ಕಡಲ ಕಿನಾರೆಯಲ್ಲಿ ಬಿದ್ದಿರುವ ಬಾಲಕನ ಮೃತದೇಹ ( ಕೃಪೆ : ರಾಯಿಟರ್ಸ್ )
ಕಡಲ ಕಿನಾರೆಯಲ್ಲಿ ಬಿದ್ದಿರುವ ಬಾಲಕನ ಮೃತದೇಹ ( ಕೃಪೆ : ರಾಯಿಟರ್ಸ್ )

ವಿಶ್ವವೇ ಕಂಬನಿ ಮಿಡಿದ ಆ ಚಿತ್ರದಲ್ಲಿರುವ ಬಾಲಕ ಯಾರು? ಇಲ್ಲಿದೆ ಉತ್ತರ

ಆತನ ಹೆಸರು ಆಯ್ಲಾನ್ ಕುರ್ದಿ. ಸಿರಿಯಾದ ಕೊಬಾನಿ ನಿವಾಸಿ ಈತ. ಕೊಬಾನಿಯಲ್ಲಿ ಸಮುದ್ರ ತೀರಗಳಿಲ್ಲ, ಅಲ್ಲಿರುವುದು ಬಾಂಬ್‌ಗಳು ಮಾತ್ರ...
Published on

ಇಸ್ತಾಂಬುಲ್: ಟರ್ಕಿಯ ಬೋಡ್ರಮ್ ಸಮುದ್ರ ಕಿನಾರೆಯಲ್ಲಿ ಮೃತಪಟ್ಟು ಬಿದ್ದಿರುವ ಮೂರು ವರ್ಷದ ಬಾಲಕನ ಫೋಟೋ ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದು, ಬಾಲಕನ ಮರಣಕ್ಕೆ ಇಡೀ ವಿಶ್ವವೇ ಕಂಬನಿ ಮಿಡಿದಿದೆ.

ಚಿತ್ರದಲ್ಲಿರುವ ಮೃತ ಬಾಲಕ ಯಾರು? ಅವನಿಗೆ ಏನಾಯ್ತು? ಎಂಬ ಪ್ರಶ್ನೆಗಳು ಎಲ್ಲರ ಮನಸ್ಸಲ್ಲೂ ಇದೆ. ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಆತನ ಹೆಸರು ಆಯ್ಲಾನ್ ಕುರ್ದಿ. ಸಿರಿಯಾದ ಕೊಬಾನಿ ನಿವಾಸಿ ಈತ. ಕೊಬಾನಿಯಲ್ಲಿ ಸಮುದ್ರ ತೀರಗಳಿಲ್ಲ, ಅಲ್ಲಿರುವುದು ಬಾಂಬ್‌ಗಳು ಮಾತ್ರ. ಇಸ್ಲಾಮಿಕ್ ಸ್ಟೇಟ್ (ಇಸಿಸ್) ವಶದಲ್ಲಿರುವ ಈ ನಗರದಿಂದ ಯುರೋಪ್‌ನಲ್ಲಿ ಆಶ್ರಯ ಬಯಸಿ ಅಲ್ಲಿಗೆ ತೆರಳಿದ ಕುಟುಂಬವೊಂದರ ಸದಸ್ಯನಾಗಿದ್ದಾನೆ ಈತ.

ಯುರೋಪ್ ರಾಷ್ಟ್ರಗಳಲ್ಲಿ ಶಾಂತಿಯುತವಾದ ಬದುಕು ಸಾಗಿಸಬೇಕು ಎಂಬ ಆಸೆಯಿಂದಲೇ ಅಲ್ಲಿನ ಜನರು ನಾಡದೋಣಿ ಮತ್ತು ಪುಟ್ಟ ದೋಣಿಗಳಲ್ಲಿ ಪ್ರಯಾಣ ನಡೆಸಿದ್ದರು. ಸಿರಿಯಾದ ಜೀವನಕ್ಕೆ ರೋಸಿ ಹೋಗಿ ಅಲ್ಲಿಂದ ರಕ್ಷಣೆ ಪಡೆಯುವ ಗುರಿಯೊಂದಷ್ಟೇ ಅವರಲ್ಲಿ ಇದ್ದದ್ದು. ಅದ್ಯಾವ ನಿಮಿಷದಲ್ಲಿ ಗುಂಡಿಗೆ,  ಬಾಂಬ್‌ಗೆ ಬಲಿಯಾಗುತ್ತೇವೆಯೋ ಎಂಬ ಭಯ ಅವರಲ್ಲಿ ಇತ್ತು.  ಹೇಗಾದರು ಮಾಡಿ ಯುರೋಪ್‌ಗೆ ತಲುಪಿದರೆ ಅಲ್ಲಿ ನಿರಾಶ್ರಿತರ ಬಿಡಾರದಲ್ಲಿ ಒಂದಷ್ಟು ಜಾಗ ಸಿಗಬಹುದು. ಅಲ್ಲಿ ಕಷ್ಟ ಪಟ್ಟು ದುಡಿದು ತಿನ್ನಬಹುದು ಎಂಬ ಯೋಚನೆ ಅವರದ್ದಾಗಿತ್ತು.



