
ಬೀಜಿಂಗ್: ಚೀನಾದ ಟಿಯಾಂಜಿನ್‍ನಲ್ಲಿ ಸಂಭವಿಸಿದ್ದ ಅವಳಿ ಸ್ಫೋಟಗಳಲ್ಲಿ ಅತ್ಯಂತ ಅಪಾಯಕಾರಿ ವಿಷಾನಿಲ ಸೋಡಿಯಂ ಸೈನೈಡ್ ಇತ್ತೆಂದು ಸರ್ಕಾರದ ಅಧಿಕೃತ ವರದಿಯಿಂದ ತಿಳಿದುಬಂದಿದೆ. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯೋಗದ ಮೈಕ್ರೋ ಬ್ಲಾಗ್‍ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಜೀವಕ್ಕೆ ಅತ್ಯಂತ ಹಾನಿಕರವಾಗಿರುವ ಈ ಸೋಡಿಯಂ ಸೈನೈಡ್ ವಿಷಾನಿಲದಿಂದ ಜನರನ್ನು ರಕ್ಷಿಸಲು ಪೊಲೀಸ್ ಇಲಾಖೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಸ್ಫೋಟ ನಡೆದ ಸ್ಥಳದ ಸುತ್ತಮುತ್ತ ವಾಸವಿದ್ದ ಜನರಿಗೆ ಪೊಲೀಸರು ಶಾಲೆಯೊಂದರಲ್ಲಿ ಆಶ್ರಯ ಒದಗಿಸಿದ್ದಾರೆ. ಈ ಮೊದಲು ಸಮುದ್ರತೀರದೆಡೆಗೆ ವಿಷಾನಿಲ ಗಾಳಿ ಬೀಸುತ್ತಿರುವು ದರಿಂದ ಹೆಚ್ಚಿನ ಅಪಾಯವಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಆದರೆ ಗಾಳಿ ತನ್ನ ದಿಕ್ಕು ಬದಲಾಯಿಸಿರುವುದರಿಂದ ಗಾಳಿಯ ವಿರುದ್ಧ ದಿಕ್ಕಿನಲ್ಲಿರುವ ಶಾಲೆಯಲ್ಲಿ ಜನರನ್ನು ಇರಿಸಲಾಗಿದೆ. ದೇಹ ಸಂಪೂರ್ಣವಾಗಿ ಮುಚ್ಚುವ ಉದ್ದದ ಪ್ಯಾಂಟು ಹಾಗೂ ಮುಖಕ್ಕೆ ರಕ್ಷಾವಸ್ತ್ರ ಧರಿಸಬೇಕೆಂದು ನಿರ್ದೇಶಿಸಲಾಗಿದೆ. ಏತನ್ಮಧ್ಯೆ ಸ್ಫೋದಿಂದ ಸಾವಿನ ಸಂಖ್ಯೆ 104-ಕ್ಕೇರಿದೆ ಎಂದು ಚೀನಾ ಸರ್ಕಾರ ತಿಳಿಸಿದೆ. ಬುಧವಾರದ ಈ ಸ್ಫೋಟ ಒಂದು ಕಿಲೋಮೀಟರ್ ವಿಸ್ತೀರ್ಣದಲ್ಲಿದ್ದ ಸುಮಾರು 1.5 ಕೋಟಿ ಜನರ ಅನುಭವಕ್ಕೆ ಬಂದಿದೆ ಎಂದು ಸರ್ಕಾರ ತಿಳಿಸಿದೆ.
Advertisement