ನನ್ನ ಕುಟುಂಬದವರು ನನ್ನ ತೋಳಿನಲ್ಲೇ ಸತ್ತರು: ಕಣ್ಣೀರಿಟ್ಟ ಆಯ್ಲಾನ್ ಕುರ್ದಿ ಅಪ್ಪ

ತಮ್ಮ ಕುಟುಂಬವನ್ನು ಬಲಿ ತೆಗೆದುಕೊಂಡ ಆ ಕರಾಳ ರಾತ್ರಿಯ ನೆನಪುಗಳನ್ನು ಆಯ್ಲಾನ್ ಕುರ್ದಿಯ ಅಪ್ಪ ಅಬ್ದುಲ್ಲ ಕುರ್ದಿ ಹೇಳಿದ್ದು ಹೀಗೆ...
ಆಯ್ಲಾನ್ ಕುರ್ದಿಯ  ಅಪ್ಪ ಅಬ್ದುಲ್ಲ ಕುರ್ದಿ (ಕೃಪೆ:  ರಾಯಿಟರ್ಸ್)
ಆಯ್ಲಾನ್ ಕುರ್ದಿಯ ಅಪ್ಪ ಅಬ್ದುಲ್ಲ ಕುರ್ದಿ (ಕೃಪೆ: ರಾಯಿಟರ್ಸ್)

ನವದೆಹಲಿ: ಟರ್ಕಿಯಾ ಬೋಡ್ರಮ್ ಸಮುದ್ರ ಕಿನಾರೆಯಲ್ಲಿ ಮೃತಪಟ್ಟು ಬಿದ್ದಿರುವ ಮೂರು ವರ್ಷದ ಹುಡುಗ ಆಯ್ಲಾನ್ ಕುರ್ದಿಯ ಫೋಟೋ ನೋಡಿ ಜಗತ್ತೇ ಕಂಬನಿಗೆರೆಯುತ್ತಿರುವಾಗ ಆತನ ಅಪ್ಪ ಅಬ್ದುಲ್ಲ ಕುರ್ದಿ ಆ ಕರಾಳ ಘಟನೆಯನ್ನು ನೆನೆದು ಕಣ್ಣೀರಿಡುತ್ತಿದ್ದಾರೆ.

ತಮ್ಮ ಕುಟುಂಬವನ್ನು ಬಲಿ ತೆಗೆದುಕೊಂಡ ಆ ಕರಾಳ ರಾತ್ರಿಯ ನೆನಪುಗಳನ್ನು ಅವರು ಹೇಳಿದ್ದು ಹೀಗೆ:

ಆ ದಿನ ನಾನು ನನ್ನ ಕುಟುಂಬ, ಅಂದ್ರೆ ನನ್ನ ಹೆಂಡತಿ ರೆಹಾನ್, ಮಕ್ಕಳಾದ ಮೂರು ವರ್ಷದ ಆಯ್ಲಾನ್ ಮತ್ತು  5ರ ಹರೆಯದ ಗಾಲಿಬ್ ಸೇರಿದಂತೆ ಇತರ ಎಂಟು ಜನರು ಒದು ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದೆವು.