(ಆಯ್ಲಾನ್ ತನ್ನ ಸಹೋದರ ಗಾಲೀಬ್ ನೊಂದಿಗೆ - ಸಂಗ್ರಹ ಚಿತ್ರ)

ಆದರೆ ಯುರೋಪ್‌ಗೆ ಹೋಗುವುದು ಅಷ್ಟು ಸುಲಭವಲ್ಲ. ಗಡಿ ಭಾಗದಲ್ಲಿ ಭದ್ರತಾ ಪಡೆಯ ಕಣ್ಗಾವಲಿದೆ. ಹೀಗಿರುವಾಗ ಅಲ್ಲಿಗೆ ಹೋಗುವ ಸುಲಭ ಉಪಾಯವೆಂದರೆ ಸಮುದ್ರ ಮಾರ್ಗ. ಅಲ್ಲಿಯೂ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ನುಸುಳಬೇಕು. ಹಾಗೆ ಹೋಗಬೇಕಾದರೆ ಅದಕ್ಕೆ ತಕ್ಕ ಸ್ಥಳ ಗ್ರೀಸ್ ನ ಕೋಸ್ ದ್ವೀಪ.  ಅಲ್ಲಿ ತಲುಪುವುದು ತುಂಬಾ ಕಷ್ಟವಲ್ಲ. ಆದರೆ  ಪ್ರಕ್ಷುಬ್ಧವಾಗಿರುವ ಹವಾಮಾನ ಮತ್ತು ಕಡಲನ್ನು ಎದುರಿಸುತ್ತಾ ಸಾಗಬೇತು. ತಮ್ಮಲ್ಲಿರುವ ಎಲ್ಲ ವಸ್ತುಗಳನ್ನು ಮಾರಿ ಆ ಹಣವನ್ನೇ ಬೋಟ್ ಸರ್ವೀಸ್ ನವರಿಗೆ ನೀಡಿ ಈ ಪ್ರಯಾಣ ಕೈಗೊಳ್ಳಲಾಗುತ್ತದೆ. ಹೀಗಿರುವ ಪ್ರಯಾಣಗಳಲ್ಲಿ ಅವಘಡಗಳು ಜಾಸ್ತಿಯೇ. ಅದ್ಯಾವ ಕ್ಷಣದಲ್ಲಾದರೂ ಸಮುದ್ರದಲ್ಲಿ ಅಲೆ ಅಬ್ಬರಿಸಬಹುದು. ದೋಣಿ ಮಗಚಿ ಮುಳುಗಬಹುದು. ಇಲ್ಲವೇ ಭದ್ರತಾ ಸೇನೆಯ ಗುಂಡಿಗೆ ಬಲಿಯಾಗಬಹುದು. ಇಷ್ಟೆಲ್ಲಾ ಕಷ್ಟಗಳನ್ನೆದುರಿಸಿ ನಿರಾಶ್ರಿತರ ಶಿಬಿರಕ್ಕೆ ತಲುಪಿದರೆ ಅಲ್ಲಿ ಸಾಂಕ್ರಾಮಿಕ ರೋಗಗಳ ಕಾಟ. ಇಷ್ಟೆಲ್ಲಾ ಸಂಕಷ್ಟಗಳನ್ನು ಎದುರಿಸಿ ಬದುಕಬೇಕಾದ ಜೀವನ ಸಿರಿಯಾದ ಜನರದ್ದು!

