ಮಿಲಾನ್, ಇಟಲಿ: ಬರ್ಲಿನ್‌ನ ಜನನಿಬಿಡ ಕ್ರಿಸ್ ಮಸ್ ಮಾರುಕಟ್ಟೆಯ ಪ್ರದೇಶದಲ್ಲಿ ಏಕಾಏಕಿ ಟ್ರಕ್ ನುಗ್ಗಿಸಿ 12 ಜನರ ಸಾವಿಗೆ ಕಾರಣವಾಗಿದ್ದ ಪ್ರಮುಖ ಶಂಕಿತ ಉಗ್ರನನ್ನು ಹತ್ಯೆ ಮಾಡಿರುವುದಾಗಿ ಇಟಲಿಯ ಆಂತರಿಕ ಸಚಿವಾಲಯ ಶುಕ್ರವಾರ ತಿಳಿಸಿದೆ.
ಟ್ಯುನೀಷಿಯಾ ಶಂಕಿತ ಹಂತಕ 24 ವರ್ಷದ ಅನಿಸ್ ಅಮ್ರಿ ಎಂಬಾತನನ್ನು ಜರ್ಮನ್ ಪೊಲೀಸರು ಹತ್ಯೆ ಗೈದಿದ್ದಾರೆ ಎಂದು ಇಟಲಿಯ ಸುದ್ದಿ ಸಂಸ್ಥೆ ಎಎನ್ಎಸ್ಎ ವರದಿ ಮಾಡಿದೆ.
ಟ್ರಕ್ ದಾಳಿಯಲ್ಲಿ 12ಜನ ದಾರುಣವಾಗಿ ಸಾವಿಗೀಡಾಗಿ 48ಕ್ಕೂ ಹೆಚ್ಚು ಮಂದಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು.
ಐಎಸ್ ಉಗ್ರ ಸಂಘಟನೆ ಈ ಪ್ರಕರಣದ ಹೊಣೆಯನ್ನು ಹೊತ್ತುಕೊಂಡಿತ್ತು. ಹಾಗಾಗಿ ಐಎಸ್ ಉಗ್ರ ಎಂದು ಹೇಳಲಾಗುತ್ತಿರುವ ಈತ ಇತ್ತೀಚೆಗಷ್ಟೇ ಉಗ್ರ ಸಂಘಟನೆಗೆ ಸೇರಿದ್ದ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.