
ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಪಾಕಿಸ್ತಾನ ಸರ್ಕಾರದ ಕ್ರೂರತ್ವವನ್ನು ತೋರಿಸುವ ವಿಡಿಯೋ ಬಹಿರಂಗಗೊಂಡ ಒಂದು ದಿನದ ನಂತರ ಅದಕ್ಕೆ ಪಾಕಿಸ್ತಾನ ಖಾರವಾಗಿ ಪ್ರತಿಕ್ರಿಯೆ ನೀಡಿದೆ.
ಪಾಕಿಸ್ತಾನಕ್ಕೆ ಸೇರಿದ ಪ್ರದೇಶದಲ್ಲಿ ಶಾಂತಿ ಕದಡಲು ಭಾರತ ಪ್ರಯತ್ನಿಸುತ್ತಿದ್ದು, ವಿಡಿಯೋದಲ್ಲಿ ತೋರಿಸಿರುವ ಅಂಶ ಸತ್ಯಕ್ಕೆ ದೂರವಾಗಿದೆ. ಭಾರತದ ಮಾಧ್ಯಮಗಳು ಈ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್, ಜಮ್ಮು-ಕಾಶ್ಮೀರದ ಗಡಿ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಪಾಕಿಸ್ತಾನ ಬಯಸುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಧಾರದಂತೆ ಬಗೆಹರಿಯಬೇಕಿದ್ದ ಕಾಶ್ಮೀರ ವಿವಾದ ಇಂದಿಗೂ ಇತ್ಯರ್ಥವಾಗದೆ ಉಳಿದಿದೆ ಎಂದು ಹೇಳಿದ್ದಾರೆ.
ವಿವೇಚನಾರಹಿತ ಶಕ್ತಿ ಮೂಲಕ ಕಾಶ್ಮೀರ ಹೋರಾಟ ನಡೆಸಲು ಭಾರತ ನಿರ್ಧರಿಸಿದೆ. ಇದರಿಂದಾಗಿ ಭಾರತ ಆಕ್ರಮಿತ ಕಾಶ್ಮೀರದಲ್ಲಿ ಕಳೆದ ಎರಡು ದಶಕಗಳಲ್ಲಿ 90 ಸಾವಿರಕ್ಕೂ ಹೆಚ್ಚು ಕಾಶ್ಮೀರಿಗಳು ಭಾರತೀಯ ಯೋಧರಿಂದ ಹತರಾಗಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರು ಭಾಷಣ ಮಾಡುವುದಕ್ಕೆ ಮೊದಲು ಸರ್ತಾಜ್ ಅಜೀಜ್ ಅವರು ಪ್ರತಿಕ್ರಿಯೆ ನೀಡಿರುವುದಾಗಿ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಕಾಶ್ಮೀರ ಜನತೆಯ ನ್ಯಾಯಬದ್ಧ ಹೋರಾಟಕ್ಕೆ ಪಾಕಿಸ್ತಾನ ಯಾವತ್ತೂ ಬೆಂಬಲ ನೀಡುತ್ತದೆ. ಅದೇ ರೀತಿ ಭಾರತದೊಂದಿಗೆ ಯಾವುದೇ ಪೂರ್ವ ನಿಯಮಗಳಿಲ್ಲದೆ ಯಾವುದೇ ಹಂತದಲ್ಲಿಯೂ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂದು ಅಜೀಜ್ ತಿಳಿಸಿದ್ದಾರೆ.
ವಿಡಿಯೋದ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಚೌಧರಿ, ಇದೊಂದು ದಾರಿತಪ್ಪಿಸುವ ಪ್ರಚಾರತಂತ್ರ. ಕಾಶ್ಮೀರಿಗಳ ಬಗ್ಗೆ ಪಾಕಿಸ್ತಾನಕ್ಕೆ ಎಂದಿಗೂ ಕರುಣೆಯಿದೆ. ಕಾಶ್ಮೀರದಲ್ಲಿ ಪಾಕಿಸ್ತಾನದ ಧ್ವಜ ಹೇಗೆ ಹಾರಾಡುತ್ತಿದೆ ಎಂಬುದನ್ನು ಇಡೀ ವಿಶ್ವವೇ ನೋಡುತ್ತಿದೆ. ನಮ್ಮ ಕಡೆಯಿಂದ ಕಾಶ್ಮೀರದ ಜನರಿಗೆ ರಾಜಕೀಯ, ನೈತಿಕ ಮತ್ತು ರಾಯಭಾರಿ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ದ್ವಂದ್ವ ಹೇಳಿಕೆ, ಬೂಟಾಟಿಕೆ ಮತ್ತು ಪಾಕಿಸ್ತಾನ-ಆಕ್ರಮಿತ ಕಾಶ್ಮೀರದ ಜನರು ಸ್ವಾತಂತ್ರ್ಯವನ್ನು ಬಯಸಿ ಪಾಕಿಸ್ತಾನದ ವಿರುದ್ಧ ಮಾತನಾಡುತ್ತಿರುವ ವಿಡಿಯೋ ನಿನ್ನೆ ಬಹಿರಂಗಗೊಂಡಿತ್ತು.
Advertisement