ಇಂಥದ್ದೇ ಕಷ್ಟಗಳ ಸರಮಾಲೆಯನ್ನು ಹೊದ್ದ ಪ್ರಯಾಣವನ್ನು ಆಯ್ಲಾನ್ ಕುರ್ದಿಯ ಕುಟುಂಬ ಕೈಗೊಂಡಿತ್ತು. ಟರ್ಕಿ ಮೂಲಕ 100 ಮೈಲುಗಳನ್ನು ದಾಟಿದ ನಂತರ ಆಯ್ಲಾನ್, ಸಹೋದರ ಗಾಲೀಬ್  (5 ವರ್ಷ) , 35ರ ಹರೆಯದ ಅಮ್ಮ ರಿಹಾನ್ ಸೇರಿದ ಕುಟುಂಬ ಟರ್ಕಿಯ ಆಕ್ಯಾರ್‌ಲಾರ್ ಬಂದರಿನಿಂದ ಔಜಿಯನ್ ಸಮುದ್ರ ಮೂಲಕ ಗ್ರೀಸ್‌ನ ಕೋಸ್ ದ್ವೀಪಕ್ಕೆ ಬೋಟ್‌ನಲ್ಲಿ ಪ್ರಯಾಣ ಬೆಳೆಸಿದ್ದರು.  2 ಬೋಟ್‌ಗಳು ಜತೆಯಾಗಿ ಪ್ರಯಾಣ ಆರಂಭಿಸಿದ್ದವು. ಆಯ್ಲಾನ್ ಕುಟುಂಬ ಸೇರಿದಂತೆ 20 ಮಂದಿ ಪ್ರಯಾಣಿಕರು ಬೋಟ್‌ನಲ್ಲಿದ್ದರು.  ಆಯ್ಲಾನ್ ಸೇರಿ ಒಟ್ಟು 5 ಮಕ್ಕಳು ಆ ಬೋಟ್‌ನಲ್ಲಿದ್ದರು. ಪ್ರಯಾಣ ಮಧ್ಯೆ ಬೋಟ್ ಮುಳುಗಿ ಹೋಯಿತು. ಬೋಟ್‌ನಲ್ಲಿದ್ದ 12 ಮಂದಿ ನೀರು ಪಾಲಾದರು.  ಆಯ್ಲಾನ್ ಕುಟುಂಬದ ಎಲ್ಲ ಸದಸ್ಯರು ಸಾವಿಗೀಡಾಗಿದ್ದು, ನೀರು ಪಾಲಾದವರ ಮೃತದೇಹ  ಟರ್ಕಿಯ ಬೋಡ್ರಮ್ ಕಡಲ ತೀರಕ್ಕೆ ಅಪ್ಪಳಿಸಿತ್ತು. ಸಮುದ್ರದ ಇನ್ನೊಂದು ಮೂಲೆಯಲ್ಲಿ  ಆಯ್ಲಾನ್ ಮೃತದೇಹ ಬಿದ್ದಿತ್ತು. ಇದನ್ನು ನೋಡಿದ ಪೊಲೀಸ್ ಅಧಿಕಾರಿಯೊಬ್ಬ ಮಗುವನ್ನು ಕೈಗೆತ್ತಿ ಕೊಂಡ ಚಿತ್ರಗಳನ್ನು ಕ್ಯಾಮೆರಾಗಳು ಸೆರೆ ಹಿಡಿದವು.

ಈ ಚಿತ್ರಗಳೀಗ ಟ್ವಿಟರ್‌ನವಲ್ಲಿ ಸಂಚಲನ ಸೃಷ್ಟಿಸಿದೆ.  ವಿಶ್ವದ ಮಾನವೀಯತೆಯನ್ನು ಪ್ರಶ್ನಿಸುವಂತಿರುವ ಈ ಚಿತ್ರಗಳು ಮಾನವೀಯತೆ ತೀರಕ್ಕೆ ಅಪ್ಪಳಿಸಿದೆ ಎಂಬ ಅರ್ಥ
ಬರುವ #KiyiyaVuranInsanlik ಹ್ಯಾಶ್ ಟ್ಯಾಗ್‌ಗಳಲ್ಲಿ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com