಯ ಕಿತ್ತುಕೊಂಡಿದೆ. ನಮ್ಮಲ್ಲಿ ಇಂದಿಗೂ ಉಪಯೋಗಕ್ಕೆ ಬಾರದ ಇಂತಹ ಸಂಪ್ರದಾಯಗಳು ಯಾವುದೇ ಎಗ್ಗು ತಗ್ಗಿಲ್ಲದೇ ಜಾರಿಯಲ್ಲಿವೆ. ಇವುಗಳನ್ನು ಮುರಿದು ಮನುಷತ್ವವನ್ನು ಸಾರುವ ಕೆಲಸವಾಗಬೇಕಾದ ತುರ್ತು ಅಗತ್ಯವಿದೆ.  


-ಮುದ್ದು ತೀರ್ಥಹಳ್ಳಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com