ನಿರಾಶ್ರಿತರಿಗೆ ಆಸ್ಟ್ರಿಯಾ, ಜರ್ಮನಿ ದಯೆ

ಸಮುದ್ರದ ತಟಕ್ಕೆ ತೇಲಿಬಂದ ಮೂರು ವರ್ಷದ ಅಯ್ಲಾನ್ ನ ಮೃತದೇಹ ವಿಶ್ವಾದ್ಯಂತ ನಿರಾಶ್ರಿತರ ಬಗೆಗಿನ ನಿಲುವನ್ನೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬುಡಾಪೆಸ್ಟ್: ಸಮುದ್ರದ ತಟಕ್ಕೆ ತೇಲಿಬಂದ ಮೂರು ವರ್ಷದ ಅಯ್ಲಾನ್ ನ ಮೃತದೇಹ ವಿಶ್ವಾದ್ಯಂತ ನಿರಾಶ್ರಿತರ ಬಗೆಗಿನ ನಿಲುವನ್ನೇ ಬದಲಿಸಿದ್ದು, ಈಗ ಆಸ್ಟ್ರಿಯಾ ಮತ್ತು ಜರ್ಮನಿಯು ಸಿರಿಯಾದ ವಲಸಿಗರನ್ನು ಸ್ವಾಗತಿಸಲು ಮುಂದಾಗಿದೆ.

ಹಂಗೇರಿ ಸರ್ಕಾರವು ಬುಡಾಪೆಸ್ಟ್‍ನಿಂದ ಆಸ್ಟ್ರಿಯಾಗೆ ವಲಸಿಗರನ್ನು ಕರೆದೊಯ್ಯಲು ಬಸ್ ಸೌಲಭ್ಯ ಕಲ್ಪಿಸಿದ್ದು, ಶುಕ್ರವಾರ ಬರೋಬ್ಬರಿ 4 ಸಾವಿರ ನಿರಾಶ್ರಿತರು ಆಸ್ಟ್ರಿಯಾ ತಲುಪಿದ್ದಾರೆ. ಇದಕ್ಕೂ ಮೊದಲು, ಹಂಗೇರಿಯು ಅಂತಾರಾಷ್ಟ್ರೀಯ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸುವ ಮೂಲಕ ನಿರಾಶ್ರಿತರ ಗಾಯಕ್ಕೆ ಉಪ್ಪು ಸವರಿತು.

ಆದರೆ, ಆಸ್ಟ್ರಿಯಾ ತಲುಪಿಯೇ ತಲುಪುತ್ತೇವೆಂಬ ಛಲದಿಂದ ವಲಸಿಗರು ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ 100 ಮೈಲುಗಳಷ್ಟು ದೂರ ನಡೆಯಲು ಆರಂಭಿಸಿದರು. ಅಷ್ಟರಲ್ಲಿ, ನಿರ್ಧಾರ ಬದಲಿಸಿದ ಹಂಗೇರಿ, ಅವರನ್ನು ಕಳುಹಿಸಲು ಬಸ್ಸುಗಳ ವ್ಯವಸ್ಥೆ ಮಾಡಿತು. ಇನ್ನು ಆಸ್ಟ್ರಿಯಾವು ಯಾವ ರೀತಿ ಪ್ರತಿಕ್ರಿಯಿಸುತ್ತದೋ ಎಂದು ಹೆದರಿದ್ದ ನಿರಾಶ್ರಿತರು, ಆಸ್ಟ್ರಿಯಾ ತೋರಿದ ಕರುಣೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಸ್ವಾಗತ ಕೋರುವ ಫಲಕ: ಹಂಗೇರಿಯ ಗಡಿಯಲ್ಲಿ ಬಸ್ಸುಗಳು ಬಂದು ನಿಲ್ಲುತ್ತಿದ್ದಂತೆ, ನಿರಾಶ್ರಿತರಿಗೆ ದೇವರೇ ಪ್ರತ್ಯಕ್ಷವಾದಂತ ಅನುಭವ. ಕೂಡಲೇ ಬಸ್ಸುಗಳತ್ತ ಧಾವಿಸಿದ ನಿರಾಶ್ರಿತರು ಆಸ್ಟ್ರಿಯಾದತ್ತ ಪ್ರಯಾಣ ಬೆಳೆಸಿದರು. ಆಸ್ಟ್ರಿಯಾದಲ್ಲಿ `ನಿರಾಶ್ರಿತರೇ ಸ್ವಾಗತ' ಎಂಬ ಫಲಕಗಳನ್ನು ಹಿಡಿದು ನಿಂತಿದ್ದ ಪರಿಹಾರ ಕಾರ್ಯಕರ್ತರನ್ನು ಕಂಡಾಗ, ನಿರಾಶ್ರಿತರ ಕಣ್ಣಾಲಿಗಳು ತುಂಬಿಬಂದವು.

ಅಲ್ಲಿ ಅವರಿಗೆ ಆಹಾರ, ಬಿಸಿಯಾದ ಚಹಾ ನೀಡಲಾಯಿತು. ಮರ್ಕೆಲ್‍ಗೆ ಧನ್ಯವಾದದ ಮಹಾಪೂರ: ಇದೇ ವೇಳೆ, ``ಆಶ್ರಯ ಕೇಳಿ ಬಂದವರಿಗೆ ಇಲ್ಲ ಎನ್ನುವುದಿಲ್ಲ'' ಎಂಬ ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್ ಹೇಳಿಕೆಗೆ ನಿರಾಶ್ರಿತರು ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ಅನೇಕರು, `ಮರ್ಕೆಲ್ ಅವರೇ, ನಿಮಗೆ ದೇವರು ಒಳ್ಳೆಯದು ಮಾಡಲಿ' (ಮರ್ಕೆಲ್, ಗಾಡ್ ಬ್ಲೆಸ್ ಯೂ) ಎಂದು ಬರೆದ ಫಲಕಗಳನ್ನು ಪ್ರದರ್ಶಿಸಿದ್ದು ಕಂಡುಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com