ಪರಾಚಿನಾರ್: ಪಾಕಿಸ್ತಾನದ ಪರಾಚಿನಾರ್ ನಗರದ ಮಾರ್ಕೆಟ್ ವೊಂದರಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಬಾಂಬ್ ಸ್ಫೋಟದಲ್ಲ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 30 ರಿಂದ 50 ಜನರಿಗೆ ಗಾಯಗಳಾಗಿವೆ.
ಆಫ್ಘಾನಿಸ್ತಾನಕ್ಕೆ ಹೊಂದಿಕೊಂಡಿರುವ ಕುರುಮ್ ಪ್ರಾಂತ್ಯದ ಪರಾಚಿನಾರ್ ನಗರದ ಬಟ್ಟೆ ಮಾರುಕಟ್ಟೆಯಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ಚಳಿಗಾಲ ಪ್ರಾರಂಭವಾಗಿರುವ ಕಾರಣ ಬಟ್ಟೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿಯಿದ್ದ ಪರಿಣಾಮ ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
ಬಾಂಬ್ ಸ್ಫೋಟದ ನಿಖರ ಮಾಹಿತಿ ಇನ್ನು ಲಭ್ಯವಾಗಿಲ್ಲ. ಇದೊಂದು ಆತ್ಮಾಹುತಿ ಬಾಂಬ್ ದಾಳಿಯೇ ಅಥವಾ ಮಾರುಕಟ್ಟೆಯಲ್ಲಿ ಬಾಂಬ್ ಇಡಲಾಗಿತ್ತೇ ಎಂಬ ಮಾಹಿತಿ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕುರುಮ್ ಪ್ರಾಂತ್ಯವು ಸೂಕ್ಷ್ಮ ಪ್ರದೇಶವಾಗಿದ್ದು, ಆದಿವಾಸಿ ಜನರು ಹೆಚ್ಚಾಗಿ ವಾಸಿಸುತ್ತಾರೆ. ಈ ಭಾಗದಿಂದಲೇ ಉಗ್ರವಾದಿಗಳು ಆಫ್ಘಾನಿಸ್ತಾನದಿಂದ ಪಾಕಿಸ್ತಾನವನ್ನು ಪ್ರವೇಶಿಸುತ್ತಾರೆ ಮತ್ತು ಇಲ್ಲಿ ಅಪರಾಧ ಪ್ರಕರಣಗಳು ಹೆಚ್ಚು ಎಂದು ಪೊಲೀಸರು ತಿಳಿಸಿದ್ದಾರೆ.