
ಲಂಡನ್: ಭಯೋತ್ಪಾದನಾ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಮೇಲೆ ದಾಳಿ ನಡೆಸಲು ಬ್ರಿಟನ್ ಸಂಸತ್ತಿನಲ್ಲಿ ಸಂಸದರು ಹೆಚ್ಚು ಮತ ಹಾಕಿದ್ದರ ಪರಿಣಾಮವಾಗಿ ಬ್ರಿಟನ್ ಮೊದಲ ಬಾರಿಗೆ ಐಎಸ್ ವಿರುದ್ಧ ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸಿದೆ.
ರಾಯಲ್ ಏರ್ ಫೋರ್ಸ್ ಟೊರ್ನ್ಯಾಡೊ ಜೆಟ್ ಗಳು ಸೈಪ್ರಸ್ ನ ಅಕ್ರೋತಿರಿ ವಾಯು ನೆಲೆಯಿಂದ ಹೊರಟು ಸಿರಿಯಾದಲ್ಲಿ ಮೊದಲ ಬಾರಿಗೆ ವೈಮಾನಿಕ ದಾಳಿ ನಡೆಸಿವೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
ಪೂರ್ವ ಸಿರಿಯಾದಲ್ಲಿ ಐ ಎಸ್ ನಿಯಂತ್ರಣದಲ್ಲಿರುವ ಆರು ಇಂಧನ ನೆಲೆಗಳ ಮೇಲೆ ಈ ದಾಳಿ ನಡೆದಿದೆ.
ಬುಧವಾರ ರಾತ್ರಿ ಬ್ರಿಟನ್ ಸಂಸತ್ತಿನಲ್ಲಿ ಈ ದಾಳಿಯ ಬಗ್ಗೆ ಚರ್ಚೆ ನಡೆಸಿ ಮತಕ್ಕೆ ಹಾಕಲಾಯಿತು. ದಾಳಿಯ ಪರವಾಗಿ ೩೯೭ ಮತಗಳು ಬಿದ್ದರೆ ದಾಳಿ ವಿರೋಧಿಸಿ ೨೨೩ ಸದಸ್ಯರು ಮತ ಚಲಾಯಿಸಿದ್ದಾರೆ.
ವಿರೋಧ ಪಕ್ಷ ಲೇಬರ್ ಪಾರ್ಟಿಯ ೬೬ ಸದಸ್ಯರು ಆಳುವ ಪಕ್ಷದ ಈ ನಿರ್ಣಯಕ್ಕೆ ಓಗೊಟ್ಟಿದ್ದಾರೆ. ಈ ದಾಳಿಯ ವಿವರಗಳನ್ನು ರಕ್ಷಣಾ ಇಲಾಖೆ ಗುರುವಾರ ಒದಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬ್ರಿಟನ್ ಗೆ ಸಬ್‌ಮರೀನ್ ಬಲ
ಐಸಿಸ್ ಉಗ್ರರ ವಿರುದ್ಧ ಯುದ್ಧಕ್ಕಾಗಿಯೇ ಸ್ಪೆಷಲ್ ಏರ್ ಸರ್ವಿಸ್(ಎಸ್‌ಎಎಸ್) ಅನ್ನು ಸಿರಿಯಾಗೆ ಕಳುಹಿಸಿಕೊಡಲು ಬ್ರಿಟನ್ ತೀರ್ಮಾನಿಸಿದೆ. ಇದಲ್ಲದೆ ಪೂರ್ವ ಮೆಡಿಟರೇನಿಯನ್‌ನಲ್ಲಿ ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ ಸಬ್‌ಮರೀನ್‌ಗಳು ನಿಯೋಜನೆಗೊಳ್ಳಲಿದ್ದು, ರಖ್ಖಾದ ಮೇಲೆ ಕ್ಷಿಪಣಿ ದಾಳಿಗೂ ಸಿದ್ಧತೆ ನಡೆದಿದೆ. ಇದರ ಜತೆಗೆ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಜ್ಞರ ನಿಯೋಜನೆಗೆ 89.80 ಕೋಟಿ ರೂಪಾಯಿ ವ್ಯಯಿಸಲಿದೆ.
Advertisement