ನವದೆಹಲಿ: ಖ್ಯಾತ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರಿಗೆ ಪಾಕಿಸ್ತಾನ ವೀಸಾ ನೀಡಲು ನಿರಾಕರಿಸಿದೆ ಎಂದು ವರದಿಯಾಗಿದೆ.
ತಮಗೆ ವೀಸಾ ನೀಡಲು ಪಾಕಿಸ್ತಾನ ಹೈಕಮೀಷನ್ ನಿರಾಕರಿಸಿರುವುದು ಬೇಸರ ತಂದಿದೆ ಎಂದು ನಟ ಅನುಪಮ್ ಖೇರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರಾಚಿಯಲ್ಲಿ ಫೆಬ್ರವರಿ 5 ರಂದು ನಡೆಯಲಿರುವ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಭಾರತದಿಂದ 18 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ 17 ಮಂದಿಗೆ ವೀಸಾ ನೀಡಲಾಗಿದ್ದು, ನನಗೆ ವೀಸಾ ನೀಡಲು ಪಾಕ್ ಹೈಕಮೀಷನ್ ನಿರಾಕರಿಸಿದೆ ಎಂದು ಅನುಪಮ್ ಖೇರ್ ಅವರು ಟ್ವೀಟ್ ಮಾಡಿದ್ದಾರೆ.
ಆದರೆ, ಅನುಪಮ್ ಖೇರ್ ಆರೋಪವನ್ನು ತಳ್ಳಿ ಹಾಕಿರುವ ಪಾಕಿಸ್ತಾನದ ಹೈಕಮೀಷನ್, ವೀಸಾ ಕೋರಿ ನಮಗೆ ಅರ್ಜಿಯೇ ಬಂದಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ. ಅರ್ಜಿಯೇ ಬಂದಿಲ್ಲವೆಂದಾಗ ನಿರಾಕರಿಸುವುದು ಎಲ್ಲಿಂದ. ಅನುಪಮ್ ಖೇರ್ ಅವರು ವೀಸಾಕ್ಕಾಗಿ ಅರ್ಜಿ ಸಲ್ಲಿಸಿಲ್ಲ. ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದೆ.