ಕೊನೆಗೂ ಪಾಕ್ ನಲ್ಲಿ ಅಂಗೀಕಾರ ಆಗದ ಹಿಂದೂ ವಿವಾಹ ಕಾಯ್ದೆ

ಹಿಂದೂ ವಿವಾಹ ಕಾಯ್ದೆ ಅಂಗೀಕರಿಸಲು ಪಾಕಿಸ್ತಾನ ಸಂಸದೀಯ ಸಮಿತಿ ವಿಫಲವಾಗಿದೆ.
ಹಿಂದೂ ವಿವಾಹ(ಸಾಂಕೇತಿಕ ಚಿತ್ರ)
ಹಿಂದೂ ವಿವಾಹ(ಸಾಂಕೇತಿಕ ಚಿತ್ರ)

ಇಸ್ಲಾಮಾಬಾದ್: ಪಾಕಿಸ್ತಾನವು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅಂದರೆ 67 ವರ್ಶಗಳಿಂದಲೂ ವಿವಾಹ ಕಾನೂನೇ ಇಲ್ಲದೇ ಬದುಕುತ್ತಿರುವ ಅಲ್ಪಸಂಖ್ಯಾತ ಹಿಂದೂ ಸಮುದಾಯ ಇದಕ್ಕಾಗಿ ಇನ್ನೂ ಕೆಲ ಕಾಯ ಕಾಯಬೇಕಿದೆ.

ಹಿಂದೂ ವಿವಾಹ ಕಾಯ್ದೆ ಅಂಗೀಕರಿಸಲು ಪಾಕಿಸ್ತಾನ ಸಂಸದೀಯ ಸಮಿತಿ ವಿಫಲವಾಗಿದೆ. ಈ ಬಗ್ಗೆ ಜು.13 ರಂದು ಮತ್ತೊಮ್ಮೆ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಇದೇ ಮೊದಲ ಬಾರಿಗೆ ಹಿಂದೂ ವಿವಾಹ ಕಾಯ್ದೆ 2014 ರ ಬಗ್ಗೆ ಚರ್ಚಿಸಲು ಪಾಕಿಸ್ತಾನ ಸಂಸದರು ಮುಂದಾಗಿದ್ದರು. ಚೌಧರಿ ಮಹಮ್ಮದ್ ಬಶೀರ್ ವರ್ಕ್ ನೇತೃತ್ವದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ರಾಷ್ಟ್ರೀಯ ಅಸೆಂಬ್ಲಿ ಸ್ಥಾಯಿ ಸಮಿತಿ ಈ ನಿರ್ಧಾರಕ್ಕೆ ಬಂದಿತ್ತು. ಇದು ಪಾಕಿಸ್ತಾನಿ ಹಿಂದೂಗಳಿಗೆ ಹೊಸ ಭರವಸೆ ಮೂಡಿಸಿತ್ತು.

ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇ.1 .6 ರಷ್ಟಿರುವ ಹಿಂದೂಗಳು ತಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸುವ ಮತ್ತು ನೋಂದಣಿ ಮಾಡುವ ಕಾನೂನು ಜಾರಿ ಮಾಡಲು ಕಳೆದ 67 ವರ್ಷಗಳಿಂದಲೂ ಹೋರಾಡುತ್ತಲೇ ಇದ್ದಾರೆ. ಕಳೆದ ವರ್ಷ ಪ್ರತಿಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ನಾಯಕ ರಮೇಶ್ ಲಾಲ್ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್(ಪಿಎಂಎಲ್-ಎನ್) ನಾಯಕ ದರ್ಶನ್ ಅವರು ಜಂಟಿಯಾಗಿ ಈ ವಿಧೇಯಕವನ್ನು ಪಾಕ್ ಸಂಸತ್ ನಲ್ಲಿ ಮಂಡಿಸಿದ್ದರು. ಈ ವರ್ಷದ ಮಾರ್ಚ್ ನಲ್ಲಿ ಕಾನೂನು ಸಚಿವ ಪರ್ವೇಜ್ ರಶೀದ್ ಅವರೂ ಇದೆ ಮಾದರಿಯ ವಿಧೇಯಕ ಮಂಡನೆ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಗಿತ್ತು. ಸರ್ಕಾರ ಮಂಡಿಸಿರುವ ವಿಧೇಯಕದ ಪ್ರಕಾರ, ಕಾನೂನು ಕೇವಲ ಇಸ್ಲಾಮಾಬಾದ್ ವ್ಯಾಪ್ತಿಯಲ್ಲಷ್ಟೇ ಅನ್ವಯವಾಗಲಿದೆ. ಆದರೆ ಲಾಲ್ ಅವರ ಕರಡು ವಿಧೇಯಕದಲ್ಲಿ ಕಾನೂನು ದೇಶಾದ್ಯಂತ ಜಾರಿಯಾಗಬೇಕು ಎಂದು ಹೇಳಲಾಗಿದೆ.

ಈ ಕಾನೂನು ಜಾರಿಯಾಗಿದ್ದರೆ ಅದು ಹಿಂದೂಗಳ ವಿವಾಹ ಮತ್ತು ವಿಚ್ಛೇದನ ನೋಂದಣಿಗೆ ಅವಕಾಶ ಕಲ್ಪಿಸುತ್ತಿತ್ತು. ಇಂತಹ ಕಾನೂನಿನ ಅನುಪಸ್ಥಿತಿಯಿಂದಾಗಿ ಪಾಕಿಸ್ತಾನದ ಹಿಂದೂಗಳು ತಮ್ಮ ವಿವಾಹಕ್ಕೆ ಯಾವುದೇ ಕಾನೂನಾತ್ಮಕ ಪುರಾವೆಗಳಿಲ್ಲದೇ ಸಮಸ್ಯೆ ಅನುಭವಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com