ಕಡಲ ಕಿನಾರೆಯಲ್ಲಿ ಬಿದ್ದಿರುವುದು ಮಗುವಲ್ಲ, ಬೊಂಬೆ ಎಂದೇ ಭಾವಿಸಿದ್ದೆ!
ಅನ್ಕಾರಾ: ಟರ್ಕಿಯ ಸಮುದ್ರ ಕಿನಾರೆಯಲ್ಲಿ ಸತ್ತು ಬಿದ್ದಿರುವ ಸಿರಿಯಾದ ಮೂರರ ಹರೆಯದ ಬಾಲಕ ಆಯ್ಲಾನ್ ಕುರ್ದಿಯ ಫೋಟೋ ಸಾಮಾಜಿಕ ತಾಣದಲ್ಲಿ ಹರಿದಾಡುವ ಮುನ್ನ ಕುರ್ದಿಯ ಶವವನ್ನು ನೋಡಿದ್ದು ಇರಾಕಿನ ನಿರಾಶ್ರಿತರು.
ಬೋಡ್ರಮ್ ಕಡಲ ತೀರದಲ್ಲಿ ಅರ್ಧ ನೀರಿನಲ್ಲಿ ಮುಳುಗಿದಂತೆ ಏನೋ ಒಂದು ವಸ್ತು ಅಸ್ಪಷ್ಟವಾಗಿ ಕಾಣುತ್ತಿತ್ತು. ಅದನ್ನು ನೋಡಲೆಂದು ಹತ್ತಿರ ಹೋಗುತ್ತಿದ್ದಂತೆ ಅದು ಬೊಂಬೆಯಾಗಿರಬಹುದು, ಬೊಂಬೆಯಾಗಿರಲಿ ಎಂದು ನನ್ನ ಮನಸ್ಸು ಬಯಸುತ್ತಿತ್ತು. ಹತ್ತಿರ ಹೋಗಿ ನೋಡಿದರೆ, ಅಯ್ಯೋ ದೇವಾ...ಅದೊಂದು ಮಗು! ನಾನು ಗಟ್ಟಿಯಾಗಿ ಕಿರುಚಿದೆ.
ಅದನ್ನು ನೋಡಿ ನಿಲ್ಲುವುದಕ್ಕಿಂತಕ್ಕಿಂತಲೂ, ನೋಡದಂತೆ ದೂರಹೋಗುವುದಕ್ಕಿಂತಲೂ ಈಗಲೇ ಭೂಮಿ ಬಿರಿದು ನಾನು ಸಾಯಬಾರದೆ ಎಂದು ಅನಿಸಿತು. ಟರ್ಕಿಯಲ್ಲಿ ನಮಗೆ ತಿನ್ನಲು ಆಹಾರವಿಲ್ಲ, ನಮ್ಮನ್ನು ಅವರು ಅತ್ಯಂತ ಹೀನಾಯವಾಗಿ ನೋಡಿಕೊಳ್ಳುತ್ತಾರೆ ಎಂದು ನಿರಾಶ್ರಿತನೊಬ್ಬ ಮಾಧ್ಯಮದವರಲ್ಲಿ ಹೇಳಿದ್ದಾರೆ.
ಇದೀಗ ಆಯ್ಲಾನ್ ಕುರ್ದಿಯ ಸಾವನ್ನು ನೋಡಿ ಬೆಚ್ಚಿ ಬಿದ್ದಿರುವ ಟರ್ಕಿಯಲ್ಲಿನ ನಿರಾಶ್ರಿತರು ಯುರೋಪ್‌ಗೆ ವಲಸೆ ಹೋಗಲು ಹೆದರುತ್ತಿದ್ದಾರೆ. ಅದೇ ವೇಳೆ ಗ್ರೀಸ್ ನ್ನು ದಾಟಲು ಯತ್ನಿಸುತ್ತಿರುವ ನಿರಾಶ್ರಿತರ ಮೇವಲೆ ಟರ್ಕಿ ನಿಗಾ ಇರಿಸಿದೆ.
ನಿರಾಶ್ರಿತರನ್ನು ಆಕರ್ಷಿಸುತ್ತಿರುವ ಕಳ್ಳಸಾಗಣೆ ಮಾಡುವವರ ದೋಣಿಯನ್ನು ಟರ್ಕಿ ನಾಶ ಪಡಿಸುತ್ತಿದೆ. ರಾತ್ರಿ ಹೊತ್ತು ಪಹರೆ ನಡೆಸುವುದೂ ಇಲ್ಲೀಗ ಜಾಸ್ತಿಯಾಗಿದೆ.
ಕುರ್ದಿ ಅಂತ್ಯ ಸಂಸ್ಕಾರ: ಸಿರಿಯಾದ ಬಾಲಕ ಆಯ್ಲಾನ್ ಕುರ್ದಿಯ ಅಂತ್ಯ ಸಂಸ್ಕಾರವಿಂದು ಕೊಬಾನಿಯಲ್ಲಿ ನಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