
ನವದೆಹಲಿ: ಬ್ರಿಟನ್ ನ ತಜ್ಞರ ತಂಡ ಸಲ್ಲಿಸಿದ ಫೇಸ್ ಮ್ಯಾಪಿಂಗ್ ವಿಧಿವಿಜ್ಞಾನ ವರದಿಯಲ್ಲಿ ಷ್ಕೆಂಟಿನಲ್ಲಿ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೊತೆ ಭಾವಚಿತ್ರದಲ್ಲಿರುವ ವ್ಯಕ್ತಿಯ ಮುಖ ಸುಭಾಷ್ ಚಂದ್ರ ಬೋಸ್ ಅವರನ್ನು ಹೋಲುತ್ತದೆ ಎಂದು ಹೇಳಿದೆ.
ಈ ವರದಿಯನ್ನು ನಿಜವೆಂದು ಸಾಬೀತುಪಡಿಸಿದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ರಷ್ಯಾದಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು. ಆಮೇಲೆ ಎರಡು ದಶಕಗಳ ನಂತರವೂ ಅವರು ಬದುಕುಳಿದಿದ್ದರು ಎಂದು ತಿಳಿದು ಬರುತ್ತದೆ.
ತಜ್ಞರ ಸಮಿತಿಯು, ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತಾದ ರಹಸ್ಯವನ್ನು ಬಹಿರಂಗಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ ಕೊನೆಗೆ ರಷ್ಯಾಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಒತ್ತಾಯಿಸಬೇಕೆಂದು ಕೋರಿದೆ.
ತಜ್ಞರ ಈ ವರದಿಯು 1966ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ತಾಷ್ಕೆಂಟಿನಲ್ಲಿ ಸಾವನ್ನಪ್ಪಿದ್ದರು ಎಂಬುದರ ಬಗ್ಗೆಯೂ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಶಾಸ್ತ್ರಿಯವರು ತಮ್ಮ ಸಾವಿಗೆ ಸ್ವಲ್ಪ ಹೊತ್ತು ಮುಂಚೆ ತಮ್ಮ ಕುಟುಂಬದವರನ್ನು ಕರೆದು ತಾವು ಭಾರತಕ್ಕೆ ಹಿಂತಿರುಗಿದ ನಂತರ ಒಂದು ಮುಖ್ಯವಾದ ಬಹುದೊಡ್ಡ ಅಂಶವನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದರು ಎಂದು ಹೇಳಲಾಗುತ್ತಿದೆ.
ಇಂದು ನೇತಾಜಿಯವರಿಗೆ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿರುವ ಕಾರ್ಯಕರ್ತರು ಹೇಳುವ ಪ್ರಕಾರ, ಅಂದು ಪ್ರಧಾನಿ ಶಾಸ್ತ್ರಿಯವರು ನೇತಾಜಿಯವರ ಕಣ್ಮರೆ ಕುರಿತು ತನಿಖೆ ನಡೆಸಲು ತನಿಖಾ ಆಯೋಗವನ್ನು ರಚಿಸುವ ಯೋಚನೆಯಲ್ಲಿದ್ದರು. ಆದರೆ ಅದು ಕಾರ್ಯಗತವಾಗಿರಲಿಲ್ಲ.
ನೇತಾಜಿಯವರನ್ನು ಹೋಲುವ ಫೇಸ್ ಮ್ಯಾಪಿಂಗ್ ವಿಧಿವಿಜ್ಞಾನ ವರದಿಯನ್ನು ಇಂಗ್ಲೆಂಡಿನ ಹೈಕೋರ್ಟ್ ಗೆ ಮತ್ತು ಹಗ್ವೆಯ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ನೀಲ್ ಮಿಲ್ಲರ್ ಎಂಬುವವರು ಸಲ್ಲಿಸಿದ್ದು, ಇದಕ್ಕಾಗಿ ಒಂದು ತಿಂಗಳ ಕಾಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. 62 ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರೊಂದಿಗೆ ಭಾವಚಿತ್ರದಲ್ಲಿ ಹೋಲುವ ವ್ಯಕ್ತಿಯ ಮುಖವೂ ಸುಭಾಷ್ ಚಂದ್ರ ಬೋಸ್ ಅವರ ಮುಖವೂ ಭಾರೀ ಹೋಲುತ್ತದೆ. ಕೂದಲೆಳೆಯ ವ್ಯತ್ಯಾಸವಿದೆಯಷ್ಟೆ.
Advertisement