
ಇಸ್ಲಾಮಾಬಾದ್:ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅಮೇರಿಕಾ ಪ್ರವಾಸದಲ್ಲಿ ಮಾತನಾಡಿದ್ದಕ್ಕಿಂತ ಅಮೇರಿಕ ಅಧ್ಯಕ್ಷರ ಸಲಹೆಗಳಿಗೆ ಕಿವಿಗೊಟ್ಟಿದ್ದೇ ಹೆಚ್ಚು ಎಂದು ಪಾಕಿಸ್ತಾನ ದಿನಪತ್ರಿಕೆ ಸಂಪಾದಕೀಯ ಬರೆದಿದೆ.
ನ್ಯೂಸ್ ಇಂಟರ್ ನ್ಯಾಷನಲ್ ಪತ್ರಿಕೆ ಶನಿವಾರದ ಸಂಪಾದಕೀಯದಲ್ಲಿ ಪಾಕ್ ಪ್ರಧಾನಿಯ ಅಮೇರಿಕ ಪ್ರವಾಸವನ್ನು ವಿಶ್ಲೇಷಣೆ ಮಾಡಿದ್ದು, ಬರಾಕ್ ಒಬಾಮ- ನವಾಜ್ ಷರೀಫ್ ಮಾತುಕತೆಯಿಂದ ಮಹತ್ವದ ಫಲಿತಾಂಶ ಹೊರಬರಲಿಲ್ಲ ಎಂದು ಹೇಳಿದೆ. ಪಾಕ್ ಪ್ರಧಾನಿಯ ಅಮೇರಿಕಾ ಭೇಟಿ ಅಫ್ಘಾನಿಸ್ಥಾನ ಜೊತೆ ತನ್ನ ಸಂಬಂಧವನ್ನು ಭದ್ರಗೊಳಿಸುವುದು ಸೇರಿದಂತೆ ಅನೇಕ ಮಹತ್ವದ ವಿಷಯಗಳ ಬಗ್ಗೆ ಮಹ್ವತ್ವದ ಫಲಿತಾಂಶವನ್ನು ನಿರೀಕ್ಷಿಸಿತ್ತು. ಆದರೆ ಅಮೆರಿಕಾದಲ್ಲಿ ಪಾಕಿಸ್ತಾನ ಪ್ರಧಾನಿ ಮಾತನಾಡುವುದಕ್ಕಿಂತ ಬರಾಕ್ ಒಬಾಮ ಅವರಿಂದ ಕೇಳಿಸಿಕೊಳ್ಳುವುದೇ ಹೆಚ್ಚಾಯಿತು ಎಂದು ಹೇಳಿದೆ.
ದ್ವಿಪಕ್ಷೀಯ ಮಾತುಕತೆಯಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಅಮೇರಿಕ ಅಧ್ಯಕ್ಷರು ಒತ್ತಾಯಿಸಿದ್ದು, ಮಾತುಕತೆ ಏಕದಿಕ್ಕಿನಲ್ಲಿ ಸಾಗಿತ್ತು. ಮಾತುಕತೆಯ ಬಹುತೇಕ ಭಾಗ ಪಾಕ್ ಪ್ರಧಾನಿಗೆ ಹೆಚ್ಚು ಮಾತನಾಡುವ ಅವಕಾಶ ಸಿಗಲಿಲ್ಲ ಎಂದು ನ್ಯೂಸ್ ಇಂಟರ್ ನ್ಯಾಷನಲ್ ಹೇಳಿದೆ.
ಪಾಕಿಸ್ತಾನ ನಿರೀಕ್ಷೆ ಹೊಂದಿದ್ದ ಅಮೆರಿಕಾದೊಂದಿಗಿನ ನಾಗರಿಕ ಪರಮಾಣು ಒಪ್ಪಂದವು ಸಹ ಈಡೇರಲಿಲ್ಲ. ಅಮೇರಿಕಾ ಪಾಕಿಸ್ತಾನವನ್ನು ಬದಿಗಿಡುತ್ತಿರುವುದು ಸ್ಪಷ್ಟವಾಗಿದ್ದು ಪಾಕಿಸ್ತಾನಕ್ಕೆ ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಭಾರತ ಪಾಕಿಸ್ತಾನದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರ ಬಗ್ಗೆ ಪಾಕಿಸ್ತಾನ ಕಡತಗಳನ್ನು ನೀಡಿದರೂ ಅಮೇರಿಕಾ ಈ ಬಗ್ಗೆ ಪ್ರತಿಕ್ರಿಯೆ ನೀಡದೇ ಇರುವುದು ಪಾಕಿಸ್ತಾನಕ್ಕೆ ಉಂಟಾದ ಹಿನ್ನಡೆ, ಆದರೂ ಚೀನಾದಿಂದ ಸವಾಲು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅಮೇರಿಕ ಸದ್ಯಕ್ಕೆ ಪಾಕಿಸ್ತಾವನವನ್ನು ದೂರವಿಡಲು ಸಿದ್ಧವಿಲ್ಲ ಎಂಬುದು ಪಾಕಿಸ್ತಾನ ಪ್ರಾಧಾನಿ ಅಮೇರಿಕಾ ಭೇಟಿಯಿಂದ ಸ್ಪಷ್ಟವಾಗಿದೆ ಎಂದು ಪತ್ರಿಕೆ ವಿಶ್ಲೇಷಿಸಿದೆ.
Advertisement