
ಡಮಾಸ್ಕಸ್: ಇಸಿಸ್ ಉಗ್ರರು ಮತ್ತೊಂದು ಭಯಾನಕ ವಿಡಿಯೋ ಬಿಡುಗಡೆ ಮಾಡಿದ್ದು, ಸೆರೆಯಾಳಾಗಿರಿಸಿದ್ದ ಸಿರಿಯಾದ ಸೈನಿಕನೊಬ್ಬನನ್ನು ಹತ್ಯೆ ಮಾಡಿ, ಅದರ ದೃಶ್ಯಗಳನ್ನು ಬಿಡುಗಡೆ ಮಾಡಿದ್ದಾರೆ.
ಬಂಡೆಕಲ್ಲೊಂದರ ಮೇಲೆ ಸೈನಿಕನ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿ ಕೆಳಗೆ ದೂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಅಲ್ಲದೆ, ಸೈನಿಕನ ಹತ್ಯೆಗೂ ಮುನ್ನ ಉಗ್ರರು 'ಫ್ರಾನ್ಸ್‌ನ ರಾಜಧಾನಿ ಪ್ಯಾರೀಸ್ ನ ರಸ್ತೆಗಳಲ್ಲಿ ಉಗ್ರನೊಬ್ಬ ಹೆಣಗಳ ರಾಶಿ ಹಾಕಲಿದ್ದಾನೆ' ಎಂದು ಘೋಷಣೆ ಕೂಗಿರುವುದು ಸಹ ವಿಡಿಯೋದಲ್ಲಿ ದಾಖಲಾಗಿದೆ.
ಪ್ರವಾದಿ ಮೊಹಮ್ಮದರ ಕುರಿತು ಹಲವು ಬಾರಿ ವಿವಾದಾತ್ಮಕ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದ ಫ್ರಾನ್ಸ್‌ನ ವಿಡಂಬನ ವಾರಪತ್ರಿಕೆ "ಚಾರ್ಲಿ ಹೆಬ್ಡೋ'' ಕಚೇರಿ ಮೇಲೆ ಜನವರಿ ತಿಂಗಳಿನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಪತ್ರಕರ್ತರು, ವ್ಯಂಗ್ಯ ಚಿತ್ರಕಾರರ ಸಹಿತ 12 ಮಂದಿ ಸಾವನ್ನಪ್ಪಿದ್ದರು.
ಪೂರ್ವ ಫ್ರಾನ್ಸ್ ನಲ್ಲಿ ಜೂನ್ 26 ರಂದು ಗ್ಯಾಸ್ ಫ್ಯಾಕ್ಟರಿಯೊಂದರ ಮೇಲೆ ಇಸ್ಲಾಮಿಕ್ ಬಾವುಟ ಹೊಂದಿದ್ದ ಶಂಕಿತ ಐಸಿಸ್ ಉಗ್ರನೊಬ್ಬ ನಡೆಸಿದ್ದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದರು.
Advertisement