
ಅಬುಜ: ನೈಜೀರಿಯಾದ ಗೊಂಬೆ ನಗರದ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಎರಡು ಭಾರಿ ಸ್ಫೋಟಗಳಲ್ಲಿ ಕನಿಷ್ಠ ೧೦೦ ಜನ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಶುಕ್ರವಾರ ಮಾಧ್ಯಮವೊಂದು ವರದಿ ಮಾಡಿದೆ.
ಗುರುವಾರ ಸಂಜೆ ಮಾರುಕಟ್ಟೆ ಪ್ರದೇಶದ ಜನನಿಬಿಡ ಪ್ರದೇಶದಲ್ಲಿ ಈದ್-ಉಲ್-ಫಿತ್ರ್ ಸಮಯದಲ್ಲಿ ಕೊನೆಯ ಕ್ಷಣದ ಮಾರಾಟ ನಡೆಯುವಾಗ ಈ ಸ್ಫೋಟಗಳು ನಡೆದಿವೆ.
ಮೃತಪಟ್ಟವರಲ್ಲಿ ಬಹುತೇಕ ಮಕ್ಕಳು ಎಂದಿದ್ದಾರೆ ಪ್ರತ್ಯಕ್ಷದರ್ಶಿಯೊಬ್ಬರು. ಸ್ಫೋಟಕ್ಕೆ ಕಾರಣಗಳು ಇನ್ನೂ ತಿಳಿದಿಲ್ಲ.
ಈ ಸ್ಫೋಟಕ್ಕೆ ನೈಜೀರಿಯಾ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಬೋಕೋ ಹರಾಮ್ ಕಾರಣ ಎಂದು ಪ್ರಾದೇಶಿಕ ನಿವಾಸಿಗಳು ಆರೋಪಿಸಿದ್ದಾರೆ.
ಇಂತಹ ಹಿಂಸಾತ್ಮಕ ದಾಳಿಗಳಲ್ಲಿ ೨೦೦೯ ರಿಂದ ಆಫ್ರಿಕಾದ ಹೆಚ್ಚು ಜನಸಂಖ್ಯೆಯ ದೇಶವಾದ ನೈಜೀರಿಯದಾದ್ಯಂತ ೧೩ ಸಾವಿರಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದಾರೆ.
Advertisement