
ಬ್ಯಾಂಕಾಕ್: ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನ ಮಧ್ಯ ಭಾಗದಲ್ಲಿ ದೇವಾಲಯವೊಂದರ ಸಮೀಪ ಬಾಂಬ್ ಸ್ಪೋಟಗೊಂಡು ಕನಿಷ್ಠ 12 ಮಂದಿ ಸಾವನ್ನಪ್ಪಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಅಸ್ತವ್ಯಸ್ತವುಂಟಾಗಿದ್ದು, ಮೃತದೇಹಗಳು ಎಲ್ಲೆಂದರಲ್ಲಿ ಬಿದ್ದಿವೆ.
ರಾಜಧಾನಿಯ ಎರವಾನ್ ದೇವಾಲಯದ ಪಕ್ಕ ಘಟನೆ ನಡೆದಿದ್ದು, ಇಂದು ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದೆ. ಬೈಕಿನಲ್ಲಿ ಸ್ಪೋಟಕವನ್ನಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
5 ಸ್ಟಾರ್ ಹೊಟೇಲೊಂದರ ಸಮೀಪ ಇರುವ ದೇವಾಲಯ ಸಮೀಪ ಸ್ಪೋಟ ಸಂಭವಿಸಿದೆ. ದೇವಾಲಯದ ಸುತ್ತ ನೆರೆದಿದ್ದ ಜನರು ಭೀತಿಗೊಂಡು ದಿಕ್ಕಾಪಾಲಾಗಿ ಓಡಿದರು. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.
ಬ್ರಹ್ಮ ದೇವರ ದೇವಾಲಯವಾಗಿದ್ದರೂ ಇಲ್ಲಿಗೆ ನಿತ್ಯ ಬೌದ್ಧರು ಭೇಟಿ ನೀಡುತ್ತಿದ್ದರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಪೊಲೀಸ್ ವಕ್ತಾರ ಲೆ. ಜನರಲ್, ಪ್ರವುತ್ ತವೊರ್ನ್ ಸಿರಿ, ಇದೊಂದು ಬಾಂಬ್ ಸ್ಪೋಟ. ಯಾರು ಸ್ಪೋಟಿಸಿದರು ಎಂಬ ಬಗ್ಗೆ ಇನ್ನೂ ತಿಳಿದಿಲ್ಲ, ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಚಟುವಟಿಕೆ ಹೆಚ್ಚಾಗಿರುವ ರತ್ಚಪ್ರಸಂಗ್ ಪ್ರದೇಶದಲ್ಲಿ ಸ್ಪೋಟ ಸಂಭವಿಸಿದೆ.
Advertisement