ದೋಣಿ ಮುಂದೆ ಹೋಗುತ್ತಿದ್ದಂತೆ...ಅದೋ ದೈತ್ಯ ಅಲೆಯ ಅಬ್ಬರ! ನಾವು ಸತ್ತೇ ಹೋದೆವು ಅನ್ನುವ ಭಯ ನಮ್ಮನ್ನಾವರಿಸಿತ್ತು. ಆಗ ದೋಣಿಯಲ್ಲಿದ್ದವರು ಸಮುದ್ರಕ್ಕೆ ಜಿಗಿದರು. ನಾನು ನನ್ನ ಮಕ್ಕಳನ್ನು ಮತ್ತು ಹೆಂಡತಿಯನ್ನು ಬಾಚಿ ತಬ್ಬಿಕೊಂಡು ದೋಣಿಯನ್ನು ನಿಯಂತ್ರಣದಲ್ಲಿರಿಸಲು ಯತ್ನಿಸಿದೆ. ಹಾಗೆ ಒಂದು ಗಂಟೆಗಳ ಕಾಲ ನನ್ನ ಬಾಹುಬಂಧನದಲ್ಲಿತ್ತು ನನ್ನ ಕುಟುಂಬ. ಅಲೆಗಳು ಬಡಿಯುತ್ತಾ ನನ್ನ ಕೈಯಿಂದ ನನ್ನ ಕುಟುಂಬವನ್ನು ಕಬಳಿಸಲು ಹವಣಿಸುತ್ತಿತ್ತು. ಆಗಲೇ ನನ್ನ ಕೈಯಿಂದ ನನ್ನ ಮೊದಲ ಮಗ ತಪ್ಪಿ ಹೋದ. ಅವನನ್ನು ಉಳಿಸಲು ಹೋದರೆ, ಇತರ ಮೂರು ಮಂದಿಯ ಪ್ರಾಣವೂ ಹೋಗುತ್ತದೆ ಎಂದು ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದೆ. ಆಗಲೇ ಎರಡನೇ ಮಗ ಆಯ್ಲಾನ್‌ನ್ನು ಸಮುದ್ರ ನುಂಗಿ ಹಾಕಿತು. ನೋಡಿದರೆ, ನನ್ನ ಹೆಂಡತಿಯೂ ಸಾವನ್ನಪ್ಪಿದ್ದಾಳೆ. ನಾನೇನು ಮಾಡಲಿ? ನಿಸ್ಸಹಾಯಕನಾಗಿ ಅಳುತ್ತಾ ಕುಳಿತೆ. ಕರಾವಳಿ ರಕ್ಷಣಾಪಡೆ ನಮ್ಮ ಸಹಾಯಕ್ಕೆ ಬರಲು ಮೂರು ಗಂಟೆಗಳೇ ಬೇಕಾಯಿತು.  ದೋಣಿಯೇರುವಾಗ ನಮಗೆ ನೀಡಿದ ಲೈಫ್ ಜಾಕೆಟ್ ನಕಲಿ ಆಗಿತ್ತು.

ನನ್ನ ಹೆಂಡತಿಯೇ ನನ್ನ ಜಗತ್ತು ಆಗಿದ್ದಳು. ಈಗ ನನ್ನಲ್ಲಿ ಏನೂ ಉಳಿದಿಲ್ಲ. ಇನ್ನೊಂದು ಮದುವೆಯಾಗುವುದಕ್ಕಾಗಲೀ, ಮಕ್ಕಳನ್ನು ಪಡೆಯುವುದರ ಬಗ್ಗೆಯಾಗಲೀ ನಾನು ಚಿಂತಿಸುವುದೇ ಇಲ್ಲ. ನನಗೆ ಉಸಿರುಗಟ್ಟುತ್ತಿದೆ, ನನಗೆ ಉಸಿರಾಡಲು ಆಗುತ್ತಿಲ್ಲ. ಅವರೆಲ್ಲರೂ ನನ್ನ ತೋಳಿನಲ್ಲೇ ಸತ್ತರು...ಅಬ್ದುಲ್ಲ ಕುರ್ದಿಯ ಕಣ್ಣೀರು ಇನ್ನೂ ನಿಂತಿಲ್ಲ...

ಟರ್ಕಿಯ ಬೋಡ್ರಮ್ ಸಮುದ್ರ ಕಿನಾರೆಯಲ್ಲಿ ಮೃತಪಟ್ಟು ಬಿದ್ದಿರುವ ಮೂರು ವರ್ಷದ ಆಯ್ಲಾನ್ ಕುರ್ದಿಯ ಫೋಟೋ ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದು, ಬಾಲಕನ ಮರಣಕ್ಕೆ ಇಡೀ ವಿಶ್ವವೇ ಕಂಬನಿ ಮಿಡಿದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com