ಇಸ್ಲಾಮಾಬಾದ್: 13 ನೇ ಶತಮಾನದಲ್ಲಿ ಭಾರತದ ವಜ್ರಗಣಿಯಿಂದ ಲಭಿಸಿದ್ದ ಅತ್ಯಮೂಲ್ಯ ಕೋಹಿನ್ನೂರ್ ವಜ್ರ ಪಂಜಾಬ್‌ನಿಂದ ಕ್ವೀನ್ ವಿಕ್ಟೋರಿಯಾಳ ವಶಕ್ಕೆ ಸೇರಿ 150 ವರ್ಷಗಳೇ ಕಳೆದಿವೆ. ಟವರ್ ಆಫ್ ಲಂಡನ್ ನಲ್ಲಿ ಇರಿಸಿರುವ ಈ ವಜ್ರ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದೆ.
ಪಾಕಿಸ್ತಾನದ ವಕೀಲ ಜಾವೇದ್ ಇಕ್ಬಾಲ್ ಜಾಫ್ರಿ ಎಂಬವರು ಇದೀಗ ವಜ್ರದ ವಾರಸುದಾರರು ಪಾಕ್ ಎಂಬುದರ ಬಗ್ಗೆ ಲಾಹೋರ್ ಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಕೋರ್ಟ್ ಸೋಮವಾರ ಸ್ವೀಕರಿಸಿದೆ.
ಪಂಜಾಬ್‌ನಿಂದ ಈಸ್ಟ್ ಇಂಡಿಯಾ ಕಂಪನಿ 1849ರಲ್ಲಿ ಈ ವಜ್ರವನ್ನು ಪತ್ತೆ ಹಚ್ಚಿತ್ತು. ಈಗ ಲಂಡನ್ ನಲ್ಲಿರುವ ಕೋಹಿನ್ನೂರ್ ವಜ್ರವನ್ನು ಭಾರತಕ್ಕೆ ತರಲು ಹಲವಾರು ಬಾರಿ ಭಾರತ ಪ್ರಯತ್ನಿಸಿದೆ. ಆದರೆ ಈಗ ಆ ಕೋಹಿನ್ನೂರ್ ವಜ್ರ ನಮ್ಮ ದೇಶಕ್ಕೆ ಸೇರಿದ್ದು ಎಂದು ಪಾಕ್ ವಕೀಲ ಜಾಫ್ರಿ ವಾದಿಸುತ್ತಿದ್ದಾರೆ.
ಭಾರತ -ಪಾಕ್ ವಿಭಜನೆಗೆ ಮುನ್ನ ಪಂಜಾಬ್‌ನ ಪ್ರದೇಶವೊಂದರಲ್ಲಿ ಕೋಹಿನ್ನೂರ್ ಸಿಕ್ಕಿದ್ದು, ಇದೀಗ ಆ ಪ್ರದೇಶ ಪಾಕಿಸ್ತಾನಕ್ಕೆ ಸೇರಿದೆ. ಆದ್ದರಿಂದ ಕೋಹಿನ್ನೂರ್ ವಜ್ರ ಪಾಕಿಸ್ತಾನಕ್ಕೆ ಸೇರಿದ್ದಾಗಿದೆ. ಈ ಕಾರಣದಿಂದಾಗಿ ಬ್ರಿಟನ್ ಆ ವಜ್ರವನ್ನು ಪಾಕ್‌ಗೆ ಮರಳಿಸಬೇಕು ಎಂದು ಜಾಫ್ರಿ ಅರ್ಜಿ ಸಲ್ಲಿಸಿದ್ದಾರೆ.
ಈಸ್ಟ್ ಇಂಡಿಯಾ ಕಂಪನಿ ಆಡಳಿತದಲ್ಲಿದ್ದಾಗ ಪಂಜಾಬ್‌ನ್ನು ಆಳುತ್ತಿದ್ದದ್ದ 14ರ ಹರೆಯದ ರಾಜನಿಂದ ಬ್ರಿಟಿಷರು ಕೋಹಿನ್ನೂರ್‌ನ್ನು ಕಬಳಿಸಿದ್ದು. ಅದನ್ನು ಕ್ವೀನ್ ವಿಕ್ಟೋರಿಯಾಗೆ ಉಡುಗೊರೆಯಾಗಿ ನೀಡಲಾಗಿತ್ತು. ಆದರೆ ಮಹಾರಾಣಿ ಅದನ್ನು ಒಮ್ಮೆಯೂ ಕಿರೀಟದಲ್ಲಿ ಧರಿಸಲಿಲ್ಲ. ಆದ್ದರಿಂದ ಕೋಹಿನ್ನೂರ್ ಯಾರಿಗೆ ಸೇರಿದ್ದು ಎಂಬುದನ್ನು ವ್ಯಕ್ತ ಪಡಿಸಬೇಕು. ಅದೇ ವೇಳೆ ಈ ವಿಷಯವನ್ನು ಪಾಕಿಸ್ತಾನ ಸರ್ಕಾರ ಬ್ರಿಟಿಷ್ ಸರ್ಕಾರದೊಂದಿಗೆ ಚರ್ಚಿಸಬೇಕು ಎಂದು ಜಾಫ್ರಿ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.