ಝಿಕಾ ವೈರಸ್‌: ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯಿಂದ ತುರ್ತು ಪರಿಸ್ಥಿತಿ ಘೋಷಣೆ

ಈ ಹಿಂದೆ ಎಬೊಲಾ ವೈರಸ್ ವಿಶ್ವದ ನಿದ್ದೆಗೆಡಿಸಿತ್ತು. ಈಗ ಜಗತ್ತಿನಾದ್ಯಂತ ಝಿಕಾ ವೈರಸ್ ನ ಭಯ ಆವರಿಸಿದ್ದು, ಆರಂಭದಲ್ಲಿ ಆಫ್ರಿಕಾ, ಆಗ್ನೇಯ ಏಷ್ಯಾ, ಪೆಸಿಫಿಕ್ ...
ಝಿಕಾ ವೈರಸ್‌
ಝಿಕಾ ವೈರಸ್‌
ಜಿನೇವಾ: ಈ ಹಿಂದೆ ಎಬೊಲಾ ವೈರಸ್ ವಿಶ್ವದ ನಿದ್ದೆಗೆಡಿಸಿತ್ತು. ಈಗ ಜಗತ್ತಿನಾದ್ಯಂತ ಝಿಕಾ ವೈರಸ್ ನ ಭಯ ಆವರಿಸಿದ್ದು, ಆರಂಭದಲ್ಲಿ ಆಫ್ರಿಕಾ, ಆಗ್ನೇಯ ಏಷ್ಯಾ, ಪೆಸಿಫಿಕ್ ದ್ವೀಪಗಳಲ್ಲಿ ಕಂಡು ಬಂದಿದ್ದ ಜನನ ದೋಷಕ್ಕೆ ಸಂಬಂಧಿಸಿದ ಈ ವೈರಸ್ ಈಗ ವಿಶ್ವಾದ್ಯಂತ ವ್ಯಾಪಿಸತೊಡಗಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ದಕ್ಷಿಣ ಅಮೆರಿಕದಲ್ಲಿ ಜನನ ನ್ಯೂನತೆಯ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರುತ್ತಿರುವುದಕ್ಕೆ ಮದ್ದೇ ಇಲ್ಲದ ಝಿಕಾ ವೈರಸ್‌ ಕಾರಣವೆಂದು ಬಲವಾಗಿ ಶಂಕಿಸಿರುವ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಈಗಾಗಲೇ ಸಾವಿರಾರು ಜನರು ಝಿಕಾ ವೈರಸ್‌ಗೆ ಬಲಿಯಾಗಿದ್ದಾರೆ. ಅಸಂಖ್ಯಾತ ನವಜಾತ ಶಿಶುಗಳು ಚಿಕ್ಕ ಗಾತ್ರದ ತಲೆಯೊಂದಿಗೆ ಜನ್ಮ ಪಡೆದಿವೆ. ಇದು ಅತ್ಯಂತ ಗಂಭೀರ ಹಾಗೂ ಆತಂಕಕಾರಿ ವಿದ್ಯಮಾನವಾಗಿದೆ ಎಂದು ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆ "ಇದು ಅಂತಾರಾಷ್ಟ್ರೀಯ ಕಳವಳದ ಗಂಭೀರ ಸ್ವಾಸ್ಥ್ಯ ತುರ್ತು ಪರಿಸ್ಥಿತಿಯಾಗಿದೆ' ಎಂದು ಘೋಷಣೆ ಮಾಡಿದೆ.
ಹಿಂದೆ ಎಬೋಲಾ ತಡೆಗಟ್ಟುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪೂರ್ತಿಯಾಗಿ ವಿಫ‌ಲವಾಗಿತ್ತೆಂಬ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿತ್ತು. ಇದೀಗ ಅದೇ ಬಗೆಯ ಆರೋಪಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಗುರಿಯಾಗಿದೆ. ಆ ಕಾರಣಕ್ಕಾಗಿಯೂ ಅದು ಝಿಕಾ ವೈರಸ್‌ ಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎನ್ನಲಾಗಿದೆ.
ಝಿಕಾ ವೈರಸ್‌ಗೆ ಈ ತನಕವೂ ವೈದ್ಯ ವಿಜ್ಞಾನಿಗಳು ಯಾವುದೇ ಔಷಧ, ಚುಚ್ಚುಮದ್ದು, ರೋಗ ನಿದಾನ ಕ್ರಮ ಇತ್ಯಾದಿಗಳನ್ನು ಹುಡುಕಿ ತೆಗೆದಿಲ್ಲ. ಹಾಗಾಗಿ ಜೀಕಾ ವೈರಸ್‌ ಅಬ್ಬರ ದಕ್ಷಿಣ ಅಮೆರಿಕದಲ್ಲಿ ಜೋರಾಗಿ ಸಾಗಿದೆ.
'ಝಿಕಾ ವೈರಸ್‌ ಸೋಂಕಿಗೆ ಗರ್ಭಿಣಿಯರು ತುತ್ತಾದಾಗ ಅವರಿಗೆ ಹುಟ್ಟುವ ಮಕ್ಕಳು ಸಣ್ಣ ಗಾತ್ರದ ತಲೆಯನ್ನು ಹೊಂದುವ, ಮೆದುಳು ನಾಶಕ್ಕೆ ಗುರಿಯಾಗುವ ಮೈಕ್ರೋಸೆಫಾಲಿ ಎಂಬ ಭೀಕರ ರೋಗಕ್ಕೆ ತುತ್ತಾಗುತ್ತಾರೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾಗಿರುವ ಮಾರ್ಗರೆಟ್‌ ಚಾನ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com