
ಇಸ್ಲಾಮಾಬಾದ್: ಕಾಶ್ಮೀರದಲ್ಲಿರುವ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿ ಎಂದು ಪಾಕಿಸ್ತಾನದ ಸಂಸದೀಯ ಸಮಿತಿಯೊಂದು ಅಲ್ಲಿನ ಸರ್ಕಾರಕ್ಕೆ ಸಲಹೆ ನೀಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗಿರುವ ಆತಂಕವನ್ನು ಹೋಗಲಾಡಿಸಲು ಭಯೋತ್ಪಾದಕ ದಾಳಿ ನಡೆಸುತ್ತಿರುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಗೆ ಸಂಬಂಧಿಸಿದ ರಾಷ್ಟ್ರೀಯ ಸ್ಥಾಯಿ ಸಮಿತಿ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೇ ವೇಳೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಾಲ್ಕು ಪುಟಕಳ ನಿಯಮಾವಳಿ ಪತ್ರವನ್ನೂ ಪಾಕಿಸ್ತಾನಕ್ಕೆ ನೀಡಿದೆ.
ಸ್ಥಾಯಿ ಸಮಿತಿ ನೀಡಿರುವ ನಿಯಮಾವಳಿಗಳಲ್ಲಿ "ಪಾಕಿಸ್ತಾನ ಕಾಶ್ಮೀರದಲ್ಲಿರುವ ಶಸ್ತ್ರಸಜ್ಜಿತ, ನಿಷೇಧಿತ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಬಾರದು ಎಂಬುದೂ ಒಂದಾಗಿದ್ದು, ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುತ್ತಿರುವ ಆರೋಪದಿಂದ ಪಾರಾಗಲು ಕಾಶ್ಮೀರದಲ್ಲಿರುವ ಉಗ್ರ ಸಂಘಟನೆಗಳಿಗೆ ಬೆಂಬಲಿಸದೆ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಲಾಗಿದೆ.
ಭಾರತದೊಂದಿಗೆ ಪಾಕಿಸ್ತಾನ ಉತ್ತಮ ಸಂಬಂಧ ಹೊಂದಬೇಕು, ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲು ಯತ್ನಿಸಬೇಕು ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ನ ಸಂಸದ ಅವೈಸ್ ಅಹ್ಮದ್ ಲಗಾರಿ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ.
Advertisement