ಹಾರುವ ಕಾರುಗಳ ಕನಸು ನನಸಾಗಿಸಲಿದೆ ಟಿಎಫ್-ಎಕ್ಸ್

ಹಾರುವ ಕಾರುಗಳ ಹಾಲಿವುಡ್ ಸಿನಿಮಾ ಕಥೆ ನಿಜವಾಗುವ ದಿನಗಳು ಸಮೀಪಿಸಿವೆ ಎನ್ನುತ್ತದೆ ಅಮೆರಿಕದ ಟೆರ್ರಾ ಫ್ಯೂಜಿಯಾ ಕಂಪನಿಯ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ವಾಷಿಂಗ್ಟನ್: ಹಾರುವ ಕಾರುಗಳ ಹಾಲಿವುಡ್ ಸಿನಿಮಾ ಕಥೆ ನಿಜವಾಗುವ ದಿನಗಳು      ಸಮೀಪಿಸಿವೆ ಎನ್ನುತ್ತದೆ ಅಮೆರಿಕದ ಟೆರ್ರಾ ಫ್ಯೂಜಿಯಾ ಕಂಪನಿಯ ಹೊಸ ಸಾಹಸ. ಡ್ರೋನ್  ಮಾದರಿಯ ತಾಂತ್ರಿಕತೆ ಬಳಸಿ ಆಕಾಶದಲ್ಲಿ ಹಾರಾಡುವ ಮತ್ತು ಅಗತ್ಯಬಿದ್ದಾಗ  ರಸ್ತೆಯಲ್ಲೂ ಸಾಗುವ ಮಾದರಿಯ ಹೈಬ್ರಿಡ್ ಕಾರು ತಯಾರಿಕೆಗೆ ಮುಂದಾಗಿರುವ ಕಂಪನಿ, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಅಮೆರಿಕ ಫೆಡರಲ್ ಏವಿಯೇಷನ್   ಅಡ್ಮಿನಿಸ್ಟ್ರೇಷನ್ (ಎಫ್ಎಎ) ಅನುಮತಿ ಪಡೆದು ಮಾನವ ರಹಿತ  ಹಾರುವನ(ಡ್ರೋನ್ ಕಾರು)  ಪ್ರಾಯೋಗಿಕ ಹಾರಾಟಕ್ಕೆ ಮುಂದಾಗಿದೆ.

ಗಂಟೆಗೆ 100 ಮೈಲು ವೇಗ: ಈ ಪ್ರಾಯೋಗಿಕ ಹಾರಾಟ, ಕಂಪನಿಯ ನಿರೀಕ್ಷೆಯಂತೆ ಯಶಸ್ವಿಯಾದಲ್ಲಿ ಇದೇ ಹಾರುವ ಕಾರುಗಳಿಗೆ ಮುನ್ನುಡಿಯಾಗಬಹುದು. 55 ಪೌಂಡ್‍ಗಿಂತ ಕಡಿಮೆ ತೂಕದ ಈ ಲಘು ವಾಹನ ಕಂಪನಿಯ  ಉದ್ದೇಶಿತ ಹಾರುವ ಕಾರು ಟಿಎಫ್-ಎಕ್ಸ್  ವಾಹನದ ಹತ್ತನೇ ಒಂದು ಪ್ರಮಾಣದಷ್ಟಿದೆ. ಪ್ರತಿ ಗಂಟೆಗೆ 100 ಮೈಲು ವೇಗದಲ್ಲಿ 400    ಅಡಿ ಎತ್ತರದವರೆಗೆ ಆಕಾಶದಲ್ಲಿ ಹಾರಲು ರಾಯೋಗಿಕ ಲಘು ವಾಹನಕ್ಕೆ ಅವಕಾಶ ನೀಡಲಾಗಿದೆ. ಬ್ಲೇಡ್‍ ರನ್ನರ್, ಸ್ಟಾರ್ ವಾರ್ಸ್ ಹಾಗೂ ಬ್ಯಾಕ್‍ಟು ದ ಫ್ಯೂಚರ್ ಮಾದರಿಯ ಸೈ ಫೈ ಸಿನಿಮಾಗಳಲ್ಲಿ ಕಂಡ ಹಾರುವ ಕಾರುಗಳ ಕನಸು ನಿಜವಾಗಿಸುವ ನಿಟ್ಟಿನಲ್ಲಿ  ಇದೊಂದು  ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗಿದೆ.

ರಸ್ತೆ ಮೇಲೂ ಸಂಚರಿಸುತ್ತೆ: ಟೆರ್ರಾ ಫ್ಯೂಜಿಯಾ ಕಂಪನಿಯ ಉದ್ದೇಶಿತ ಟಿಎಫ್ -ಎಕ್ಸ್  ಹಾರುವ ಕಾರು ಬೇಕೆಂದಾಗ ಆಕಾಶದಲ್ಲಿ ಹಾರುವ, ಇಲ್ಲವೇ ರಸ್ತೆಯ ಮೇಲೆ ಮಾಮೂಲಿ ಕಾರಿನಂತೆ ಚಲಿಸುವ ತಂತ್ರಜ್ಞಾನ ಹೊಂದಲಿ ದ್ದು, ಡ್ರೋನ್ ಮಾದರಿಯಲ್ಲಿ ನಿಂತ ನಿಲುವಲ್ಲೇ  ಟರ್ಬೈನ್ ಬಳಸಿ ಆಕಾಶಕ್ಕೆ ಏರಬಲ್ಲದು. ಹಾಗಾಗಿ ರನ್ ವೇ ಅಗತ್ಯ ಬೀಳದು.   ಆದರೆ, ಕಾರು ಇಳಿಯಲು ಹೆಲಿಪ್ಯಾಡ್ ಮಾದರಿಯ ಜಾಗಬೇಕಾಗುತ್ತದೆ ಎಂದು ಕಂಪನಿ  ತಿಳಿಸಿದೆ.  ಹೆಚ್ಚೂ ಕಡಿಮೆ ದುಬಾರಿ ಐಷಾರಾಮಿ  ಕಾರುಗಳ ಬೆಲೆಯ ಆಸುಪಾಸಿನಲ್ಲೇ ಈ  ಹಾರುವ ಕಾರುಗಳ ಬೆಲೆಯೂ ನಿಗದಿಯಾಗುವ ನಿರೀಕ್ಷೆಯಿದೆ. ಆದರೆ, ಅತ್ಯಾಧುನಿಕ    ಕಾರುಗಳಿಗಿಂತ ಉತ್ತಮ ಸುರಕ್ಷತಾ ಮಾನದಂಡಗಳು ಕಾರಿನಲ್ಲಿರಲಿವೆ. ನಿರಂತರ 500  ಮೈಲಿ ದೂರ ಹಾರುವ ಸಾಮರ್ಥ್ಯದ ಹಾರುವ ಕಾರು,  ಗಂಟೆಗೆ 200 ಮೈಲಿ ವೇಗದಲ್ಲಿ  ಹಾರುವಂತೆ ರೂಪಿಸಲಾಗುವುದು. ನಿರೀಕ್ಷೆಯಂತೆ ಎಲ್ಲವೂ ನಡೆದರೆ ಈ ಹಾರುವ ಕಾರು  ಬರಲು ಇನ್ನೂ ಒಂದು ದಶಕ ಬೇಕಾಗಬಹುದು ಎಂದು ಕಂಪನಿ ಹೇಳಿದೆ.  

ಆದರೆ, ಈ ನಡುವೆ, ತಾನೇ ಅಭಿವೃದ್ಧಿಪಡಿಸಿದ; ರನ್‍ ಮೂಲಕ ಹಾರಿ ಆಕಾಶಕ್ಕೆ ನೆಗೆಯುವ  ಹಾಗೂ ಅಗತ್ಯ ಬಿದ್ದಾಗ ರಸ್ತೆಯ ಮೇಲೂ ಸಾಗಬಹುದಾದ ಟ್ರಾನ್ಸಿಷನ್ ವೆಹಿಕಲ್ ಮುಂದಿನ   ವರ್ಷದಿಂದಲೇ ಗ್ರಾಹಕರಿಗೆ ಲಭ್ಯವಾಗಲಿದೆ ಎಂದಿರುವ ಕಂಪನಿ, ಅದನ್ನು ರೋಡಬಲ್  ಏರ್‍ಕ್ರಾಫ್ಟ್ ಎಂದು ಹೆಸರಿಸಿದೆ. ಇದಕ್ಕೆ ಅಮೆರಿಕ ಎಫ್ಎಎ,  2010ರಲ್ಲೇ ಅನುಮತಿ ನೀಡಿದ್ದು,  ಅದರ ಚಾಲನೆಗೆ ಕನಿಷ್ಠ 20 ಗಂಟೆಗಳ ಪೈಲಟ್  ತರಬೇತಿ ಕಡ್ಡಾಯಗೊಳಿಸಿದೆ. ಆದರೆ, ಟಿಎಫ್ -ಎಕ್ಸ್ ಹೈಬ್ರಿಡ್ ವಾಹನದಲ್ಲಿ ಆಟೋಪೈಲಟ್  ತಾಂತ್ರಿಕತೆ ಅಳವಡಿಸಲಿದ್ದು, ಕಠಿಣ ಪೈಲಟ್ ತರಬೇತಿ ಇಲ್ಲದೆಯೇ ಇದರ ಚಾಲನೆಗೆ  ಅನುಮತಿ ದೊರೆಯಲಿದೆ ಎಂದೂ  ಟೆರ್ರಾ  ಫ್ಯೂಜಿಯಾ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com